ಆಟೋ ಎಕ್ಸ್‌ಪೋ 2020: ಹಾಕ್ ಎಲೆಕ್ಟ್ರಿಕ್ ಬೈಕ್ ಅನಾವರಣಗೊಳಿಸಿದ ಇವೊಲೆಟ್
ಇವೊಲೆಟ್ ಇಂಡಿಯಾ ಗುರುಗ್ರಾಮದಲ್ಲಿರುವ ಭಾರತೀಯ ಮೂಲದ ಕಂಪನಿಯಾಗಿದೆ. ಈ ಕಂಪನಿಯು ಪ್ರಮುಖವಾಗಿ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ದೆಹಲಿಯಲ್ಲಿ ಈಗ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ಇವೊಲೆಟ್ ಕಂಪನಿಯು ಹಾಕ್ ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿದೆ.

ಈ ಎಲೆಕ್ಟ್ರಿಕ್ ಬೈಕ್ ಆಕರ್ಷಕವಾದ ಸ್ಪೋರ್ಟಿ ಲುಕ್ ಹೊಂದಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಈ ಬೈಕಿನ ನೋಟ, ಮುಂಭಾಗದಲ್ಲಿರುವ ಹೆಡ್‍ಲೈಟ್ ಹಾಗೂ ಬೈಕಿನ ಸುತ್ತಲಿರುವ ಪ್ಯಾನೆಲ್‍ಗಳು ಜನರನ್ನು ಈ ಬೈಕಿನತ್ತ ಆಕರ್ಷಿಸುತ್ತವೆ.

ಈ ಬೈಕಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 100 ಕಿ.ಮೀವರೆಗೂ ಚಲಿಸುತ್ತದೆ. ಈ ಬ್ಯಾಟರಿಯನ್ನು 3 - 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.

ಗಮನಿಸಬೇಕಾದ ಸಂಗತಿಯೆಂದರೆ ಇವೊಲೆಟ್ ಕಂಪನಿಯು ಈ ಆಟೋ ಎಕ್ಸ್ ಪೋದಲ್ಲಿ ಹಲವಾರು ವಾಹನಗಳನ್ನು ಅನಾವರಣಗೊಳಿಸಿದೆ.

ಈ ಬಗ್ಗೆ ಮಾತನಾಡಿರುವ ಇವೊಲೆಟ್ ಕಂಪನಿಯ ಸಿಇಒ ಚತುರ್ವೆದಿರವರು, ಇವೊಲೆಟ್ ಹರಿಯಾಣ, ಹೈದರಾಬಾದ್ ಹಾಗೂ ಚೆನ್ನೈಗಳಲ್ಲಿ ಕಾರ್ಯಾಚರಿಸುತ್ತದೆ. ಇವೊಲೆಟ್ ಸರಣಿಯಲ್ಲಿ 13 ವಾಹನಗಳಿವೆ. ನಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಇಲ್ಲಿ ಪ್ರದರ್ಶಿಸಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

ಇಲ್ಲಿ ಪ್ರದರ್ಶಿಸಲಾಗಿರುವ ಇವೊಲೆಟ್ ಕಂಪನಿಯ ವಾಹನಗಳನ್ನು ಜೂನ್ ವೇಳೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಇವೊಲೆಟ್ ಕಂಪನಿಯು ಭಾರತದಲ್ಲಿರುವ 12 ರಾಜ್ಯಗಳಲ್ಲಿ 17ಕ್ಕೂ ಹೆಚ್ಚು ಡೀಲರ್‍ಗಳನ್ನು ಹೊಂದಿದೆ.

ಇವೊಲೆಟ್ ಕಂಪನಿಯು ಈ ಡೀಲರ್‍ಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಇದರ ಜೊತೆಗೆ ಪ್ರತಿ ಡೀಲರ್ ಪ್ರತಿ ವರ್ಷ 2 ಸಾವಿರ ಯುನಿಟ್‍ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.


Click it and Unblock the Notifications








