ಸಿಎಸ್ ಸಂತೋಷ್ ಅನುಪಸ್ಥಿತಿಯಲ್ಲಿ ಡಕಾರ್ ರ‍್ಯಾಲಿ ತಂಡ ಪ್ರಕಟಸಿದ ಹೀರೋ ಮೋಟೊಸ್ಪೋರ್ಟ್
ಕೋವಿಡ್ ಅಬ್ಬರದ ನಡುವೆಯೂ ವಿಶ್ವದ ಜನಪ್ರಿಯ ಮೋಟಾರ್‌ಸ್ಪೋರ್ಟ್ ಡಕಾರ್ ರ‍್ಯಾಲಿಯ ಪ್ರಸಕ್ತ ವರ್ಷದ ಆವೃತ್ತಿಯನ್ನು ಆಯೋಜಿಸಿದ್ದ ಡಕಾರ್ ಸ್ಪೋರ್ಟ್ ಆಯೋಜಕರು ಇದೀಗ 2022ರ ಆವೃತ್ತಿಯ ನಡೆಸುವ ಸಿದ್ದತೆಯಲ್ಲಿದ್ದು, 44ನೇ ಆವೃತ್ತಿಗಾಗಿ ಹೀರೋ ಮೋಟೊಸ್ಪೋರ್ಟ್ ತಂಡವನ್ನು ಪ್ರಕಟಿಸಲಾಗಿದೆ.

ಸೌದಿ ಅರೇಬಿಯಾದಲ್ಲಿ ಆರಂಭವಾಗಲಿರುವ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯು 2022ರ ಜನವರಿ 2ರಿಂದ 14ರ ತನಕ ನಡೆಯಲಿದ್ದು, ರಿಯಾದ್ ಸನೀಹದಲ್ಲಿರುವ ಹೈಲ್ ನಗರದಿಂದ ಆರಂಭವಾಗಿ ಪ್ರಮುಖ 12 ಹಂತಗಳೊಂದಿಗೆ ಜೆದ್ದಾದಲ್ಲಿ ಪೂರ್ಣಗೊಳ್ಳಲಿದೆ. 43ನೇ ಆವೃತ್ತಿಯ ರ‍್ಯಾಲಿಯಲ್ಲಿನ ಕೆಲವು ಮಾರ್ಗಗಳನ್ನು 44ನೇ ಆವೃತ್ತಿಯಲ್ಲಿ ಕೈಬಿಡಲಾಗಿದ್ದು, ಕಳೆದ ಆವೃತ್ತಿಗಿಂತಲೂ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.

43ನೇ ಆವೃತ್ತಿಯಲ್ಲಿ ಹಲವಾರು ಮುನ್ನೆಚ್ಚರಿಕೆಗಳ ನಡುವೆಯೂ ಕಠಿಣ ಮಾರ್ಗಗಳಲ್ಲಿ ಓರ್ವ ಬೈಕ್ ಸ್ಪರ್ಧಿ ಸಾವನ್ನಪ್ಪಿದ್ದ. ಜೊತೆಗೆ ಹೀರೋ ಮೋಟೊಸ್ಪೋರ್ಟ್ ಪ್ರತಿನಿಧಿಸಿದ್ದ ಸಿ.ಎಸ್ ಸಂತೋಷ್ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿ ತಲುಪಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಹಿನ್ನಲೆ 14 ಹಂತಗಳನ್ನು ಒಳಗೊಂಡಿದ್ದ 43ನೇ ಡಕಾರ್ ರ‍್ಯಾಲಿಯ ಮಾರ್ಗಗಳನ್ನು 44ನೇ ಆವೃತ್ತಿಯಲ್ಲಿ 12ಕ್ಕೆ ಇಳಿಕೆ ಮಾಡಿದ್ದು, ದುರಂತಗಳಿಗೆ ಎಡೆಮಾಡಿಕೊಡದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲಾಗುತ್ತಿದೆ.

ಕಳೆದ ಆವೃತ್ತಿಯಲ್ಲಿ ಉತ್ತಮ ರ‍್ಯಾಕಿಂಗ್ ಕಾಯ್ದುಕೊಂಡಿದ್ದ ಹೀರೋ ಮೋಟೋಸ್ಪೋರ್ಟ್ ತಂಡವು ಈ ಬಾರಿಯೂ ಉತ್ತಮ ಮುನ್ನಡೆ ಕಾಯ್ದಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೀರೋ ಮೋಟೋಸ್ಪೋರ್ಟ್ ತಂಡವನ್ನು ಈ ಬಾರಿ ಜೋಕ್ವಿಮ್ ರೋಡ್ರಿಗಸ್ ಮತ್ತು ಫ್ರಾಂಕೊ ಕೈಮಿ ಮುನ್ನಡೆಸಲಿದ್ದಾರೆ.

ಹೀರೋ ಮೋಟೋಸ್ಪೋರ್ಟ್ ತಂಡದ ದೀರ್ಘಕಾಲದ ರೈಡರ್ ಜೋಕ್ವಿಮ್ ರೋಡ್ರಿಗಸ್ ಅವರು ಈ ಬಾರಿ ಉತ್ತಮ ಮುನ್ನಡೆ ಕಾಯ್ದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಕಳೆದ ವರ್ಷದ ತಂಡದಲ್ಲಿದ್ದ ಸಿಎಸ್ ಸಂತೋಷ್ ಮತ್ತು ಬ್ರೂಲೆರ್ ಅವರು ಕಾರಣಾಂತರಗಳಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಹೀಗಾಗಿ ಜೋಕ್ವಿಮ್ ರೋಡ್ರಿಗಸ್ ಜೊತೆ ಸ್ಕಿಲ್ ವೇ ರ‍್ಯಾಲಿ ವಿಜೇತ ಫ್ರಾಂಕೊ ಕೈಮಿ ಈ ಬಾರಿ ಹೀರೋ ಮೋಟೊಸ್ಪೋರ್ಟ್ ತಂಡದಲ್ಲಿ ಹೊಸ ಭರವಸೆ ಮೂಡಿಸಿದ್ದು, ಫ್ರಾಂಕೊ ಕೈಮಿ ಈಗಾಗಲೇ ವಿವಿಧ ತಂಡಗಳೊಂದಿಗೆ ಐದು ಬಾರಿ ಡಕಾರ್ ರ‍್ಯಾಲಿಯಲ್ಲಿ ಭಾಗಿಯಾದ ಅನುಭವಿ ರೈಡ್ ಆಗಿದ್ದಾರೆ.

ಹೀರೋ ಮೋಟೋಸ್ಪೋರ್ಟ್ ತಂಡವು ಉತ್ತಮ ಪೈಪೋಟಿ ನೀಡಲು ಹೀರೋ ರ‍್ಯಾಲಿ 450 ಮಾದರಿಯನ್ನು ಪ್ರಮುಖ ಬದಲಾವಣೆಗಳೊಂದಿಗೆ ಉನ್ನತೀಕರಿಸಿದ್ದು, ಟಾಪ್ ಸ್ಪೀಡ್ ಮತ್ತು ಆಕ್ಸಿಲೇಟರ್ ಅನುಪಾತವನ್ನು ಸುಧಾರಿಸಲಾಗಿದೆ.

ಕಳೆದ ಬಾರಿಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿರುವ ಮಾನ್ಸ್ಟರ್ ಎನರ್ಜಿ ಹೋಂಡಾ, ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡಗಳು ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಸಿದ್ದತೆಯಲ್ಲಿದ್ದು, 2022ರ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಒಟ್ಟು ಅಂತರವನ್ನು 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿದೆ.

2022ರ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದು, ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಡಲಾಗಿದೆ.

ಜಗತ್ತಿನ ಅಪಾಯಕಾರಿ ಮೋಟಾರ್‌ಸ್ಪೋರ್ಟ್‌ಗಳಲ್ಲಿ ಒಂದಾಗಿರುವ ಡಕಾರ್ ರ‍್ಯಾಲಿಯು ತನ್ನದೇ ವೈಶಿಷ್ಟ್ಯತೆಗಳೊಂದಿಗೆ ಹಲವಾರು ಹೊಸತನಗಳಿಗೆ ಸಾಕ್ಷಿಯಾಗಿದ್ದು, ಈ ಸ್ಪರ್ಧೆಯಲ್ಲಿ ಕೆಲವೇ ಕೆಲವು ಭಾರತೀಯ ರೈಡರ್‌ಗಳು ಮಾತ್ರ ಉತ್ತಮ ಪ್ರದರ್ಶನ ತೋರಿದ್ದಾರೆ.

ಹೀರೋ ಮೋಟಾರ್‌ಸ್ಪೋರ್ಟ್ ತಂಡದ ಸಿಎಸ್ ಸಂತೋಷ್ ಸೇರಿ ಕೆಲವೇ ಸ್ಪರ್ಧಿಗಳು ಟಾಪ್ 20ರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು, ಸಾವಿರಾರು ಕಿ.ಮೀ ಅಂತರ ಕ್ರಮಿಸಬೇಕಿರುವ ಈ ಸ್ಪರ್ಧೆಯಲ್ಲಿ ಹಲವಾರು ಅಂತಾರಾಷ್ಟ್ರೀಯ ಸ್ಪರ್ಧಿಗಳು ಪ್ರಾಣಕಳೆದುಕೊಂಡಿದ್ದಾರೆ.

ಮೋಟಾರ್‌ಸ್ಪೋರ್ಟ್‌ನಲ್ಲಿ ತನ್ನದೆ ಜನಪ್ರಿಯತೆ ಹೊಂದಿರುವ ಡಕಾರ್ ರ‍್ಯಾಲಿ ಆಯೋಜನೆಯನ್ನು ಹಲವಾರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆಸಲಾಗುತ್ತಿದ್ದು, 2020ರ ಆವೃತ್ತಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿ.ಎಸ್ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿ ಬಂದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಸಿಎಸ್ ಸಂತೋಷ್ ಅವರು ಡಕಾರ್ ರ‍್ಯಾಲಿಯಲ್ಲಿ ಹೀರೋ ಮೋಟೊಸ್ಪೋರ್ಟ್ ತಂಡದ ಪರವಾಗಿ ಏಳು ಬಾರಿ ಪ್ರತಿನಿಧಿಸಿದ್ದು, ವಿಶ್ವದ ಕಠಿಣ ಮತ್ತು ಅಪಾಯಕಾರಿ ಡಕಾರ್ ರ‍್ಯಾಲಿಯಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರಿಗೆ ಸಲ್ಲುತ್ತದೆ.

ಜನವರಿ 3ರಿಂದ 15ರ ತನಕ ಆಯೋಜಿಸಲಾಗಿದ್ದ 2021ರ ಡಕಾರ್ ರ‍್ಯಾಲಿಯು ಒಟ್ಟು 12 ಹಂತಗಳನ್ನು ಒಳಗೊಂಡ 7,646 ಕಿ.ಮೀ ಅಂತರವನ್ನು ಒಳಗೊಂಡಿತ್ತು. ರ‍್ಯಾಲಿಯ ಮೊದಲ ಮೂರು ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಸಿಎಸ್ ಸಂತೋಷ್ ಅವರು ನಾಲ್ಕನೇ ಹಂತವು ಆರಂಭವಾದ ಕೆಲವೇ ಗಂಟೆಗಳಲ್ಲಿ ಅಪಘಾತಕ್ಕೀಡಾಗಿದ್ದರು.


Click it and Unblock the Notifications








