ಪ್ಯಾನಿಗಲ್ ಬೈಕಿನ ಬುಕ್ಕಿಂಗ್ ಖಚಿತಪಡಿಸಿದ ಡುಕಾಟಿ
ಡುಕಾಟಿ ಇಂಡಿಯಾ, ತನ್ನ ಪ್ರಮುಖ ಬೈಕ್ ಆದ ಡುಕಾಟಿ ಪ್ಯಾನಿಗಲ್ ವಿ4 ಆರ್ ಬೈಕಿನ ಎರಡು ಬುಕ್ಕಿಂಗ್‌ಗಳನ್ನು ದೃಢಪಡಿಸಿದೆ. ಪ್ಯಾನಿಗಲ್ ವಿ4 ಆರ್ ನ ಐದು ಬೈಕುಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡಲಾಗುವುದು. ಈ ಪೈಕಿ 2 ಬೈಕುಗಳನ್ನು ದೆಹಲಿ ಎನ್‌ಸಿಆರ್‌ನಲ್ಲಿರುವ ಡುಕಾಟಿ ಇಂಡಿಯಾದ ಡೀಲರ್ ನಾರ್ತ್ ಸ್ಟಾರ್ ಆಟೋಮೋಟಿವ್‍ನಲ್ಲಿ ಬುಕ್ ಮಾಡಲಾಗಿದ್ದು, ಈ ವರ್ಷದ ಆಗಸ್ಟ್‌ನಲ್ಲಿ ಡೆಲಿವರಿ ಮಾಡಲಾಗುವುದು.

ಹೊಸ ಪ್ಯಾನಿಗಲ್ ವಿ4 ಆರ್ ಇದುವರೆಗೆ ತಯಾರಾದ ಅತ್ಯಂತ ಬಲಶಾಲಿಯಾದ ರಸ್ತೆಯಾಧಾರಿತ ಬೈಕ್ ಆಗಿದೆ. ಪ್ಯಾನಿಗಲ್ ವಿ4 ಆರ್ ಬೈಕ್, 998ಸಿಸಿ ವಿ4 ಡೆಸ್ಮೋಸೆಡಿಸಿ ಸ್ಟ್ರಾಡೇಲ್ ಆರ್ ಎಂಜಿನ್ ಹೊಂದಿದೆ. ಈ ಎಂಜಿನ್ 221ಬಿಹೆಚ್‍ಪಿ ಹಾಗೂ 111 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಪ್ಯಾನಿಗಲ್ ವಿ4 ಆರ್ ಬೈಕ್ 172 ಕೆ.ಜಿ ತೂಕವನ್ನು ಹೊಂದಿದೆ.

ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೆರ್ಗಿ ಕ್ಯಾನೋವಾಸ್‍ರವರು ಮಾತನಾಡಿ, ಪ್ಯಾನಿಗಲ್ ವಿ4 ಆರ್ ಒಂದು ಅತ್ಯುತ್ತಮ ಡುಕಾಟಿ ನಿಖರತೆ ಹಾಗೂ ರೇಸಿಂಗ್ ಚಿತ್ರಣವಾಗಿದ್ದು ಅದು ಮೋಟೋ ಜಿಪಿ ಬೈಕ್‌ನಂತಹ ಪರ್ಫಾಮೆನ್ಸ್ ನೀಡುತ್ತದೆ. ಭಾರತದಲ್ಲಿ ಆ ಅನುಭವವನ್ನು ತರುವುದು ಡುಕಾಟಿಗೆ ವಿಶೇಷವಾಗಿದೆ. ನಾವು ಶೀಘ್ರದಲ್ಲೇ ಭಾರತೀಯ ರೇಸ್‌ಟ್ರಾಕ್‌ಗಳಲ್ಲಿ ಪ್ಯಾನಿಗಲ್ ವಿ4 ಆರ್ ಬೈಕ್ ಅನ್ನು ಕಾಣಲು ಬಯಸಿದ್ದೇವೆ.

ಪ್ಯಾನಿಗಲ್ ವಿ4 ಆರ್ ಬೈಕಿಗೆ ಸಾಟಿಯಾಗಿ ಬೇರೆ ಬೈಕ್ ಇಲ್ಲ. ಈ ಬೈಕ್ ದೇಶದಲ್ಲಿನ ಸೂಪರ್‌ಬೈಕ್ ಉತ್ಸಾಹಿಗಳನ್ನು ತನ್ನತ್ತ ಸೆಳೆದು, ಅದ್ಭುತವಾದ ರೇಸಿಂಗ್ ಹಾಗೂ ರೈಡಿಂಗ್ ಅನುಭವವನ್ನು ನೀಡುತ್ತದೆ ಎಂದು ನಾವು ನಂಬಿದ್ದೇವೆ. ಭಾರತದಲ್ಲಿ ನಡೆಯಲಿರುವ ಸೂಪರ್‌ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಡುಕಾಟಿ ವಿ4 ಆರ್ ಬೈಕ್ ಭಾಗವಹಿಸಿ ಪ್ರಬಲ ಸ್ಪರ್ಧೆಯನ್ನು ನೀಡುವುದನ್ನು ನಾವೂ ಸಹ ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ಪ್ಯಾನಿಗಲ್ ವಿ4 ಆರ್ ಬೈಕ್, ಮೋಟೊ ಜಿಪಿಯಲ್ಲಿರುವಂತಹ ಹೊಸ ಫೇರಿಂಗ್ ಅನ್ನು ಒಳಗೊಂಡಿದೆ. ಇದು ಓಹ್ಲಿನ್ ಸಸ್ಪೆಂಷನ್‍ನಲ್ಲಿರುವ ರೇಸ್ ಗ್ರೇಡ್ ಮೆಕಾನಿಕಲ್ ಅಡ್ಜಸ್ಟ್ ಮೆಂಟ್ ಸಹ ಹೊಂದಿದೆ. ಇದರ ಜೊತೆಗೆ ಅಡ್ಜಸ್ಟಬಲ್ ಆದ, 4 ಪೊಸಿಷನ್ ಆಕ್ಸಲ್‍ನ ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಅನ್ನು ಸಹ ಹೊಂದಿದೆ. ಡುಕಾಟಿ ಕಾರ್ಸ್ ನಿಗದಿಪಡಿಸಿರುವ ಸ್ಟಿಫ್‍ನೆಸ್ ಟಾರ್ಗೆಟ್‍ಗಳನ್ನು ಮುಟ್ಟಲು ಫ್ರಂಟ್ ಫ್ರೇಮ್ ಅನ್ನು ಮಾಡಿಫೈಗೊಳಿಸಲಾಗಿದೆ.

ನಾರ್ತ್ ಸ್ಟಾರ್ ಆಟೋಮೋಟಿವ್‌ನ ಡೀಲರ್ ಪಾರ್ಟ್‍ನರ್ ಆದ ಸಂಜೀವ್ ಒಬೆರಾಯ್‍ರವರು ಮಾತನಾಡಿ, ಪ್ಯಾನಿಗಲ್ ವಿ4 ಆರ್ ನ ಮೊದಲ ಎರಡು ಯೂನಿಟ್‍ಗಳನ್ನು ಈಗಾಗಲೇ ಬುಕ್ ಮಾಡಲಾಗಿದೆ. ಅವುಗಳನ್ನು ಟ್ರ್ಯಾಕ್‌ನಲ್ಲಿರುವ ಡುಕಾಟಿಸ್ಟಿಸ್‌ಗೆ ತಲುಪಿಸಲಾಗುವುದು. ಇದನ್ನು ಮಾಡುತ್ತಿರುವುದಕ್ಕೆ ನಮಗೆ ಹೆಮ್ಮೆ ಹಾಗೂ ಸಂತೋಷವಾಗುತ್ತದೆ. ನಮಗೆ ರೇಸ್ ಅನ್ನು ಗೌರವಿಸುವ ಸಾಮರ್ಥ್ಯವಿದೆ.

ಮೊದಲಿನಿಂದಲೂ ರೇಸಿಂಗ್ ಅನ್ನು ಬೆಂಬಲಿಸುತ್ತಾ ಬಂದಿದ್ದೇವೆ. ನಮ್ಮ ಪೋರ್ಟ್ ಫೋಲಿಯೊವನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸುತ್ತೇವೆ. ನಮ್ಮ ಎಲ್ಲಾ ಹೊಸ ಹಾಗೂ ಹಳೆಯ ಗ್ರಾಹಕರಿಗೆ ಉತ್ತಮ ಡುಕಾಟಿ ಅನುಭವವನ್ನು ಒದಗಿಸುತ್ತೇವೆ ಎಂದು ಹೇಳಿದರು.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಪ್ಯಾನಿಗಲ್ ವಿ4 ಆರ್ ತುಂಬಾ ದುಬಾರಿ ಬೆಲೆಯನ್ನು ಹೊಂದಿದೆ. ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.51,80,000ಗಳಾಗಿದೆ. ಭಾರತದಲ್ಲಿ ಕೇವಲ 5 ಬೈಕುಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಹೆಚ್ಚು ಹಣವುಳ್ಳ ಬೈಕ್ ಉತ್ಸಾಹಿಗಳಿಗೆ ವಿ4 ಆರ್ ಅದ್ಭುತವಾದ ಸಂಗ್ರಹವಾಗಿದೆ. ಇದುವರೆಗೂ ಉತ್ಪಾದಿಸಲಾದ ಅತ್ಯಂತ ಬಲಶಾಲಿ ರಸ್ತೆಯಾಧಾರಿತ ಬೈಕ್ ಆಗಿದೆ.


Click it and Unblock the Notifications








