ಬಿಡುಗಡೆಯಾಯ್ತು ಟಿವಿಎಸ್ ಎನ್ಟಾರ್ಕ್ 125 ರೇಸ್ ಎಡಿಷನ್
ಟಿವಿಎಸ್ ಮೋಟಾರ್ ಕಂಪನಿ, ಎನ್‍ಟಾರ್ಕ್ 125 ರೇಸ್ ಎಡಿಷನ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಟಿವಿಎಸ್ ಎನ್ಟಾರ್ಕ್ 125 ರೇಸ್ ಎಡಿಷನ್ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.62,995ಗಳಾಗಿದೆ. ಹೊಸ ಎನ್‍ಟಾರ್ಕ್, ಸ್ಟ್ಯಾಂಡರ್ಡ್ ಮಾದರಿಯ ಎನ್‍ಟಾರ್ಕ್‍ಗಿಂತ ಹಲವಾರು ಕಾಸ್ಮೆಟಿಕ್ ಹಾಗೂ ಫೀಚರ್ ಅಪ್‌ಡೇಟ್‌ಗಳನ್ನು ಹೊಂದಿದೆ.

ಹೊಸ ಎನ್‌ಟಾರ್ಕ್ 125 ರೇಸ್ ಎಡಿಷನ್ ಸ್ಕೂಟರಿನ ಪ್ರಮುಖವಾದ ಅಂಶಗಳೆಂದರೆ, ಹೊಸ ಬಣ್ಣ, ಹೆಚ್ಚು ಸ್ಪೋರ್ಟಿ ಹಾಗೂ ಅಗ್ರೇಸಿವ್ ಆಗಿ ವಿನ್ಯಾಸಗೊಳಿಸಲಾದ ಬಾಡಿ ಗ್ರಾಫಿಕ್ಸ್. ಹೊಸ ಟಿವಿಎಸ್ ಎನ್ಟಾರ್ಕ್ 125 ರೇಸ್ ಎಡಿಷನ್ ವೈಬ್ರೆಂಟ್ ಚೆಕ್ಕರ್ಡ್ ಫ್ಲ್ಯಾಗ್ ಗ್ರಾಫಿಕ್ಸ್ ಹೊಂದಿದೆ. ಹೊಸ ಸ್ಕೂಟರ್ ಅನ್ನು ಮ್ಯಾಟ್ ಬ್ಲ್ಯಾಕ್ / ಮೆಟಾಲಿಕ್ ಬ್ಲ್ಯಾಕ್ ಹಾಗೂ ಮೆಟಾಲಿಕ್ ರೆಡ್‌ನ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಹೊಸ ಟಿವಿಎಸ್ ಎನ್‌ಟಾರ್ಕ್ 125, ಕಂಪನಿಯ ರೇಸ್ ಎಡಿಷನ್ ಲಾಂಛನ ಹೊಂದಿರಲಿದೆ. ಇದರ ಜೊತೆಗೆ ಟಿವಿಎಸ್ ರೇಸಿಂಗ್ ಡೆಕಲ್‌ಗಳಿರಲಿವೆ. ಇವುಗಳು ಹೊಸ ಸ್ಕೂಟರ್‌ನಲ್ಲಿ ಟಿವಿಎಸ್‌ನ ರೇಸಿಂಗ್ ಪೆಡಿಗ್ರಿಯನ್ನು ತೋರಿಸುತ್ತವೆ.

ಹೊಸ ಬಣ್ಣ ಹಾಗೂ ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಜೊತೆಗೆ, ಹೊಸ ರೇಸ್ ಎಡಿಷನ್‍ನ ಎನ್‌ಟಾರ್ಕ್ 125 ಸ್ಕೂಟರ್, ಸಂಪೂರ್ಣವಾಗಿ ಹೊಸದಾದ ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಮುಂಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದೆ.

ಈ ಬದಲಾವಣೆಗಳು ಹಾಗೂ ನವೀಕರಣಗಳ ಹೊರತಾಗಿ, ಸ್ಕೂಟರಿನ ಕೆಳ ಭಾಗದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಎಲ್ಲಾ ಫೀಚರ್‍ಗಳನ್ನು ಈ ಹೊಸ ಸ್ಕೂಟರ್ ಹೊಂದಿದೆ. ಇದರಲ್ಲಿ ಸ್ಕೂಟರ್ ಹಾಗೂ ಸವಾರನ ಸ್ಮಾರ್ಟ್‌ಫೋನ್ ನಡುವಿನ ಬ್ಲೂಟೂತ್ ಕನೆಕ್ಟಿವಿಟಿಯೂ ಸೇರಿದೆ.

ಸ್ಮಾರ್ಟ್‌ಕನೆಕ್ಟ್ ಎಂದು ಕರೆಯಲಾಗುವ ಈ ಬ್ಲೂಟೂತ್ ಕನೆಕ್ಟಿವಿಟಿ, ಸ್ಕೂಟರ್‌ನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಕಾಲ್, ಮೆಸೇಜ್ ಹಾಗೂ ಇನ್ನಿತರ ನೋಟಿಫಿಕೇಶನ್‍ಗಳನ್ನು ತೋರಿಸುತ್ತದೆ. ಅಪ್ಲಿಕೇಶನ್ ಬಳಸಿ ಸ್ಕೂಟರ್ ಸವಾರನು ತಮ್ಮ ಸ್ಮಾರ್ಟ್‌ಫೋನ್ ಅನ್ನು ಸ್ಕೂಟರಿಗೆ ಜೋಡಿಸಬಹುದು.

ಈ ಆಪ್ ಹೆಚ್ಚುವರಿಯಾದ ಕನೆಕ್ಟೆಡ್ ಫೀಚರ್ಸ್ ಹಾಗೂ ಫಂಕ್ಷನಾಲಿಟಿಗಳನ್ನು ನೀಡಲಿದೆ. ಮೆಕಾನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ, ಟಿವಿಎಸ್ ಎನ್ಟಾರ್ಕ್ 125 ರೇಸ್ ಎಡಿಷನ್ ಸ್ಕೂಟರಿನಲ್ಲಿ 124 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 7,500 ಆರ್‍ಪಿಎಂನಲ್ಲಿ 9.4 ಬಿಹೆಚ್‍ಪಿ ಪವರ್ ಹಾಗೂ 5,500 ಆರ್‍ಪಿಎಂನಲ್ಲಿ 10.5 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರಿನಲ್ಲಿ ಬಿಎಸ್ 4 ಎಂಜಿನ್ ಅಳವಡಿಸಲಾಗಿದೆ. 2020ರ ಆರಂಭದಲ್ಲಿ ಹೊಸ ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಬಿಎಸ್6 ಎಂಜಿನ್‍ಗೆ ಅಪ್‍ಡೇಟ್‍ಗೊಳಿಸಲಾಗುವುದು.

ಟಿವಿಎಸ್ ಮೋಟಾರ್ ಕಂಪನಿಯ ಪ್ರಯಾಣಿಕ ಮೋಟಾರ್‌ಸೈಕಲ್, ಸ್ಕೂಟರ್ ಹಾಗೂ ಕಾರ್ಪೊರೇಟ್ ಬ್ರಾಂಡ್‌ನ ಮಾರ್ಕೆಟಿಂಗ್ ಉಪಾಧ್ಯಕ್ಷರಾದ ಅನಿರುದ್ಧಾ ಹಲ್ದಾರ್‍ರವರು ಮಾತನಾಡಿ, ಬಿಡುಗಡೆಯಾದಾಗಿನಿಂದ ಟಿವಿಎಸ್ ಎನ್‌ಟಾರ್ಕ್ 125 ಜನರ ನೆಚ್ಚಿನ ಸ್ಕೂಟರ್ ಆಗಿದೆ.

ಜನರು ಈ ಸ್ಕೂಟರಿನ ಮೇಲಿಟ್ಟಿರುವ ಪ್ರೀತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಬಹುದು. ಗಮನಾರ್ಹ ನೋಟ, ಟಿವಿಎಸ್ ಸ್ಮಾರ್ಟ್‌ಕನೆಕ್ಟ್ ಫೀಚರ್‍ನ ಹೊರತಾಗಿ, ಟಿವಿಎಸ್ ಎನ್‌ಟಾರ್ಕ್ 125 ಪರ್ಫಾಮೆನ್ಸ್ ನಿಂದಾಗಿ ಜನರ ಗಮನ ಸೆಳೆದಿದೆ.

ಸ್ಕೂಟರ್ ಅನ್ನು 37 ವರ್ಷಗಳ ಟಿವಿಎಸ್ ರೇಸಿಂಗ್ ಪರಂಪರೆಯ ಮೇಲೆ ನಿರ್ಮಿಸಲಾಗಿದೆ. ಈ ಸಂಭ್ರಮವನ್ನು ಆಚರಿಸಲು ಈ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಇದುವರೆಗೂ ಸುಮಾರು 4 ಲಕ್ಷ ಯುವ ಗ್ರಾಹಕರು ಎನ್‍ಟಾರ್ಕ್ ಸ್ಕೂಟರ್ ಅನ್ನು ಖರೀದಿಸಿದ್ದಾರೆ.

ಈ ಹೊಸ ಸ್ಕೂಟರಿನ ಬಿಡುಗಡೆಯೊಂದಿಗೆ, ನಾವು ನಮ್ಮ ಗ್ರಾಹಕರನ್ನು ಮತ್ತಷ್ಟು ಸೆಳೆಯಲಿದ್ದೇವೆ. ಆಯ್ದ ನಗರಗಳಲ್ಲಿ ಟಿವಿಎಸ್ ಎನ್ಟಾರ್ಕ್ 125 ರೇಸ್ ಎಡಿಷನ್ ಬೈಕಿನ ಮಾರಾಟಕ್ಕಾಗಿ ಆನ್‌ಲೈನ್ ಪ್ರಿ ಬುಕಿಂಗ್ ತೆರೆಯಲಾಗುವುದು ಎಂದು ಹೇಳಿದರು.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಟಿವಿಎಸ್ ಎನ್‍ಟಾರ್ಕ್ 125 ದೇಶಿಯ ಮಾರುಕಟ್ಟೆಯಲ್ಲಿನ 125ಸಿಸಿ ಸ್ಕೂಟರ್ ಸೆಗ್‍ಮೆಂಟಿನಲ್ಲಿರುವ ಜನಪ್ರಿಯ ಕೊಡುಗೆಯಾಗಿದೆ. ರೇಸ್ ಎಡಿಷನ್ ಬಿಡುಗಡೆಯೊಂದಿಗೆ ಟಿವಿಎಸ್ ಕಂಪನಿಯು ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ ಉದ್ದೇಶವನ್ನು ಹೊಂದಿದೆ. ಅದರಲ್ಲೂ ಯುವ ಜನರನ್ನು ಎನ್‍ಟಾರ್ಕ್ 125 ಸ್ಕೂಟರಿನತ್ತ ಸೆಳೆಯುವ ಉದ್ದೇಶವನ್ನು ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಟಿವಿಎಸ್ ಎನ್ಟಾರ್ಕ್ 125 ರೇಸ್ ಎಡಿಷನ್ ಸುಜುಕಿ ಆಕ್ಸೆಸ್ 125, ಹೀರೋ ಮ್ಯಾಸ್ಟ್ರೋ ಎಡ್ಜ್ 125 ಹಾಗೂ ಹೋಂಡಾ ಆಕ್ಟಿವಾ 125 ಸ್ಕೂಟರ್‍ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications