ಕ್ರೀಡಾ ಬೈಕ್ ಗಳನ್ನೇ ಹಿಂದಿಕ್ಕಿತೇ ಎಪ್ರಿಲಿಯಾ 'ಸ್ಪೋರ್ಟ್-ಸ್ಕೂಟರ್ ಬೈಕ್'?
ಈ ಮೊದಲೇ ತಿಳಿಸಿರುವಂತೆಯೇ ಅತ್ಯಂತ ಶಕ್ತಿಶಾಲಿ ಎಪ್ರಿಲಿಯಾ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಲು ಕಾಲ ಹತ್ತಿರವಾಗಿದೆ. ಟೆಸ್ಟಿಂಗ್ ವೇಳೆ ಅನೇಕ ಬಾರಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿರುವ ಇಟಲಿಯ ಐಕಾನಿಕ್ ಎಪ್ರಿಲಿಯಾ ಮುಂಬರುವ ಆಗಸ್ಟ್ ತಿಂಗಳಲ್ಲಿ ಭರ್ಜರಿ ಎಂಟ್ರಿ ಕೊಡುವ ಸಾಧ್ಯತೆಯಿದೆ.
ವೆಸ್ಪಾ ಪ್ರೀಮಿಯಂ ಸ್ಕೂಟರ್ ಬಳಿಕ ಇಟಲಿಯ ಪ್ರತಿಷ್ಠಿತ ಸಂಸ್ಥೆ ಪಿಯಾಜಿಯೊ ಪರಿಚಯಿಸುತ್ತಿರುವ ಮಗದೊಂದು ಐಕಾನಿಕ್ ಬ್ರಾಂಡ್ ಇದಾಗಿದೆ. ಇದರ ಭಾಗವಾಗಿ ಎಪ್ರಿಲಿಯಾ ಎಸ್ ಆರ್150 ದೇಶಕ್ಕೆ ಪ್ರವೇಶಿಸಲಿದೆ.

ನಿಕಟ ಮೂಲಗಳ ಪ್ರಕಾರ ಮಹಾರಾಷ್ಟ್ರದಲ್ಲಿರುವ ಬರಾಮತಿ ಘಟಕದಲ್ಲಿ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿದೆ. ಈ ವೇಳೆಯಲ್ಲಿ ಟೆಸ್ಟಿಂಗ್ ನಡೆಸುತ್ತಿರುವ ರಹಸ್ಯ ಚಿತ್ರಗಳು ಸೋರಿಕೆಯಾಗಿದೆ.

ದೇಶದ ಜೊಚ್ಚಲ 'ಸ್ಪೋರ್ಟ್-ಸ್ಕೂಟರ್ ಬೈಕ್' ಎಂದೆನಿಸಿಕೊಳ್ಳಲಿರುವ ಎಪ್ರಿಲಿಯಾ ಎಸ್‌ಆರ್150 ಸರಿ ಸುಮಾರು ಒಂದು ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ವೆಸ್ಪಾ 150 ಜೊತೆ ಎಂಜಿನ್ ಹಂಚಿಕೊಳ್ಳುತ್ತಿರುವ ಎಪ್ರಿಲಿಯಾ ನೂತನ ಸ್ಕೂಟರ್, ಸ್ಥಳೀಯವಾಗಿ ನಿರ್ಮಿಸುವ 154.4 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಕಾರ್ಬ್ಯೂರೇಟಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 11.5 ಎನ್ ಎಂ ತಿರುಗುಬಲದಲ್ಲಿ 11.55 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಡ್ಯುಯಲ್ ಹೆಡ್ ಲ್ಯಾಂಪ್, ಟ್ವಿನ್ ಪೊಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 14 ಇಂಚುಗಳ ಬ್ಲ್ಯಾಕ್ ಅಲಾಯ್ ವೀಲ್, 220 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 140 ಎಂಎಂ ರಿಯರ್ ಡಿಸ್ಕ್ ಬ್ರೇಕ್, ನಿರ್ವಹಣಾ ಚಕ್ರಗಳು, ಕ್ರೀಡಾತ್ಮಕ ಬಾಡಿ ಗ್ರಾಫಿಕ್ಸ್ ಮುಂತಾದ ವಿಶಿಷ್ಟತೆಗಳು ಕಂಡುಬರಲಿದೆ.

ಸಮಕಾಲೀನ ಯುರೋಪಿಯನ್ ವಿನ್ಯಾಸ ಮೈಗೂಡಿಸಿಕೊಂಡು ಬಂದಿರುವ ನೂತನ ಎಪ್ರಿಲಿಯಾ ಸ್ಕೂಟರ್ ನಲ್ಲಿ ಕ್ರೀಡಾತ್ಮಕ ಹಾಗೂ ಆಕ್ರಮಣಕಾರಿ ಶೈಲಿಗೆ ಆದ್ಯತೆ ಕೊಡಲಾಗಿದೆ.

ಹ್ಯಾಂಡಲ್ ಬಾರ್ ನಲ್ಲಿ ಇಂಡಿಕೇಟರ್, ಮುಂದೆಗಡೆ ಬಹಳ ಕೆಳಗಡೆಯಾಗಿ ಹೆಡ್ ಲೈಟ್ ಹೌಸ್, ಹ್ಯಾಲಗನ್ ಬಲ್ಬ್ ಮತ್ತು ಹಿಂದುಗಡೆಯೂ ಟೈಲ್ ಲೈಟ್ ಗಳನ್ನು ಕೊಡಲಾಗಿದೆ.
Image Source: automobilians


Click it and Unblock the Notifications








