ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ವಿಶೇಷತೆ ಏನು?
ಭಾರತೀಯ ಆಟೋ ಉದ್ಯಮದಲ್ಲಿ ಕೇಂದ್ರ ಸಾರಿಗೆ ಇಲಾಖೆಯು ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಹೊಸ ವಾಹನಗಳ ಎಂಜಿನ್ ಮತ್ತು ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆಂದಿಗಿಂತಲೂ ಹೊಸ ವೈಶಿಷ್ಟ್ಯತೆಗಳನ್ನು ನೀವು ನೋಡಬಹುದಾಗಿದೆ. ಈ ಹಿಂದೆ 2017ರ ಏಪ್ರಿಲ್ 1ರಿಂದ ಬಿಎಸ್-3 ಎಂಜಿನ್ ವಾಹನಗಳನ್ನು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರವು ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿತ್ತು.

ಇದೀಗ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೊಸ ನಿಯಮವನ್ನು ಅನುಷ್ಠಾನ ತರಲು ಮುಂದಾಗುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಏಪ್ರಿಲ್ 1, 2019ರಿಂದ ಅನ್ವಯವಾಗುವಂತೆ ಬಿಎಸ್-4 ಎಂಜಿನ್‌ಗಳನ್ನು ಸಹ ನಿಷೇಧಗೊಳಿಸಿ ಸುಧಾರಿತ ಮಾದರಿಯ ಬಿಎಸ್-6 ಎಂಜಿನ್ ಜಾರಿಗೆ ತರಲು ಸಜ್ಜಾಗುತ್ತಿದೆ. ಹೀಗಾಗಿ ಹೊಸ ನಿಯಮಗಳಿಗೆ ಅನುಗುಣವಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಸಹ ಭವಿಷ್ಯದ ವಾಹನಗಳನ್ನು ಬಿಎಸ್-6 ಪ್ರೇರಣೆಯೊಂದಿಗೆ ಅಭಿವೃದ್ಧಿಗೊಳಿಸುತ್ತಿವೆ.

ಹೋಂಡಾ ಇಂಡಿಯಾ ಸಹ ಇದೇ ನಿಟ್ಟಿನಲ್ಲಿ ತನ್ನ ಜನಪ್ರಿಯ ಸ್ಕೂಟರ್ ಮಾದರಿಯಾದ ಆಕ್ಟಿವಾ ಮಾದರಿಗಳನ್ನು ಉನ್ನತಿಕರಣ ಮಾಡುತ್ತಿದ್ದು, ಮುಂಬರುವ 2019ರ ವೇಳೆಗೆ ಬಿಡುಗಡೆಯಾಗಲಿರುವ ಆಕ್ಟಿವಾ 6ಜಿ ಸ್ಕೂಟರ್ ಅನ್ನು ಬಿಎಸ್-6 ಪ್ರೇರಿತ ಫ್ಯೂಲ್ ಇಂಜೆಕ್ಷಡ್ ಎಂಜಿನ್‌ನೊಂದಿಗೆ ಬಿಡುಗಡೆಗಾಗಿ ಸಜ್ಜುಗೊಳಿಸಿದೆ.

ಇದರಿಂದ ಹೊಸ ಸ್ಕೂಟರ್ ಮೈಲೇಜ್ ಮತ್ತು ಎಂಜಿನ್ ಕಾರ್ಯಕ್ಷಮತೆ ಸಾಕಷ್ಟು ಸುಧಾರಣೆಯಾಗಿದ್ದು, ಮೂಲಗಳ ಪ್ರಕಾರ ಹೊಸ ಎಂಜಿನ್ ಜೋಡಣೆಯಿಂದಾಗಿ ಆಕ್ಟಿವಾ 6ಜಿ ಸ್ಕೂಟರ್ ಮೈಲೇಜ್ ಪ್ರಮಾಣವು ಆಕ್ಟಿವಾ 5ಜಿ ಸ್ಕೂಟರ್ ಮೈಲೇಜ್‌ಗಿಂತಲೂ ಶೇ.10ರಷ್ಟು ಹೆಚ್ಚಳವಾಗಲಿದೆ ಎನ್ನಲಾಗಿದೆ.

ಹೊಸ ನಿಯಮ ಜಾರಿ ಉದ್ದೇಶ ಏನು?
ವಿಶ್ವಾದ್ಯಂತ ಈಗಾಗಲೇ ಪರಿಸರ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಬ್ರೇಕ್ ಹಾಕಲು ಯುರೋಪ್‌ನಲ್ಲಿ ಯುರೋ-6, ಇತರೆ ಖಂಡಗಳಲ್ಲಿ ವಿವಿಧ ಮಾದರಿಯ ಗುಣಮಟ್ಟದ ವಾಹನಗಳಿಗೆ ಮಾತ್ರವೇ ಅವಕಾಶವಿದ್ದು, ಇದರ ಭಾಗವಾಗಿ ಭಾರತದಲ್ಲಿ ಬಿಎಸ್-6 ವಾಹನಗಳು ರಸ್ತೆಗಿಳಿಯುತ್ತಿವೆ.
ಈ ಮೂಲಕ ಹೊಸ ನಿಯಮ ಜಾರಿಯಿಂದಾಗಿ ವಾಹನ ಎಂಜಿನ್ ಮಾದರಿಗಳಲ್ಲಿ ಭಾರೀ ಬದಲಾವಣೆಯಾಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿನ್ ಮಾದರಿಗಿಂತಲೂ ಬಿಎಸ್-6 ಹೆಚ್ಚಿನ ಗುಣಮಟ್ಟದೊಂದಿಗೆ ಹೊಗೆ ಉಗುಳುವ ಪ್ರಮಾಣವು ಪರಿಣಾಮಕಾರಿ ತಗ್ಗಲಿದೆ.

ಬೆಲೆ ಏರಿಕೆಯ ಬಿಸಿ..!
ಹೌದು, ಬಿಎಸ್ 4 ವಾಹನಗಳಿಂತಲೂ ಬಿಎಸ್ 6 ಎಂಜಿನ್ ಪ್ರೇರಿತ ವಾಹನಗಳ ಎಂಜಿನ್ ಮಾದರಿಯು ಹೆಚ್ಚಿನ ಗುಣಮಟ್ಟ ಪಡೆದುಕೊಂಡಿರಲಿದ್ದು, ಇದರಿಂದ ಸಹಜವಾಗಿಯೇ ಸ್ಕೂಟರ್ ಮತ್ತು ಬೈಕ್ ಬೆಲೆಯಲ್ಲಿ ರೂ. 08 ಸಾವಿರದಿಂದ ರೂ. 12 ಸಾವಿರ ಹೆಚ್ಚಳವಾದಲ್ಲಿ, ರೂ.5 ಲಕ್ಷಕ್ಕೆ ದೊರೆಯುತ್ತಿರುವ ಕಾರುಗಳು ಮುಂಬರುವ ದಿನಗಳಲ್ಲಿ ರೂ.6 ಲಕ್ಷದಿಂದ ರೂ. 7 ಲಕ್ಷಕ್ಕೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications