ಬಿಡುಗಡೆಗೆ ಸಜ್ಜಾದ ಒಕಿನಾವ ನಿರ್ಮಾಣದ ಒಕಿ100 ಎಲೆಕ್ಟ್ರಿಕ್ ಬೈಕ್
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿರುವ ಒಕಿನಾವ ಕಂಪನಿಯು ಮೊದಲ ಬಾರಿಗೆ ಎಲೆಕ್ಟ್ರಿಕ್ ಬೈಕ್ ಮಾದರಿಗಳ ಬಿಡುಗಡೆಗೆ ಸಿದ್ದತೆ ನಡೆಸಿದ್ದು, ಶೀಘ್ರದಲ್ಲೇ ಹೊಸ ಬೈಕ್ ಮಾದರಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಇವಿ ಮಾದರಿಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಆಕರ್ಷಣೆ ಮಾಡುತ್ತಿವೆ. ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಒಕಿನಾವ ಕೂಡಾ ಮೊದಲ ಬಾರಿಗೆ ಎಲೆಕ್ಟ್ರಿಕ್ ಬೈಕ್ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಹೊಸ ಬೈಕ್ ಮಾದರಿಯು ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಹೊತ್ತಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

2018ರ ದೆಹಲಿ ಆಟೋ ಮೇಳದಲ್ಲಿ ಮೊದಲ ಬಾರಿಗೆ ಒಕಿ100 ಬೈಕ್ ಮಾದರಿಯ ಫೋಟೋ ಟೈಪ್ ಆವೃತ್ತಿಯನ್ನ ಪ್ರದರ್ಶನಗೊಳಿಸಿದ್ದ ಒಕಿನವಾ ಕಂಪನಿಯು ಇದೀಗ ಹೊಸ ಬೈಕಿನ ಉತ್ಪಾದನಾ ಆವೃತ್ತಿಯನ್ನು ಪ್ರದರ್ಶನಕ್ಕೆ ಸಜ್ಜಾಗಿದ್ದು, ರಿವೋಲ್ಟ್ ಬೈಕಿಗೆ ಇದು ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ಬೈಕಿನ ಬ್ಯಾಟರಿ ಪ್ಯಾಕ್ ಕುರಿತಂತೆ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಹೊಸ ಬೈಕ್ ರಿವೋಲ್ಟ್ ಬೈಕ್ ಮಾದರಿಯಲ್ಲೇ ಬೆಲೆ, ಬ್ಯಾಟರಿ ಪ್ಯಾಕ್ ಪಡೆಯುವ ಸಾಧ್ಯತೆಗಳಿದ್ದು, ಪ್ರತಿ ಗಂಟೆಗೆ 100 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ 150ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿವೆ.

ಇದು ಸಾಮಾನ್ಯ ಮಾದರಿಯ 125 ಸಿಸಿ ಬೈಕ್ ಮಾದರಿಗೆ ಸಮನಾಗಿದ್ದು, ರಿವೋಲ್ಟ್ ಆರ್‌ವಿ400 ಬೈಕ್ ಮಾದರಿಗಿಂತಲೂ ಹೆಚ್ಚಿನ ಪ್ರೀಮಿಯಂ ಸೌಲಭ್ಯಗಳನ್ನು ಒಕಿ100 ಬೈಕಿನಲ್ಲಿವೆ. ಜೊತೆಗೆ ಹೊಸ ಬೈಕ್ ಮಾದರಿಯಲ್ಲಿ ತೆಗೆದುಹಾಕಬಹುದಾದ ಬ್ಯಾಟರಿ ಪ್ಯಾಕ್ ಸೌಲಭ್ಯವಿದ್ದು, ದೂರದ ಪ್ರಯಾಣದ ವೇಳೆ ಇದು ಸಾಕಷ್ಟು ಸಹಕಾರಿಯಾಗಿದೆ.

ಬೈಕ್ ಬೆಲೆ(ಅಂದಾಜು)
ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಒಕಿ100 ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1 ಲಕ್ಷದಿಂದ ರೂ.1.15 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ರಿವೋಲ್ಟ್ ಆರ್‌ವಿ400 ಬೈಕ್ ಮಾದರಿಗೆ ಮಾತ್ರವಲ್ಲದೇ ಟ್ರಾಕ್ ಟಿ6ಎಕ್ಸ್ ಎಲೆಕ್ಟ್ರಿಕ್ ಬೈಕಿಗೂ ಇದು ಪೈಪೋಟಿ ನೀಡಲಿದೆ.

ಇನ್ನು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಒಕಿನಾವ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಹೊಸ ಯೋಜನೆಗಳಿಗಾಗಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದೆ.

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ ಫೇಮ್ 2 ಯೋಜನೆಯಡಿ ಉದ್ಯಮ ವಿಸ್ತರಣೆ ಮಾಡಿರುವ ಒಕಿನಾವ ಕಂಪನಿಯು ರಾಜಸ್ತಾನದಲ್ಲಿ ನೆಲೆಗೊಂಡಿರುವ ಹೊಸ ಉತ್ಪಾದನಾ ಘಟಕದ ವಿಸ್ತರಣೆಗಾಗಿ ಬರೋಬ್ಬರಿ ರೂ.200 ಕೋಟಿ ಬಂಡವಾಳ ಹೂಡಿಕೆ ಮಾಡಿದೆ.


Click it and Unblock the Notifications








