ರಿವೋಲ್ಟ್ ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಒಕಿ100 ಎಲೆಕ್ಟ್ರಿಕ್ ಬೈಕ್
ಒಕಿನಾವ ಸಂಸ್ಥೆಯು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮೊದಲ ಬಾರಿಗೆ ಎಲೆಕ್ಟ್ರಿಕ್ ಬೈಕ್ ಮಾರಾಟಕ್ಕೆ ಸಿದ್ದತೆ ನಡೆಸಿದೆ. 2020ರ ಆಟೋ ಎಕ್ಸ್‌ಪೋದಲ್ಲಿ ಒಕಿ100 ಇವಿ ಬೈಕ್ ಅನಾವರಣಗೊಳ್ಳಲಿದ್ದು, ಬೈಕ್ ಬಗೆಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಬಹುನೀರಿಕ್ಷಿತ ಇವಿ ಮಾದರಿಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಆಕರ್ಷಣೆ ಮಾಡುತ್ತಿವೆ. ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಒಕಿನಾವ ಸಂಸ್ಥೆಯು ಮೊದಲ ಬಾರಿಗೆ ಎಲೆಕ್ಟ್ರಿಕ್ ಬೈಕ್ ನಿರ್ಮಾಣಕ್ಕೆ ಕೈಹಾಕಿದ್ದು, ಶೀಘ್ರದಲ್ಲೇ ಹೊಸ ಬೈಕ್ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

2018ರ ದೆಹಲಿ ಆಟೋ ಮೇಳದಲ್ಲಿ ಒಕಿ100 ಬೈಕ್ ಮಾದರಿಯ ಫೋಟೋ ಟೈಪ್ ಪ್ರದರ್ಶನಗೊಳಿಸಿದ್ದ ಒಕಿನವಾ ಸಂಸ್ಥೆಯು ಇದೀಗ ಹೊಸ ಬೈಕಿನ ಉತ್ಪಾದನಾ ಆವೃತ್ತಿಯನ್ನು ಪ್ರದರ್ಶನಕ್ಕೆ ಸಜ್ಜಾಗಿದ್ದು, ರಿವೋಲ್ಟ್ ಬೈಕಿಗೆ ಇದು ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ಬೈಕಿನ ಬ್ಯಾಟರಿ ಪ್ಯಾಕ್ ಕುರಿತಂತೆ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಹೊಸ ಬೈಕ್ ರಿವೋಲ್ಟ್ ಬೈಕ್ ಮಾದರಿಯಲ್ಲೇ ಬೆಲೆ, ಬ್ಯಾಟರಿ ಪ್ಯಾಕ್ ಪಡೆಯುವ ಸಾಧ್ಯತೆಗಳಿದ್ದು, ಪ್ರತಿ ಗಂಟೆಗೆ 100 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ 150ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿವೆ.

ಇದು ಸಾಮಾನ್ಯ ಮಾದರಿಯ 125 ಸಿಸಿ ಬೈಕ್ ಮಾದರಿಗೆ ಸಮನಾಗಿದ್ದು, ರಿವೋಲ್ಟ್ ಆರ್‌ವಿ400 ಬೈಕ್ ಮಾದರಿಗಿಂತಲೂ ಹೆಚ್ಚಿನ ಪ್ರೀಮಿಯಂ ಸೌಲಭ್ಯಗಳನ್ನು ಒಕಿ100 ಬೈಕಿನಲ್ಲಿವೆ. ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ತೆಗೆದುಹಾಕಬಹುದಾದ ಬ್ಯಾಟರಿ ಪ್ಯಾಕ್ ಸೌಲಭ್ಯವಿದ್ದು, ದೂರದ ಪ್ರಯಾಣದ ವೇಳೆ ಇದು ಸಾಕಷ್ಟು ಸಹಕಾರಿಯಾಗಿದ್ದು, ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರ ಜೂನ್ ಅಥವಾ ಜುಲೈ ಹೊತ್ತಿಗೆ ಖರೀದಿಗೆ ಲಭ್ಯವಿರಲಿದೆ.

ಬೈಕ್ ಬೆಲೆ(ಅಂದಾಜು)
ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಒಕಿ100 ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1 ಲಕ್ಷ ರೂ.1.15 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ರಿವೋಲ್ಟ್ ಆರ್‌ವಿ400 ಬೈಕ್ ಮಾದರಿಗೆ ಮಾತ್ರವಲ್ಲದೇ ಟ್ರಾಕ್ ಟಿ6ಎಕ್ಸ್ ಎಲೆಕ್ಟ್ರಿಕ್ ಬೈಕಿಗೂ ಪೈಪೋಟಿ ನೀಡಲಿದೆ.

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಒಕಿನಾವ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಹೊಸ ಯೋಜನೆಗಳಿಗಾಗಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆಗೆ ಮುಂದಾಗಿದೆ.

ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಮಾರಾಟದ ಮೇಲೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದತ್ತ ಮುಖ ಮಾಡುತ್ತಿವೆ. ಕೇಂದ್ರ ಸರ್ಕಾರವು ಸಹ ಈ ನಿಟ್ಟಿನಲ್ಲಿ ಇವಿ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಫೇಮ್ 2 ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಭಾಗವಾಗಿ ಒಕಿನಾವ ಸಂಸ್ಥೆಯು ತನ್ನ ಉದ್ಯಮ ಕ್ಷೇತ್ರದ ವಿಸ್ತರಣೆ ಮಾಡುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಒಕಿನಾವ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ. ಹೀಗಾಗಿ ಪ್ರಸ್ತುತ ಕಾರ್ಯಚರಣೆಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದು, ಇದಕ್ಕಾಗಿ ಬರೋಬ್ಬರಿ ರೂ.200 ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

2015ರಲ್ಲಿ ಮೊದಲ ಬಾರಿಗೆ ಆರಂಭಗೊಂಡ ಒಕಿನವಾ ಸಂಸ್ಥೆಯು ಸದ್ಯ ರಾಜಸ್ತಾನದ ಆಳ್ವಾರ್‌ನಲ್ಲಿ ಒಂದು ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕವನ್ನು ಹೊಂದಿದ್ದು, ಈ ಘಟಕದಲ್ಲಿ ವಾರ್ಷಿಕವಾಗಿ 5 ಲಕ್ಷ ಸ್ಕೂಟರ್ ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡುತ್ತಿದೆ.


Click it and Unblock the Notifications








