ಬಿಡುಗಡೆಯಾಯ್ತು 2020ರ ಹೊಸ ಯಮಹಾ ಫಾಸಿನೊ 125 ಎಫ್‍ಐ
ಯಮಹಾ ಮೋಟಾರ್ಸ್ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಫಾಸಿನೊ 125 ಎಫ್‍ಐ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಈ ಸ್ಕೂಟರ್ ಯಮಹಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿರುವ ಮೊದಲ 125ಸಿಸಿ ಸ್ಕೂಟರ್ ಆಗಿದೆ.

ಈ ಸ್ಕೂಟರಿನ ಆರಂಭಿಕ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.66,430ಗಳಾಗಿದೆ. ಹೊಸ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿರುವ 113 ಸಿಸಿ ಯಮಹಾ ಫಾಸಿನೊ ಸ್ಕೂಟರಿನ ಬದಲಿಗೆ ಬಿಡುಗಡೆಗೊಳಿಸಲಾಗಿದೆ. ಹೊಸ ಸ್ಕೂಟರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಹೊಸ ಫಾಸಿನೊ 125 ಎಫ್‍ಐ ಸ್ಕೂಟರಿನ ಟಾಪ್ ಎಂಡ್ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.69,930ಗಳಾಗಿದೆ. ಹೊಸ ಯಮಹಾ ಫಾಸಿನೊ 125 ಎಫ್‍ಐ ಸ್ಕೂಟರಿನಲ್ಲಿ 125 ಸಿಸಿಯ ಬ್ಲೂ ಕೋರ್ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 8 ಬಿಹೆಚ್‍ಪಿ ಪವರ್ ಹಾಗೂ 9.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಸ್ಕೂಟರ್ ಮಾರುಕಟ್ಟೆಯಲ್ಲಿರುವ ಸ್ಕೂಟರಿಗಿಂತ 30% ಹೆಚ್ಚು ಪವರ್ ಉತ್ಪಾದಿಸುತ್ತದೆ. ಇದರ ಜೊತೆಗೆ ಹೊಸ ಫಾಸಿನೊ 125 ಸ್ಕೂಟರ್ ಹಳೆಯ ಸ್ಕೂಟರಿಗಿಂತ 16% ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ.

ಯಮಹಾ ಕಂಪನಿಯು ಹೊಸ ಸ್ಕೂಟರಿನಲ್ಲಿರುವ ಚಾಸೀಸ್ ಹಾಗೂ ಫ್ರೇಂಗಳನ್ನು ಅಪ್‍ಡೇಟ್‍ಗೊಳಿಸಿದೆ. ಇದರಿಂದಾಗಿ ಹೊಸ ಸ್ಕೂಟರಿನ ತೂಕವು ಹಳೆಯ ಸ್ಕೂಟರಿಗಿಂತ ಕಡಿಮೆಯಾಗಿದೆ. ಹಳೆಯ ಸ್ಕೂಟರ್ 103 ಕೆ.ಜಿ ತೂಕವನ್ನು ಹೊಂದಿತ್ತು. ಹೊಸ ಸ್ಕೂಟರ್ 99 ಕೆ.ಜಿ ತೂಕವನ್ನು ಹೊಂದಿದೆ.

ಯಮಹಾ ಕಂಪನಿಯು ಹೊಸ ಫಾಸಿನೊ 125 ಸ್ಕೂಟರಿನಲ್ಲಿ ಹಲವಾರು ಹೊಸ ಫೀಚರ್‍ಗಳನ್ನು ಅಳವಡಿಸಿದೆ. ಇವುಗಳಲ್ಲಿ 12 ಇಂಚಿನ ಅಲಾಯ್ ವ್ಹೀಲ್, ಮಲ್ಟಿ ಫಂಕ್ಷನ್ಲ್ ಕೀ, ಯುಎಸ್‍ಬಿ ಚಾರ್ಜಿಂಗ್, ಫೋಲ್ಡೆಬಲ್ ಹುಕ್, ಸೈಡ್ ಸ್ಟಾಂಡ್ ಕಟ್ ಆಫ್ ಸ್ವಿಚ್ ಸೇರಿವೆ.

ಹೊಸ ಸ್ಕೂಟರ್‍ನಲ್ಲಿ ಸಿಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಇದರ ಜೊತೆಗೆ ಟ್ರಾಫಿಕ್ ಮೋಡ್‍ನಲ್ಲಿ ಸ್ಟಾರ್ಟ್ ಸ್ಟಾಪ್ ಸಿಸ್ಟಂ ನೀಡಲಾಗಿದ್ದು, ನಗರದ ಟ್ರಾಫಿಕ್ ದಟ್ಟಣೆಯನ್ನು ನಿಭಾಯಿಸಲು ಅನುಕೂಲವಾಗಲಿದೆ.

ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಯಮಹಾ ಫಾಸಿನೊದಲ್ಲಿ ಹಳೆಯ ಸ್ಕೂಟರ್‍ನಲ್ಲಿದ್ದಂತಹ ವಿನ್ಯಾಸಗಳನ್ನೇ ಮುಂದುವರೆಸಲಾಗಿದೆ. ಆದರೆ ಹೊಸ ಸ್ಕೂಟರಿನಲ್ಲಿರುವ ಕ್ರೋಮ್ ಅಂಶವು ಹೊಸ ಸ್ಕೂಟರ್ ಅನ್ನು ಪ್ರೀಮಿಯಂ ಆಗಿಸುತ್ತದೆ.

ಯಮಹಾ ಕಂಪನಿಯು ಹೊಸ ಫಾಸಿನೊ 125 ಸ್ಕೂಟರ್ ಅನ್ನು ಹಲವಾರು ಬಣ್ಣಗಳಲ್ಲಿ ಮಾರಾಟ ಮಾಡಲಿದೆ. ಆದರೆ ಟಾಪ್ ಎಂಡ್ ಮಾದರಿಗಳನ್ನು ಕೆಂಪು ಹಾಗೂ ಹಳದಿ ಬಣ್ಣದಲ್ಲಿ ಮಾತ್ರ ಮಾರಾಟ ಮಾಡಲಾಗುವುದು.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಯಮಹಾ ಫಾಸಿನೊ 125 ಸ್ಕೂಟರ್ ಜಪಾನ್ ಮೂಲದ ಯಮಹಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ 125ಸಿಸಿ ಸ್ಕೂಟರ್ ಆಗಿದೆ. ಈ ಸ್ಕೂಟರಿನ ನಂತರ ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ಕಂಪನಿಯ ಇನ್ನಿತರ ಸ್ಕೂಟರ್‍ಗಳನ್ನು ಸಹ ಬಿಡುಗಡೆಗೊಳಿಸಲಾಗುವುದು.

ಹೊಸ ಯಮಹಾ ಫಾಸಿನೊ 125 ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಟಿವಿಎಸ್ ಎನ್‍ಟಾರ್ಕ್ 125, ಸುಜುಕಿ ಆಕ್ಸೆಸ್ 125, ಹೋಂಡಾ ಗ್ರೇಜಿಯಾ ಹಾಗೂ ಹೋಂಡಾ ಆಕ್ಟಿವಾ 125 ಸ್ಕೂಟರ್‍ಗಳಿಗೆ ಪೈಪೋಟಿ ನೀಡಲಿದೆ.
Image Courtesy: aiymrc/Instagram


Click it and Unblock the Notifications