ಕವಾಸಕಿ ಝಡ್‌ಎಕ್ಸ್-10ಆರ್ ವಾರ್ಷಿಕ ಆವೃತ್ತಿ ಬಿಡುಗಡೆ
ಕವಾಸಕಿ ಇಂಡಿಯಾವು ದೇಶಕ್ಕೆ ಹೊಸ ಹೊಸ ಆವೃತ್ತಿಗಳನ್ನು ಪರಿಚಯಿಸುವುದರಲ್ಲಿ ತನ್ನ ಬದ್ಧತೆಯನ್ನು ಸದಾ ಪ್ರದರ್ಶಿಸಿದೆ. ಸಂಸ್ಥೆಯು ಭಾರತದಲ್ಲಿ ಝಡ್800, ಝಡ್1000 ಹಾಗೂ ಝಡ್250 ಮಾದರಿಗಳನ್ನು ಈಗಾಗಲೇ ಪರಿಚಯಿಸಿದೆ.
ಈಗ ಸಂಸ್ಥೆಯು ನಿಂಜಾ ಝಡ್‌ಎಕ್ಸ್-10ಆರ್ ಮಾದರಿಯ 30ನೇ ವರ್ಷದ ಸಂಭ್ರಮದ ಅಂಗವಾಗಿ ವಿಶೇಷ ವಾರ್ಷಿಕ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ವಿಶೇಷ ಲೈಮ್ ಗ್ರೀನ್ ಜೊತೆ ಸ್ಟಾರ್‌ಡಸ್ಟ್ ವೈಟ್ ಬಣ್ಣಗಳ ಆಯ್ಕೆಗಳನ್ನು ಪಡೆಯಲಿದೆ.

ಭಾರತದಲ್ಲೂ ಕವಾಸಕಿ ವಿಶೇಷ ಆವೃತ್ತಿ ಲಭ್ಯವಾಗಲಿದೆ ಎಂಬುದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಸಂತಸಕ್ಕೆ ಕಾರಣವಾಗಿದೆ. ಇದು ಓಹ್‌ಲಿನ್ಸ್ ಕವಾಸಕಿ ಎಲೆಕ್ಟ್ರಾನಿಕ್ ಸ್ಟೀರಿಂಗ್ ಡ್ಯಾಂಪರ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಇಂಟೆಲಿಜೆಟ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ.
ಇನ್ನು 30ನೇ ವರ್ಷದ ಸಂಭ್ರಮವನ್ನು ಸೂಚಿಸುವ ಹಿನ್ನೆಲೆಯಲ್ಲಿ ವಿಶೇಷ 30ನೇ ವಾರ್ಷಿಕ ಎಡಿಷನ್ ಬ್ಯಾಡ್ಜ್ ಪಡೆದುಕೊಳ್ಳಲಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು ಸಾಮಾನ್ಯ ಆವೃತ್ತಿಗೆ ಸಮಾನವಾದ 4 ಸಿಲಿಂಡರ್ 998 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ 6 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದ್ದು, 197 ಅಶ್ವಶಕ್ತಿ (112ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಭಾರತದಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ (ಕೆಬಿಯು) ಮುಂಖಾತರ ಕವಾಸಕಿ ನಿಂಜಾ ಝಡ್‌ಎಕ್ಸ್-10ಆರ್ ಮಾರಾಟವಾಗುತ್ತಿದೆ. ಅಲ್ಲದೆ ಇದು 15.70 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ಪುಣೆ) ದುಬಾರಿಯೆನಿಸಿದೆ. ಈಗ ಆಗಮನವಾಗಿರುವ ವಾರ್ಷಿಕ ಎಡಿಷನ್ ಇನ್ನಷ್ಟು 20,000 ರು.ಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications








