ಭಾರತಕ್ಕೆ ಆಫ್ರಿಕಾ ಟ್ವಿನ್; ಸಿಬಿಆರ್ ಶ್ರೇಣಿಯ ಬೈಕ್ ಗಳು ಸದ್ಯಕ್ಕಿಲ್ಲ!
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ದ್ವಿಚಕ್ರ ವಾಹನ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಸಂಸ್ಥೆಯು, ಸದ್ಯಕ್ಕಂತೂ ನೂತನ ಸಿಬಿಆರ್ ಶ್ರೇಣಿಯ ಬೈಕ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯಾವುದೇ ರೀತಿಯ ಯೋಜನೆಗಳನ್ನು ಹೊಂದಿಲ್ಲ. ಇದರ ಬದಲಾಗಿ 2017ರಲ್ಲಿ ಆಫ್ರಿಕಾ ಟ್ವಿನ್ ಅಡ್ವೆಂಚರ್ ಬೈಕನ್ನು ಪರಿಚಯಿಸಲಿದೆ.
ಸಿಬಿಆರ್250ಆರ್‌ಆರ್ ಮತ್ತು ಸಿಬಿಆರ್300ಆರ್ ಮಾದರಿಗಳ ಭಾರತ ಪ್ರವೇಶಕ್ಕಾಗಿ ಬೈಕ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಹೋಂಡಾ ಸಿಬಿಆರ್ ಯೋಜನೆಗಳನ್ನು ಮುಂದೂಡುವ ಮೂಲಕ ವಾಹನ ಪ್ರೇಮಿಗಳಿಗೆ ನಿರಾಸೆ ತರುವಂತಾಗಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯದ್ವಿಂಧರ್ ಗುಲೆರಿಯಾ ಪ್ರಸಕ್ತ ಸಾಲಿನಲ್ಲಿ ಸಿಬಿಆರ್500 ಸೇರಿದಂತೆ ಇನ್ನಿತರ ಸಿಬಿಆರ್ ಶ್ರೇಣಿಯ ಬೈಕ್ ಗಳನ್ನು ಬಿಡುಗಡೆ ಮಾಡುವ ಯೋಜನೆ ಇಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.

ಇದರ ಬದಲಾಗಿ ತನ್ನೆಲ್ಲ ಶ್ರೇಣಿಯ ಬೈಕ್ ಗಳಲ್ಲಿ ಭಾರತ್ ಸ್ಟೇಜ್ ಎಮಿಷನ್ ಮಟ್ಟವನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗುವುದು. ಅಲ್ಲದೆ ಸಂಸ್ಥೆಯು ಹೊರತಂದಿರುವ ನೂತನ ಆಲ್ ಟೈಮ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆಯನ್ನು ಜೋಡಿಸಲಾಗುವುದು.

ಇನ್ನೊಂದೆಡೆ ಹೋಂಡಾ ಸಿಬಿಆರ್300ಆರ್ ಆಗಲೇ ಇಂಡೋನೇಷ್ಯಾ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಅಲ್ಲದೆ ಸಿಬಿಆರ್250ಆರ್‌ಆರ್ ಇತ್ತೀಚೆಗಷ್ಟೇ ಅನಾವರಣಗೊಂಡಿತ್ತು.

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿರುವ ಆಫ್ರಿಕಾ ಟ್ವಿನ್ ಅಡ್ವೆಂಚರ್ ಮಾದರಿಯನ್ನು ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಸಿದ್ಧಾಂತದ ಮುಖಾಂತರ ಮುಂದಿನ ವರ್ಷದಲ್ಲಿ ಸಂಸ್ಥೆಯು ಬಿಡುಗಡೆಗೊ ಮಾಡಲಿದೆ. ಇದರ ನಿರ್ಮಾಣವನ್ನು ಶೇಕಡಾ 5ರಷ್ಟು ಸ್ಥಳೀಯಗೊಳಿಸಲಿದೆ.

998 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೋಂಡಾ ಆಫ್ರಿಕಾ ಟ್ವಿನ್, 98 ಎನ್ ಎಂ ತಿರುಗುಬಲದಲ್ಲಿ 94 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಆರು ಸ್ಪೀಡ್ ಡಿಸಿಟಿ ಆಯೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಸ್ವಿಚಬಲ್ ಡ್ಯುಯಲ್ ಚಾನಲ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಆನ್ ರೋಡ್ ಡ್ರೈವಿಂಗ್ ವಿಧಗಳು, ಎಲ್ ಇಡಿ ಇಂಡಿಕೇಟರ್, 250 ಎಂಎಂ ಗ್ರೌಂಡ್ ಕ್ಲಿಯರನ್ಸ್ ಇತರ ಪ್ರಮುಖ ವೈಶಿಷ್ಟ್ಯವಾಗಿರಲಿದೆ.


Click it and Unblock the Notifications








