ಸಿಂಗಲ್ ಸೀಟಿನ ಯಮಹಾ ವೈಝಡ್‌ಎಫ್-ಆರ್15 ಎಸ್ ಬಿಡುಗಡೆ
ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ ಮೋಟಾರು ಇಂಡಿಯಾ, ಸಿಂಗಲ್ ಸೀಟಿನ ವೈಝಡ್‌ಎಫ್-15 ಎಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಬೈಕ್ ಹೊಸ ಗ್ರಾಫಿಕ್ಸ್ ಗಳನ್ನು ಪಡೆಯಲಿದೆ.
ಇಲ್ಲಿ ಸಿಂಗಲ್ ಸೀಟು ಎಂಬುದು ಒಂದೇ ಆಸನ ಎಂಬುದಲ್ಲ. ಬದಲಾಗಿ ವಿಭಜಿತ ಸೀಟಿನ ಬದಲು ಉದ್ದವಾದ ಸೀಟಿನ ಆಯ್ಕೆಯನ್ನು ಕೊಡಲಾಗಿದೆ (ಚಿತ್ರದಲ್ಲಿ ತೋರಿಸಿರುವಂತೆಯೇ).
ಬೆಲೆ ಮಾಹಿತಿ: 1.14 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಗ್ರಾಹಕರ ವಿಮರ್ಶೆಯನ್ನು ಗಮನಕ್ಕೆ ತೆಗೆದುಕೊಂಡ ಬಳಿಕ ಈ 150 ಸಿಸಿ ಕ್ರೀಡಾ ಬೈಕನ್ನು ಬಿಡುಗಡೆ ಮಾಡಲಾಗಿದೆ. ಇದೊಂದು ನೈಜ ಕ್ರೀಡಾ ಬೈಕ್ ಆಗಿರಲಿದ್ದು ಗ್ರಾಹಕರಿಗೆ ಅತ್ಯುನ್ನತ್ತ ಚಾಲನಾ ಅನುಭವ ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.
ಮುಂದಿನಿಂದ ಹಿಂಭಾಗದ ವರೆಗೆ ಒಂದೇ ಸೀಟು ಜೋಡಣೆ ಮಾಡಿರುವುದರಿಂದ ಹಿಂಬದಿ ಸವಾರರಿಗೂ ಆರಾಮದಾಯಕವಾಗಿ ಕುಳಿತುಕೊಳ್ಳಲು ಹೆಚ್ಚು ಅನುಕೂಲವಾಗಲಿದೆ ಎಂಬುದನ್ನು ಸಂಸ್ಥೆ ವಿವರಿಸಿದೆ.
ಇದೇ ವೇಳೆ ಆರ್15 ವಿಭಜಿತ ಸೀಟಿನ ಮಾರಾಟವನ್ನು ಮುಂದುವರಿಸುವುದಾಗಿಯೂ ಯಮಹಾ ತಿಳಿಸಿದೆ. ಸಂಸ್ಥೆಯು ಇತ್ತೀಚೆಗಷ್ಟೇ 321 ಸಿಸಿ ವೈಝಡ್‌ಎಫ್-ಆರ್3 ಕ್ರೀಡಾ ಬೈಕ್ ಬಿಡುಗಡೆ ಮಾಡಿರುವುದನ್ನು ವಾಹನ ಪ್ರೇಮಿಗಳು ನೆನಪಿಸಿಕೊಳ್ಳಬಹುದಾಗಿದೆ.


Click it and Unblock the Notifications