ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್ 6 ಎಂಜಿನ್‍ನ ಅಪಾಚೆ 310 ಬೈಕ್
ಕೇಂದ್ರ ಸರ್ಕಾರವು ಏಪ್ರಿಲ್ 1ರಿಂದ ಬಿಎಸ್ 6 ಮಾಲಿನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಿದೆ. ಏಪ್ರಿಲ್ 1ರ ನಂತರ ಬಿಎಸ್ 4 ಎಂಜಿನ್ ಹೊಂದಿರುವ ಹೊಸ ವಾಹನಗಳನ್ನು ರಿಜಿಸ್ಟರ್ ಮಾಡಲಾಗುವುದಿಲ್ಲ.

ಈ ಕಾರಣಕ್ಕೆ ಬಹುತೇಕ ಎಲ್ಲಾ ವಾಹನ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳನ್ನು ಬಿಎಸ್ 6 ಎಂಜಿನ್‍ನೊಂದಿಗೆ ಅಪ್‍ಗ್ರೇಡ್‍ಗೊಳಿಸುತ್ತಿವೆ. ಟಿವಿಎಸ್ ಕಂಪನಿಯು ಸಹ ತನ್ನ ಸರಣಿಯಲ್ಲಿರುವ ವಾಹನಗಳಲ್ಲಿ ಬಿಎಸ್ 6 ಎಂಜಿನ್ ಅಳವಡಿಸಿ ಅಪ್‍ಗ್ರೇಡ್‍ಗೊಳಿಸುತ್ತಿದೆ.

ಇವುಗಳಲ್ಲಿ ಅಪಾಚೆ ಆರ್‍ಆರ್ 310 ಬೈಕ್ ಸಹ ಸೇರಿದೆ. ಅಪಾಚೆ ಬೈಕ್ ಭಾರತದಲ್ಲಿರುವ ಸ್ಪೋರ್ಟ್ ಬೈಕ್‍ಗಳಲ್ಲಿ ಒಂದಾಗಿದೆ. ಈ ಬೈಕ್ ಅನ್ನು ಬಿಎಂಡಬ್ಲ್ಯು ಮೋಟಾರಾಡ್ ಅಲಾಯನ್ಸ್ ಸಹಭಾಗಿತ್ವದಲ್ಲಿ ತಯಾರಿಸಲಾಗಿದೆ.

ಈ ಬೈಕ್ ಹೆಚ್ಚಿನ ಪ್ರಮಾಣದಲ್ಲಿ ಯುವಜನತೆಯನ್ನು ಆಕರ್ಷಿಸುತ್ತಿದೆ. ಬಿಎಸ್ 6 ಎಂಜಿನ್ ಅಳವಡಿಸಲಾಗಿರುವ ಹೊಸ ಅಪಾಚೆ ಆರ್‍ಆರ್ 310 ಬೈಕ್ ಅನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುವುದು.

ಕೆಲವು ವರದಿಗಳ ಪ್ರಕಾರ ಈ ಬೈಕ್ ಇದೇ ತಿಂಗಳ 25ರಂದು ಬಿಡುಗಡೆಯಾಗಲಿದೆ. ಹೊಸ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕಿನಲ್ಲಿ 312 ಸಿಸಿಯ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 33 ಬಿಹೆಚ್‍ಪಿ ಪವರ್ ಹಾಗೂ 27.3 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಎಸ್ 6 ಎಂಜಿನ್ ಹೊಂದಲಿರುವ ಹೊಸ ಅಪಾಚೆ ಆರ್‍ಆರ್ 310 ಬೈಕಿನ ಪವರ್ ಉತ್ಪಾದನೆಯ ಅಂಕಿ ಅಂಶವು ಬಿಎಸ್ 4 ಎಂಜಿನ್‍ಗೆ ಹೋಲಿಸಿದರೆ ಕಡಿಮೆಯಾಗಿರಲಿದೆ. ಈ ಬೈಕಿನಲ್ಲಿಯೂ ಸಹ 6 ಸ್ಪೀಡಿನ ಗೇರ್‍ಬಾಕ್ಸ್ ಹಾಗೂ ಸ್ಲಿಪರ್ ಕ್ಲಚ್ ಅಳವಡಿಸಲಾಗುವುದು.

ಹೊಸ ಬೈಕ್ ಹೆಚ್ಚು ಮೈಲೇಜ್ ನೀಡುವುದರ ಜೊತೆಗೆ ಕಡಿಮೆ ಮಾಲಿನ್ಯವನ್ನುಂಟು ಮಾಡಲಿದೆ. ಬಿಎಸ್ 6 ಎಂಜಿನ್ ಹೊಂದುವುದು ಮಾತ್ರವಲ್ಲದೇ ಹೊಸ ಬೈಕ್ ಹಲವು ಬಣ್ಣಗಳಲ್ಲಿ ಹೊಸ ಬಾಡಿ ಗ್ರಾಫಿಕ್ಸ್ ಸ್ಟಿಕ್ಕರ್‍ಗಳನ್ನು ಹೊಂದಿರಲಿದೆ.

ಬಿಎಸ್ 4 ಎಂಜಿನ್ ಹೊಂದಿದ್ದ ಬೈಕ್ ಎಲ್‍ಸಿಡಿ ಸ್ಕ್ರೀನ್ ಹೊಂದಿದ್ದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದ್ದರೆ, ಬಿಎಸ್ 6 ಎಂಜಿನ್ ಹೊಂದಿರುವ ಹೊಸ ಅಪಾಚೆ ಬೈಕ್ ಟಿಎಫ್‍ಟಿ ಸ್ಕ್ರೀನ್ ಹೊಂದಿರಲಿದೆ. ಹೊಸ ಬೈಕಿನಲ್ಲಿ ಸ್ಮಾರ್ಟ್ ಎಕ್ಸ್ ಕನೆಕ್ಟ್ ಟೆಕ್ನಾಲಜಿ, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ನ್ಯಾವಿಗೇಷನ್ ಸೇರಿದಂತೆ ಹಲವಾರು ಫೀಚರ್‍ಗಳನ್ನು ನೀಡಲಾಗುವುದು.

ಮಾರುಕಟ್ಟೆಯಲ್ಲಿರುವ ಅಪಾಚೆ ಆರ್‍ಆರ್ 310 ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.2.28 ಲಕ್ಷಗಳಾಗಿದೆ. ಬಿಎಸ್ 6 ಎಂಜಿನ್ ಹೊಂದಿರುವ ಹೊಸ ಬೈಕಿನ ಬೆಲೆಯು ರೂ.15,000ಗಳಷ್ಟು ಹೆಚ್ಚಾಗಲಿದೆ.

ಟಿವಿಎಸ್ ಕಂಪನಿಯು ಈ ಮೊದಲು ತನ್ನ ಸರಣಿಯಲ್ಲಿರುವ ಟಿವಿಎಸ್ ಜೂಪಿಟರ್, ಅಪಾಚೆ ಆರ್‍ಟಿಆರ್ 160 ಹಾಗೂ ಅಪಾಚೆ ಆರ್‍ಟಿಆರ್ 200ಗಳನ್ನು ಬಿಎಸ್ 6 ಎಂಜಿನ್‍ನೊಂದಿಗೆ ಬಿಡುಗಡೆಗೊಳಿಸಿತ್ತು.


Click it and Unblock the Notifications