ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ದುಬಾರಿಯಾದ ಬಿಎಸ್-6 ಅಪಾಚೆ ಆರ್‌ಟಿಆರ್ ಬೈಕ್‌ಗಳು
ಏಪ್ರಿಲ್ 1ರಿಂದ ಕಡ್ಡಾಯವಾಗಿರುವ ಬಿಎಸ್-6 ಎಮಿಷನ್ ಜಾರಿಗೆ ದಿನಗಣನೆ ಶುರುವಾಗಿದ್ದು, ಟಿವಿಎಸ್ ಮೋಟಾರ್ ಸಂಸ್ಥೆಯು ತನ್ನ ಹೊಸ ಬಿಎಸ್-6 ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿರುವುದಲ್ಲದೆ ಬೆಲೆ ಹೆಚ್ಚಳ ಘೋಷಿಸಿದೆ.

ಟಿವಿಎಸ್ ಸಂಸ್ಥೆಯು ಅಪಾಚೆ ಆರ್‌ಟಿಆರ್ 160 4ವಿ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳನ್ನು ಕಳೆದ ನವೆಂಬರ್ ಅಂತ್ಯದಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಬೈಕ್‌ಗಳು ಮಾರಾಟ ಶುರುವಾದ ಮೂರು ತಿಂಗಳ ಅವಧಿಯಲ್ಲಿ ಮತ್ತೆ ದುಬಾರಿ ಬೆಲೆ ಪಡೆದುಕೊಂಡಿವೆ. ಬಿಎಸ್-4 ನಿಂದ ಎಂಜಿನ್‌ನಿಂದ ಬಿಎಸ್-6 ನಿಯಮಕ್ಕೆ ಉನ್ನತೀಕರಿಸುವಾಗ ರೂ.6 ಸಾವಿರದಿಂದ ರೂ.16 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದ ಅಪಾಚೆ ಆರ್‌ಟಿಆರ್ 160 4ವಿ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳು ಇದೀಗ ಮತ್ತೆ ರೂ. 1 ಸಾವಿರ ಬೆಲೆ ಹೆಚ್ಚಳ ಮಾಡಲಾಗಿದೆ.

ಬಿಡಿಭಾಗಗಳ ಬೆಲೆ ಹೆಚ್ಚಳ ಮತ್ತು ಹೊಸ ತಂತ್ರಜ್ಞಾನ ಜೋಡಣೆಯಿಂದಾಗಿ ಉತ್ಪಾದನಾ ವೆಚ್ಚವು ಹೆಚ್ಚಳವಾಗಿರುವುದೆ ಬೆಲೆ ಏರಿಕೆ ಪ್ರಮುಖ ಕಾರಣ ಎನ್ನಲಾಗಿದ್ದು, ಟಿವಿಎಸ್ ನಂತರ ಇನ್ನುಳಿದ ಆಟೋ ಉತ್ಪಾದನಾ ಸಂಸ್ಥೆಗಳು ಸಹ ಬೆಲೆ ಹೆಚ್ಚಳ ಮಾಡುವ ಸಾಧ್ಯತೆಗಳಿವೆ.

ಇನ್ನು ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳಿಂತಲೂ ಟಿವಿಎಸ್ ಹೊಸ ಬೈಕ್ ಆವೃತ್ತಿಗಳು ಸುಧಾರಿತ ತಂತ್ರಜ್ಞಾನ ಪ್ರೇರಿತ ಎಂಜಿನ್ ಅನ್ನು ಪಡೆದುಕೊಂಡಿದ್ದು, ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

ಅಪಾಚೆ ಆರ್‌ಟಿಆರ್ 160 4ವಿ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಸಹ ಹೊಸ ಎಂಜಿನ್‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಉತ್ತಮ ಇಂಧನ ದಕ್ಷತೆಯೊಂದಿಗೆ ರಸ್ತೆಗಿಳಿದಿದ್ದು, ಬೆಲೆಯಲ್ಲೂ ದುಬಾರಿಯಾಗಿವೆ.
ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾದರಿಯು ಆರಂಭಿಕವಾಗಿ ರೂ.1,00,950ರಿಂದ ಟಾಪ್ ಎಂಡ್ ಮಾದರಿಯು ರೂ.1,04,000 ಬೆಲೆ ಹೊಂದಿದ್ದರೆ, ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಯು ಆರಂಭಿಕವಾಗಿ ರೂ. 1,15,350ಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 1,25,501 ಬೆಲೆ ಹೊಂದಿದೆ.

ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾದರಿಯು ಬಿಎಸ್-6 ಪ್ರೇರಿತ 159.7ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 16-ಬಿಎಚ್‌ಪಿ ಮತ್ತು 14.1-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಹಾಗೆಯೇ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಯು ಸಹ ಬಿಎಸ್-6 ಮಾದರಿಯ 197.75ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 20-ಬಿಎಚ್‌ಪಿ ಮತ್ತು 16.8-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇದರೊಂದಿಗೆ ಎರಡು ಬೈಕ್‌ಗಳಲ್ಲೂ ಈ ಬಾರಿ ಪರ್ಫಾಮೆನ್ಸ್ ಹೆಚ್ಚಳವಾಗಿರುವ ಸ್ಪಷ್ಟವಾಗಿದ್ದು, ಇಂಧನ ದಕ್ಷತೆ ಕೂಡಾ ಗಮನಸೆಳೆಯಲಿದೆ ಎನ್ನಲಾಗಿದೆ. ಜೊತೆಗೆ ಹೊಸ ಬೈಕ್‌ಗಳಲ್ಲಿ ಇದೇ ಮೊದಲ ಬಾರಿಗೆ ಟ್ರಾಫಿಕ್ ದಟ್ಟಣೆಯಲ್ಲೂ ಕಡಿಮೆ ಇಂಧನ ದಹಿಸುವಿಕೆಯ ಹೊಸ ತಂತ್ರಜ್ಞಾನ(ಜಿಟಿಟಿ) ನೀಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಇನ್ನುಳಿದಂತೆ ಈ ಹಿಂದಿನ ಬೈಕ್ ಮಾದರಿಯಲ್ಲಿ ನೀಡಲಾಗಿದ್ದ ಬಹುತೇಕ ಫೀಚರ್ಸ್‌ಗಳನ್ನು ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಎಲ್ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಟೈಲ್‌ಲೈಟ್ಸ್, ಎಲ್ಇಡಿ ಡಿಆರ್‌ಎಲ್ಎಸ್ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕಿನಲ್ಲಿ ಸ್ಮಾರ್ಟ್‌ಫೋನ್ ಜೊತೆ ಸಂಪರ್ಕಿಸಲು ಸ್ಮಾಟ್ ಕನೆಕ್ಟ್ ಫೀಚರ್ಸ್ ನೀಡಲಾಗಿದೆ.

ಹಾಗೆಯೇ ಬೈಕ್ ಸವಾರರ ಸುರಕ್ಷತೆಗಾಗಿ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಚಾನೆಲ್ ಎಬಿಎಸ್ ನೀಡಿದಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ನಲ್ಲಿ ಸಿಂಗಲ್ ಚಾನೆಲ್ ಎಬಿಸ್, ಸ್ಲಿಪ್ಲರ್ ಕ್ಲಚ್ ಸೌಲಭ್ಯವನ್ನು ಎರಡು ಬೈಕ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಒಟ್ಟಿನಲ್ಲಿ ಗ್ರಾಹಕರ ನೀರಿಕ್ಷೆಯೆಂತೆ ಹೊಸ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮತ್ತು ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾದರಿಗಳು ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಹೊಸ ತಂತ್ರಜ್ಞಾನ ಜೋಡಣೆಯಿಂದಾಗಿ ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿವೆ.


Click it and Unblock the Notifications








