ಕ್ಲಾಸಿಕ್ 500 ಪೆಗಾಸಸ್ ಖರೀದಿಸಿದವರಿಗೆ ಪಂಗನಾಮ ಹಾಕ್ತಾ ರಾಯಲ್ ಎನ್‌ಫೀಲ್ಡ್?
ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಬೈಕ್ ಮಾದರಿಗಳು ಮಾರಾಟಕ್ಕಿವೆ ಎಂದಿದ್ದೆ ತಡ ಮುಗಿಬಿದ್ದು ಹೊಸ ಬೈಕ್ ಖರೀದಿ ಮಾಡಿದ ಗ್ರಾಹಕರು ಇದೀಗ ಯಾಕಾದ್ರು ಆ ಹೊಸ ಬೈಕ್ ಅನ್ನು ಖರೀದಿ ಮಾಡಿವೋ ಎನ್ನುವಂತಹ ಪರಿಸ್ಥಿತಿಗೆ ಸಿಲುಕಿದ್ದಾರೆ. ಇದಕ್ಕೆ ಕಾರಣ ಕಳೆದ ವಾರವಷ್ಟೇ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಬಿಡುಗಡೆಯಾಗಿದ್ದು ಅಂದ್ರೆ ನೀವು ನಂಬಲೇಬೇಕು.

ಹೌದು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ನಡೆ ವಿರುದ್ಧ ಬಹಿರಂಗವಾಗಿಯೋ ಆಕ್ರೋಶ ಹೊರಹಾಕುತ್ತಿರುವ ಕ್ಲಾಸಿಕ್ 500 ಪೆಗಾಸಸ್ ಮಾಲೀಕರು ಹೊಸ ಬೈಕ್ ವಿಚಾರದಲ್ಲಿ ಮೊಸದ ವ್ಯಾಪರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ದುಬಾರಿ ಬೆಲೆ ತೆತ್ತು ಹೊಸ ಬೈಕ್ ಖರೀದಿ ಮಾಡಿದ್ರು ಬೈಕಿನಲ್ಲಿರುವ ಸುರಕ್ಷಾ ಸೌಲಭ್ಯಗಳ ವಿಚಾರದಲ್ಲಿ ಆರ್‌ಇ ವರ್ತನೆಯು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಲಿಮಿಟೆಡ್ ಎಡಿಷನ್ ಮಾದರಿಯಾಗಿರುವ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳು ಜುಲೈ 30ರಂದು ಬಿಡುಗಡೆಯಾಗಿದ್ದು, ದೇಶಾದ್ಯಂತ ಕೇವಲ 250 ಬೈಕ್‌ಗಳನ್ನು ಮಾತ್ರವೇ ಮಾರಾಟ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬೈಕಿನಲ್ಲಿ ನೀಡಲಾಗುವ ಕೆಲವು ಸುರಕ್ಷಾ ಸೌಲಭ್ಯಗಳನ್ನು ಒದಗಿಸುವಲ್ಲಿ ಅಸಡ್ಡೆ ತೊರಿದೆ ಎನ್ನುವುದು ಗ್ರಾಹಕರ ಅಳಲು.

ಇದಕ್ಕೆ ಕಾರಣ, ಕಳೆದ ವಾರವಷ್ಟೇ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ಬಿಡುಗಡೆ ಮಾಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕಿನಲ್ಲಿ ಎಬಿಎಸ್ ಸೇರಿದಂತೆ ಕೆಲವು ಹೊಸ ಸೌಲಭ್ಯಗಳನ್ನು ನೀಡಿದ್ದು, ಅದೇ ದುಬಾರಿ ಬೆಲೆಯ ಕ್ಲಾಸಿಕ್ 500 ಪೆಗಾಸಸ್ ಬೈಕ್‌ಗಳಲ್ಲಿ ಈ ಸೌಲಭ್ಯವನ್ನು ನೀಡಿಲ್ಲ.

ಇದರಿಂದ ಕೆರಳಿದ ಪೆಗಾಸಸ್ ಬೈಕ್ ಮಾಲೀಕರು ಕ್ಲಾಸಿಕ್ ಸಿಗ್ನಲ್ಸ್ 350 ಬೈಕಿನಲ್ಲಿರುವ ಸೌಲಭ್ಯಗಳು ನಮಗೆ ಯಾಕಿಲ್ಲ ಅಂತಾ ಲಿಖಿತ ದೂರು ನೀಡಿದ್ದು, ಎಬಿಎಸ್ ಸೌಲಭ್ಯವನ್ನು ನೀಡಿ ಇಲ್ಲವಾದ್ರೆ ನಿಮ್ಮ ವಾಪಸ್ ಪಡೆದು ಹಣ ನೀಡಿ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Most Read: ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಮರಾಜೊ ಹೊಸ ಎಂಪಿವಿ

ವಾಸ್ತವಾಗಿ ಹೇಳುವುದಾದರೇ, ಪುಣೆ ಎಕ್ಸ್‌ಶೋರಂ ಪ್ರಕಾರ ರೂ. 2.49 ಲಕ್ಷ ಬೆಲೆ ಹೊಂದಿರುವ ಪೆಗಾಸಸ್ ಬೈಕ್‌ಗಳಲ್ಲಿ ಎಬಿಎಸ್ ಇಲ್ಲ. ಅದೇ ಕಳೆದ ವಾರ ಬಿಡುಗಡೆಯಾಗಿರುವ ಕ್ಲಾಸಿಕ್ ಸಿಗ್ನಲ್ಸ್ ಬೈಕ್‌ಗಳು ಪುಣೆ ಎಕ್ಸ್‌ಶೋರಂ ಪ್ರಕಾರ ರೂ. 1.62ಲಕ್ಷ ಬೆಲೆ ಹೊಂದಿದ್ದರು ಅವುಗಳಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಒದಗಿಸಿರುವುದು ಪೆಗಾಸಸ್ ಮಾಲೀಕರಿಗೆ ಅಸಮಾಧಾನ ಉಂಟುಮಾಡಿದೆ.

ಹೀಗಾಗಿಯೇ ನಮ್ಮ ಬೈಕಿಗೂ ಕಡ್ಡಾಯವಾಗಿ ಎಬಿಎಸ್ ಸೌಲಭ್ಯವನ್ನು ಅಳವಡಿಕೆ ಮಾಡಿಕೊಡಿ ಎಂದು ದೊಂಬಾಲು ಬಿದ್ದಿರುವ ಗ್ರಾಹಕರು, ಎಬಿಎಸ್ ಸೌಲಭ್ಯ ಒದಗಿಸಿಕೊಡಲು ಸಾಧ್ಯವಿಲ್ಲವಾದ್ರೆ ನಮ್ಮ ಹಣ ವಾಪಸ್ ನೀಡಿ ಎಂದು ದೂರು ಸಲ್ಲಿಸಿದ್ದಾರೆ.

ಇನ್ನು ಕೆಲವು ಪೆಗಾಸಸ್ ಬೈಕ್ ಮಾಲೀಕರು ದುಬಾರಿ ಬೈಕಿನಲ್ಲಿ ಎಬಿಎಸ್ ಸೌಲಭ್ಯ ಅಳವಡಿಸದ ಹಿನ್ನೆಲೆಯಲ್ಲಿ ವಿನೂತನ ಪ್ರತಿಭಟನೆ ಮುಂದಾಗಿದ್ದು, ಸಮಸ್ಯೆ ಬಗೆಹರಿಸದಿದ್ದರೆ ಹೊಸ ಬೈಕ್‌ಗಳನ್ನು ಮುನ್ಸಿಪಲ್ ಕಾರ್ಪೋರೇಷನ್‌ನಲ್ಲಿ ಕಸ ತುಂಬಿಸಲು ಕೊಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿವಾದದ ಬಗ್ಗೆ ಆರ್‌ಇ ಸ್ಪಷ್ಟನೆ
ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಉತ್ಪನ್ನಗಳ ಗುಣಮಟ್ಟ ಆಧಾರದ ಮೇಲೆ ಬೆಲೆ ನಿಗದಿಪಡಿಸಿ ಸೌಲಭ್ಯವನ್ನು ನೀಡಲಾಗಿದ್ದು, ಪೆಗಾಸಸ್ ಬೈಕ್ ಮಾಲೀಕರ ಪ್ರತಿಭಟನೆಯಲ್ಲಿ ಯಾವುದೇ ಅರ್ಥವಿಲ್ಲ ಎಂದಿದೆ.

ಹಾಗಾದ್ರೆ ರೂ. 2.49 ಲಕ್ಷ ಬೆಲೆ ಕೊಟ್ಟು ಪೆಗಾಸಸ್ ಖರೀದಿ ಮಾಡಿದ ಗ್ರಾಹಕರಿಗೂ ರೂ. 1.62 ಲಕ್ಷ ಕೊಟ್ಟು ಕ್ಲಾಸಿಕ್ ಸಿಗ್ನಲ್ 350 ಖರೀದಿ ಮಾಡುವ ಗ್ರಾಹಕರಿಗೂ ಏನು ವ್ಯತ್ಯಾಸ ಎಂದು ಪ್ರಶ್ನೆ ಉದ್ಭವವಾಗಿದ್ದು, ಮುಂಬರುವ ದಿನಗಳಲ್ಲಿ ಈ ವಿವಾದಕ್ಕೆ ಯಾವ ರೀತಿ ಸ್ಪಂದನೆ ಸಿಗುತ್ತೊ ಗೊತ್ತಿಲ್ಲ.

ಒಟ್ಟಿನಲ್ಲಿ ವಿವಾದದ ಬಗ್ಗೆ ಅಸಡ್ಡೆ ತೊರುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪೆಗಾಸಸ್ ಮಾಲೀಕರ ಬೇಡಿಕೆ ಈಡೇರಿಕೆ ಸಾಧ್ಯವೇ ಇಲ್ಲ ಎನ್ನುವಂತೆ ಹೇಳಿಕೆ ನೀಡುತ್ತಿದ್ದು, ಅವಶ್ಯಕತೆ ಇದ್ದಲ್ಲಿ ಹೆಚ್ಚುವರಿ ಹಣ ಪಾವತಿ ಮಾಡಿ ಎಬಿಎಸ್ ಪಡೆದುಕೊಳ್ಳಿ ಎನ್ನುವಂತಹ ನಡೆ ಪ್ರದರ್ಶನ ಮಾಡುತ್ತಿದೆ.


Click it and Unblock the Notifications