ಕವಾಸಕಿ ನಿಂಜಾ ಎಚ್2 ಲಾಂಚ್; ಬೆಲೆ ಸ್ವಲ್ಪ ಹೇಳ್ತೀರಾ ಸ್ವಾಮಿ?
ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಕವಾಸಕಿ ಭಾರತೀಯ ಮಾರುಕಟ್ಟೆಗೆ ಅತಿ ದುಬಾರಿ ನಿಂಜಾ ಎಚ್2 ಹೈಪರ್ ಮೋಟಾರುಸೈಕಲ್ ಗಳನ್ನು ಬಿಡುಗಡೆ ಮಾಡಿದೆ.
ಅಷ್ಟಕ್ಕೂ ಕವಾಸಕಿ ನಿಂಜಾ ಎಚ್2 ಹೈಪರ್ ಬೈಕ್ ನ ಬೆಲೆ ಎಷ್ಟು ಗೊತ್ತೇ? ಹೌದು, ಬರೋಬ್ಬರಿ 29 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದು ಎಕ್ಸ್ ಶೋ ರೂಂ ದೆಹಲಿ ಬೆಲೆಯಾಗಿದೆ. ಇನ್ನು ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತ್ತಾ ಹಾಗೂ ಪುಣೆಯ ಎಕ್ಸ್ ಕ್ಲೂಸಿವ್ ಡೀಲರ್ ಶಿಪ್ ಗಳಲ್ಲಿ ಮಾತ್ರ ಈ ಬೈಕ್ ಮಾರಾಟಕ್ಕೆ ಲಭ್ಯವಾಗಲಿದ್ದು, ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಂಖಾತರ ದೇಶವನ್ನು ತಲುಪಲಿದೆ.

ಅನೇಕ ಸವಾಲುಗಳನ್ನು ಎದುರಿಸಿಕೊಂಡು ನಿಂಜಾ ಎಚ್2 ಹೈಪರ್ ಬೈಕನ್ನು ಕವಾಸಕಿ ದೇಶಕ್ಕೆ ತಂದಿದೆ. ಪೂರ್ಣವಾಗಿಯೂ ವಾಹನ ಪ್ರೇಮಿಗಳ ಬೇಡಿಕೆಯನ್ನು ಈಡೇರಿಸುವುದು ಸಂಸ್ಥೆಯು ಇಂತಹದೊಂದು ನಿರ್ಣಯ ಕೈಗೊಳ್ಳಲು ಪ್ರೇರಣೆ ನೀಡಿದೆ.

ವಿನ್ಯಾಸ
ಕವಾಸಕಿ ನಿಂಜಾ ಎಚ್2 ಹೈಪರ್ ಬೈಕ್ ಮುಂದುಗಡೆ ವಿಶಿಷ್ಟ ವಿನ್ಯಾಸ ಕಾಪಾಡಿಕೊಂಡಿದೆ. ಇದು ಎರಡು ಪೈಲಟ್ ಲ್ಯಾಂಪ್ ಗಳ ನಡುವೆ ಸಿಂಗಲ್ ಎಲ್ ಇಡಿ ಹೆಡ್ ಲೈಟ್ ವಿನ್ಯಾಸವನ್ನು ಪಡೆದುಕೊಂಡಿದೆ. ಹಾಗೆಯೇ ಟರ್ನ್ ಇಂಡಿಕೇಟರ್ ಗಳು ಎರಡು ಮಿರರ್ ಗಳಲ್ಲಿ ಕಂಡುಬರಲಿದೆ. ಇನ್ನು ಗಾಳಿಯನ್ನು ಒಳಕ್ಕೆ ತೆಗೆದುಕೊಳ್ಳುವ ವಿನ್ಯಾಸ ತಂತ್ರ ಅನುಸರಿಸಿರುವುದರಿಂದ ಚಲಿಸುವ ವೇಳೆ ನಿರ್ವಹಣೆಗೆ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಇನ್ನು ಬದಿಯಿಂದಲೂ ಇದೇ ತಂತ್ರವನ್ನು ಕವಾಸಕಿ ಅನುಸರಿಸಿದ್ದು, ಅಂತರಾಷ್ಟ್ರೀಯ ಗುಣಮಟ್ಟದ ಜೊತೆಗೆ ಏರೋಡೈನಾಮಿಕ್ ಫೇರಿಂಗ್ ವ್ಯವಸ್ಥೆಯನ್ನು ನೀವು ಕಾಣಬಹುದಾಗಿದೆ.

ನೋಡಲು ಬೃಹತ್ತಾಕಾರದ ಬೈಕ್ ನಂತಿದ್ದರೂ ರಸ್ತೆಗಿಳಿದರೆ ಇದರ ನಿರ್ವಹಣೆ ತೀರಾ ಸರಳವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಹಿಂದುಗಡೆಯಿಂದಲೂ ಬೈಕ್ ಪ್ರೇಮಿಗೆ ಪರಿಪೂರ್ಣ ನೋಟವನ್ನು ಒದಗಿಸುವ ಕವಾಸಕಿ, ಬೃಹತ್ತಾದ ಡ್ಯುಯಲ್ ಎಕ್ಸಾಸ್ಟ್ ಕೊಳವೆಗಳನ್ನು ಪಡೆದುಕೊಂಡಿದೆ.

ಅಂದ ಹಾಗೆ ಕವಾಸಕಿ ನಿಂಜಾ ಎಚ್2 ಹೈಪರ್ ಮೋಟಾರ್ ಸೈಕಲ್ 998 ಸಿಸಿ ಇನ್ ಲೈನ್ ಫೋರ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಸೂಪರ್ ಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 197 ಅಶ್ವಶಕ್ತಿ (133.5 ತಿರುಗುಬಲ) ಉತ್ಪಾದಿಸಲಿದೆ. ಇದರಲ್ಲಿರುವ ರಾಮ್ ಏರ್ ಸಿಸ್ಟಂನಿಂದ 207 ಅಶ್ವಶಕ್ತಿ ವರೆಗೂ ಹೆಚ್ಚು ಶಕ್ತಿ ಉತ್ಪಾದಿಸಬಹುದಾಗಿದೆ.

ಇನ್ನು ಟ್ರಾಕ್ಷನ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಸ್ಟೀರಿಂಗ್ ಡ್ಯಾಪರಿಂಗ್ ಹಾಗೂ ಕೆಐಬಿಎಸ್ ಎಬಿಎಸ್ ವ್ಯವಸ್ಥೆಗಳು ನೂತನ ಕವಾಸಕಿ ಬೈಕ್ ನಲ್ಲಿರಲಿದೆ.


Click it and Unblock the Notifications








