ದುಬಾರಿ ಇಂಧನಗಳ ಪರಿಣಾಮ ಒಕಿನಾವ ಇವಿ ಸ್ಕೂಟರ್ ಮಾರಾಟದಲ್ಲಿ ಹೊಸ ದಾಖಲೆ
ಇಂಧನಗಳ ಬೆಲೆ ಏರಿಕೆಯ ಪರಿಣಾಮವಾಗಿ ಹೊಸ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಹೆಚ್ಚಿನ ಒಲವು ತೋರುತ್ತಿದ್ದು, ಇವಿ ವಾಹನಗಳ ಉತ್ಪಾದನಾ ಕಂಪನಿಗೆ ಭಾರೀ ಬೇಡಿಕೆ ಸಲ್ಲಿಕೆಯಾಗುತ್ತಿದೆ.

ಎಲೆಕ್ಟ್ರಿಕ್ ವಾಹನ ಕಂಪನಿಗಳು ಕಳೆದ ಕೆಲ ತಿಂಗಳಿನಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದ ಗ್ರಾಹಕರ ವಿಚಾರಣೆ ಮತ್ತು ಖರೀದಿ ಪ್ರಕ್ರಿಯೆಯೂ ಜೋರಾಗಿದ್ದು, ದೇಶದ ಎರಡನೇ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ಕಂಪನಿಯಾಗಿರುವ ಒಕಿನಾವ ಕಂಪನಿಯು ಕೂಡಾ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ.

ದುಬಾರಿ ಇಂಧನಗಳ ಬೆಲೆ ಪರಿಣಾಮ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಕಳೆದ ಕೆಲತಿಂಗಳಿನಿಂದ ಹೆಚ್ಚಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, 2021ರ ಅವಧಿಯಲ್ಲಿ ಒಕಿನಾವ ಕಂಪನಿಯು ಬರೋಬ್ಬರಿ 1 ಲಕ್ಷ ಯುನಿಟ್ ಇವಿ ಸ್ಕೂಟರ್ ಮಾರಾಟ ಮಾಡಿ ಹೊಸ ದಾಖಲೆ ನಿರ್ಮಿಸಿದೆ.

ಈ ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಇವಿ ಸ್ಕೂಟರ್ ಮಾರಾಟವು 2020ರ ಅವಧಿನ ಸ್ಕೂಟರ್ ಮಾರಾಟಕ್ಕಿಂತಲೂ ಹೆಚ್ಚಿದ್ದು, ಮುಂಬರುವ ದಿನಗಳಲ್ಲಿ ಒಕಿನಾವ ಸ್ಕೂಟರ್‌ಗಳಿಗೆ ಮತ್ತಷ್ಟು ಬೇಡಿಕೆ ಸಲ್ಲಿಕೆಯಾಗುವ ನೀರಿಕ್ಷೆಯಿದೆ.

ಎಲೆಕ್ಟ್ರಿಕ್ ವಾಹನ ಮಾದರಿಗಳ ವಿಚಾರಣೆಯು ಕೂಡಾ ಕೆಲ ತಿಂಗಳಿನಿಂದ ಸಾಕಷ್ಟು ಹೆಚ್ಚಳವಾಗಿದ್ದು, ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವ ಇವಿ ವಾಹನಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

ಹೀಗಾಗಿ ಗ್ರಾಹಕರ ಬೇಡಿಕೆ ಆಧಾರಿಸಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಇವಿ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿರುವ ಒಕಿನಾವ ಕಂಪನಿಯು ಮುಂದಿನ ಕೆಲ ತಿಂಗಳಿನಲ್ಲಿ ತನ್ನ ಬಹುನೀರಿಕ್ಷಿತ ಒಕಿ100 ಇವಿ ಬೈಕ್ ಸೇರಿದಂತೆ ಒಟ್ಟು ನಾಲ್ಕು ಹೊಸ ಇವಿ ವಾಹನಗಳನ್ನು ರಸ್ತೆಗಿಳಿಸುತ್ತಿದೆ.

ಒಕಿನಾವ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ವಿವಿಧ ಬ್ಯಾಟರಿ ರೇಂಜ್‌ವುಳ್ಳ ಪ್ರೈಸ್, ಆರ್30, ಲೈಟ್, ರಿಡ್ಜ್ ಪ್ಲಸ್, ಪ್ರೈಸ್ ಪ್ರೊ ಮತ್ತು ಐ-ಪ್ರೈಸ್ ಪ್ರೊ ಪ್ಲಸ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಭವಿಷ್ಯ ಯೋಜನೆಗಳಲ್ಲಿ ಒಕಿ100 ಇವಿ ಮೋಟಾರ್‌ಸೈಕಲ್ ಸೇರಿದಂತೆ ಒಂದು ಮ್ಯಾಕ್ಸಿ ಸ್ಕೂಟರ್ ಮತ್ತು ಎರಡು ಹೈ ಸ್ಪೀಡ್ ಎಲೆಕ್ಟ್ರಿಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ವಾಹನಗಳ ಪೈಕಿ ಶೀಘ್ರದಲ್ಲೇ ಒಕಿ100 ಮಾದರಿಯು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದ್ದು, ಕಂಪನಿಯು ಹೊಸ ಇವಿ ಬೈಕಿನ ಟೀಸರ್ ಚಿತ್ರವನ್ನು ಪ್ರಕಟಿಸುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಒಕಿ100 ಇವಿ ಬೈಕಿನ ಟೀಸರ್ ಹೊರತುಪಡಿಸಿ ಯಾವುದೇ ತಾಂತ್ರಿಕ ಅಂಶಗಳನ್ನು ಹಂಚಿಕೊಳ್ಳದ ಒಕಿನಾವ ಕಂಪನಿಯು ಬಜೆಟ್ ಬೆಲೆಯಲ್ಲಿ ಉತ್ತಮ ಬ್ಯಾಟರಿ ಪ್ಯಾಕ್‌ನೊಂದಿಗೆ ಬಿಡುಗಡೆಯ ಸುಳಿವು ನೀಡಿದ್ದು, 125 ಸಿಸಿ ಸಾಮರ್ಥ್ಯದ ಸಾಮಾನ್ಯ ಬೈಕ್‌ಗಳಿಗೆ ಸಮನಾಗಿರುವ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಮಾದರಿಗೆ ಪೈಪೋಟಿ ನೀಡಲಿದೆ.

ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ ಬ್ಯಾಟರಿ ರೇಂಜ್ ಆಧಾರದ ಮೇಲೆ 120ಕಿ.ಮೀ ನಿಂದ 150 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ ಎನ್ನಲಾಗಿದ್ದು, ಹೊಸ ಬೈಕ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ.1 ಲಕ್ಷದಿಂದ ರೂ.1.20 ಲಕ್ಷ ಬೆಲೆ ಅಂತರದೊಳಗೆ ಬಿಡುಗಡೆ ಮಾಡಲಾಗುತ್ತಿದೆ.

ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿರುವ ಒಕಿನಾವ ಕಂಪನಿಯು ಇಂಧನ ಚಾಲಿತ ವಾಹನಗಳಿಂದ ಇವಿ ವಾಹನಗಳತ್ತ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ವಾಹನಗಳ ಉತ್ಪಾದನೆಗಾಗಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಜೊತೆಗೆ ಹೊಸ ಇವಿ ಬೈಕ್ ಮಾದರಿಯನ್ನು ಸ್ಥಳೀಯವಾಗಿ ಅಭಿವೃದ್ದಿ ಹೊಂದಿರುವ ಗರಿಷ್ಠ ಬಿಡಿಭಾಗಗಳನ್ನು ಪಡೆದುಕೊಂಡಿರುವುದು ಸಹ ಉತ್ತಮ ಬೆಲೆ ನಿರ್ಧಾರಕ್ಕೆ ಸಹಕಾರಿಯಾಗಲಿದ್ದು, ಮುಂಬರುವ ಮಾರ್ಚ್ ಹೊತ್ತಿಗೆ ಹೊಸ ಇವಿ ಬೈಕ್ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

ಎಲೆಕ್ಟ್ರಿಕ್ ವಾಹನ ಮಾರಾಟ ಆರಂಭಿಸಿದ 6 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ಒಕಿನಾವ ಕಂಪನಿಯು ಹೊಸ ಯೋಜನೆಗೆ ಪೂರಕವಾಗಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ರಾಜಸ್ತಾನದ ಭಿವಾಡಿಯಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಹಂತ-ಹಂತವಾಗಿ ವಿಸ್ತರಿಸುತ್ತಿದೆ.

ವಿಸ್ತರಿತ ವಾಹನ ಉತ್ಪಾದನಾ ಘಟಕದ ಮೂಲಕ ವಾರ್ಷಿಕವಾಗಿ 1 ಮಿಲಿಯನ್(10 ಲಕ್ಷ) ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಉತ್ಪಾದನಾ ಗುರಿ ಹೊಂದಿರುವ ಒಕಿನಾವ ಕಂಪನಿಯು ಹೊಸ ಘಟಕದ ನಿರ್ಮಾಣಕ್ಕಾಗಿ ಹೊಸದಾಗಿ ರೂ. 150 ಕೋಟಿ ಹೂಡಿಕೆ ಮಾಡಿದೆ.

ಒಕಿನಾವ ಕಂಪನಿಯ ಹೊಸ ಯೋಜನೆಗಾಗಿ ಪ್ರಮುಖ ಕಂಪನಿಗಳು ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಒಕಿನಾವ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಹೊಸ ಬಂಡವಾಳ ಹೂಡಿಕೆ ಸಾಕಷ್ಟು ಸಹಕಾರಿಯಾಗಿದೆ.


Click it and Unblock the Notifications








