ಫೇಮ್ 2 ತಿದ್ದುಪಡಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸಬ್ಸಡಿ ಪ್ರಮಾಣದಲ್ಲಿ ಭಾರೀ ಹೆಚ್ಚಳ
ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯೊಂದಿಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆ ಅಡಿ ಇದೀಗ ಮತ್ತೆ ಇವಿ ವಾಹನಗಳ ಖರೀದಿ ಮೇಲೆ ಪ್ರೋತ್ಸಾಹ ಧನ ಹೆಚ್ಚಿಸಿದೆ.

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಆದರೆ ಭಾರತದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಯನ್ನು ತಗ್ಗಿಸಲು ತುರ್ತಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಹೆಚ್ಚಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಫೇಮ್ 2 ಯೋಜನೆಗೆ ಕೆಲವು ತಿದ್ದುಪಡಿ ತರುವ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸಬ್ಸಡಿ ಪ್ರಮಾಣವನ್ನು ಚಾಲ್ತಿಯಲ್ಲಿರುವ ಪ್ರಮಾಣಕ್ಕಿಂತ ಶೇ.50 ರಷ್ಟು ಹೆಚ್ಚಳ ಮಾಡಿದೆ.

ಹೊಸ ತಿದ್ದುಪಡಿಯ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸಬ್ಸಿಡಿ ಪ್ರಮಾಣವನ್ನು ಬ್ಯಾಟರಿ ಪ್ಯಾಕ್ ಆಧರಿಸಿ ಪ್ರತಿ ಕಿಲೋವ್ಯಾಟ್‌ಗೆ ರೂ. 15 ಸಾವಿರ ಏರಿಕೆ ಮಾಡಲಾಗಿದ್ದು, ಹೊಸ ತಿದ್ದುಪಡಿಯ ನಂತರ ಪ್ರತಿ ಇವಿ ಸ್ಕೂಟರ್ ಖರೀದಿ ಮೇಲೆ ಗ್ರಾಹಕರು ರೂ. 10 ಸಾವಿರ ರೂ.15 ಸಾವಿರದಷ್ಟು ಉಳಿತಾಯ ಮಾಡಬಹುದಾಗಿದೆ.

ಹಾಗೆಯೇ ಹೊಸ ತಿದ್ದುಪಡಿಯ ಮೂಲಕ ಎಲೆಕ್ಟ್ರಿಕ್ ತ್ರಿಚಕ್ರ ಮಾರಾಟ ಪ್ರಮಾಣವನ್ನು ಇಇಎಸ್ಎಲ್ ಮೂಲಕ 3 ಲಕ್ಷ ಯುನಿಟ್‌ಗಳಿಗೆ ಏರಿಕೆ ಮಾಡಲಾಗಿದ್ದು, ಇದು ಗರಿಷ್ಠ ಸಬ್ಸಡಿಯೊಂದಿಗೆ ಇವಿ ವಾಹನ ಅಳವಡಿಸಿಕೊಳ್ಳುವ ಪ್ರಮುಖ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸಲಿದೆ.

ಹಾಗೆಯೇ ಇಇಎಸ್ಎಲ್ ಸಂಸ್ಥೆಯ ಮೂಲಕ ವಿವಿಧ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಅನುಷ್ಠಾನವನ್ನು ಹೆಚ್ಚಿಸಲು ನಿರ್ಧರಿಸಲಾಗುತ್ತಿದ್ದು, ಇಇಎಸ್ಎಲ್ ಸಂಸ್ಥೆಯೇ ಇವಿ ಬಸ್‌ಗಳ ನಿರ್ಹಹಣೆ ಮತ್ತು ಚಾರ್ಜಿಂಗ್ ಸೌಲಭ್ಯಗಳನ್ನು ಅಳವಡಿಸಿಕೊಡಲಿದೆ.

ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರದ ಹೊಸ ಯೋಜನೆ ಅಡಿ ಇದುವರೆಗೆ ದೇಶಾದ್ಯಂತ ಸಾವಿರಾರು ಚಾರ್ಜಿಂಗ್ ನಿಲ್ದಾಣಗಳು ಆರಂಭವಾಗಿದ್ದು, ಕರ್ನಾಟಕದಲ್ಲೂ 209 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿದಂತೆ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ.

ಹೊಸ ಯೋಜನೆಗೆ ಪ್ರಮುಖ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ತೀವ್ರ ಬೆಳವಣಿಗೆ ಸಹಕಾರಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿವೆ.

ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.


Click it and Unblock the Notifications