ಆಟೋ ಎಕ್ಸ್‌ಪೋ 2020: ಕೈಟ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹ್ಯುಂಡೈ
ಹ್ಯುಂಡೈ ಮೋಟಾರ್ ಇಂಡಿಯಾ, ಹ್ಯುಂಡೈ ಮೋಟಾರ್ ಕಂಪನಿಯ ಅಂಗಸಂಸ್ಥೆಯಾಗಿದೆ. ಈ ಕಂಪನಿಯ ಕೇಂದ್ರ ಕಚೇರಿ ದಕ್ಷಿಣ ಕೊರಿಯಾದಲ್ಲಿದೆ. ಹ್ಯುಂಡೈ ಕಂಪನಿಯು ಭಾರತದ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ.

ಹ್ಯುಂಡೈ ಮೋಟಾರ್ ಇಂಡಿಯಾ 1996ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ಹ್ಯುಂಡೈ ಮೋಟಾರ್ ಇಂಡಿಯಾ ಭಾರತದಲ್ಲಿ ಚೆನ್ನೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಾ ತಾನು ಬಿಡುಗಡೆಗೊಳಿಸುವ ಕಾರುಗಳಲ್ಲಿ ಹೊಸ ಟೆಕ್ನಾಲಜಿಗಳನ್ನು ನೀಡುತ್ತಲೇ ಬಂದಿದೆ.

ಹ್ಯುಂಡೈ ಕಂಪನಿಯು ದೆಹಲಿಯಲ್ಲಿ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ತನ್ನ ಎಲೆಕ್ಟ್ರಿಕ್ ಕೈಟ್ ಡ್ಯೂನ್ ಬಗ್ಗಿ ಕಾನ್ಸೆಪ್ಟ್ ಕಾರ್ ಅನ್ನು ಪ್ರದರ್ಶಿಸಿದೆ. ಈ ಲಘು ತೂಕದ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರ್ ಅನ್ನು ಯುರೋಪ್‍ನಲ್ಲಿರುವ ಹ್ಯುಂಡೈ ಡಿಸೈನ್ ಸೆಂಟರ್ ಅಭಿವೃದ್ಧಿಪಡಿಸಿದೆ.

ಯೂರೋಪ್‍ನ ಟೂರಿನ್ ಮೂಲದ ಡಿಸೈನ್ ಸ್ಕೂಲ್ ಆದ ಇಸ್ಟಿಟುಟೋ ಯುರೋಪಿಯೊ ಡಿ ಡಿಸೈನ್ (ಐಇಡಿ) ಸಹಭಾಗಿತ್ವದಲ್ಲಿ ಈ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಈ ಕಾರಿನ ವಿನ್ಯಾಸವನ್ನು ಭವಿಷ್ಯದ ವಿನ್ಯಾಸಗಳಿಗೆ ಅನುಸಾರವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಕಾರಣಕ್ಕೆ ಈ ಕಾನ್ಸೆಪ್ಟ್ ಕಾರು ಆಟೋ ಎಕ್ಸ್ ಪೋದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ತನ್ನತ್ತ ಸೆಳೆದಿತ್ತು. ಹ್ಯುಂಡೈ ಕಂಪನಿಯು ಈ ಕಾರಿನಲ್ಲಿ ಸ್ಪೋರ್ಟಿ ಡಿಸೈನ್ ಅನ್ನು ನೀಡಿದೆ.

ಕೈಟ್ ವಾಹನವು ಯಾವುದೇ ಡೋರುಗಳನ್ನು ಹೊಂದಿಲ್ಲ. ಇದರ ಬದಲಿಗೆ ಎಡಗಡೆಯಿಂದ ಬಲಗಡೆಗೆ ರಿಲೊಕೇಟ್ ಮಾಡಬಹುದಾದ ಸ್ಟೀಯರಿಂಗ್ ಕಾಲಮ್ ಅನ್ನು ಹೊಂದಿದೆ.

ಕೈಟ್‍ನಲ್ಲಿರುವ ಪ್ರಮುಖ ಸಂಗತಿಯೆಂದರೆ ಎರಡು ಸೀಟುಗಳ ಬಗ್ಗಿಯನ್ನು ಸಿಂಗಲ್ ಸೀಟಿನ ಜೆಟ್ ಸ್ಕೈಗೆ ಸುಲಭವಾಗಿ ಬದಲಿಸಬಹುದು. ಕೈಟ್ ವಾಹನದಲ್ಲಿರುವ ಬಹುತೇಕ ಕಾರ್ಯಗಳನ್ನು ಚಾಲಕನ ಮೊಬೈಲ್ ಫೋನ್‍ನಿಂದ ನಿಯಂತ್ರಿಸಬಹುದು.

ಈ ಕಾನ್ಸೆಪ್ಟ್ ವಾಹನವು ಬಗ್ಗಿಯಾಗಿರುವಾಗ ವ್ಹೀಲ್‍ಗಳಲ್ಲಿರುವ ನಾಲ್ಕು ಬ್ರಷ್‍ಲೆಸ್ ಮೋಟಾರ್‍ಗಳನ್ನು ಹಾಗೂ ಜೆಟ್ ಸ್ಕೈ ಆಗಿರುವಾಗ ವಾಟರ್ ಜೆಟ್ ಟರ್ಬೈನ್ ಅನ್ನು ಬಳಸುತ್ತದೆ.

ಹ್ಯುಂಡೈ ಕೈಟ್ ವಾಹನವು ಮೊನೊಕಾಕ್ ಚಾಸೀಸ್ ಹೊಂದಿದೆ. ಈ ವಾಹನದ ಉದ್ದ 3,745 ಎಂಎಂ ಹಾಗೂ ಎತ್ತರ 1,455 ಎಂಎಂಗಳಾಗಿದೆ. ಅಂದ ಹಾಗೆ ಈ ಕಾನ್ಸೆಪ್ಟ್ ಕಾರ್ ಅನ್ನು ಕೇವಲ ಪ್ರದರ್ಶನಕ್ಕೆ ಸೀಮಿತಗೊಳಿಸಲಾಗಿದ್ದು, ಈ ಕಾರ್ ಅನ್ನು ಉತ್ಪಾದಿಸುವುದಿಲ್ಲ.


Click it and Unblock the Notifications








