ನೇದರ್‌ಲ್ಯಾಂಡ್ ರಾಯಭಾರಿ ಕಚೇರಿಗಾಗಿ ವಿಶೇಷ ವಿನ್ಯಾಸದ ಎಸ್1 ಪ್ರೊ ಸ್ಕೂಟರ್ ತಯಾರಿಸಿದ ಓಲಾ ಎಲೆಕ್ಟ್ರಿಕ್
ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಎಸ್1 ಮತ್ತು ಎಸ್1 ಪ್ರೊ ಇವಿ ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡಿ ವಿತರಣೆಗೆ ಸಿದ್ದವಾಗುತ್ತಿದ್ದು, ಹೊಸ ಸ್ಕೂಟರ್ ವಿತರಣೆಗೂ ಮುನ್ನ ಕಂಪನಿಯು ಭಾರತದಲ್ಲಿರುವ ನೇದರ್‌ಲ್ಯಾಂಡ್ ರಾಯಭಾರಿ ಕಚೇರಿಗಾಗಿ ವಿಶೇಷ ವಿನ್ಯಾಸದ ಎಸ್1 ಪ್ರೊ ಸ್ಕೂಟರ್ ತಯಾರಿಸಿದೆ.

ಭಾರತದಲ್ಲಿ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ತಡೆಯುವ ಉದ್ದೇಶದೊಂದಿಗೆ ಇವಿ ವಾಹನಗಳನ್ನು ಮಾತ್ರ ಬಳಕೆಗೆ ನಿರ್ಣಯಿಸಿರುವ ನೇದರ್‌ಲ್ಯಾಂಡ್ ರಾಯಭಾರಿ ಕಚೇರಿಯು ಇತ್ತೀಚೆಗೆ ಬಿಡುಗಡೆಯಾದ ಓಲಾ ಇವಿ ಸ್ಕೂಟರ್‌ಗಳನ್ನು ಕಚೇರಿಯ ಸಿಬ್ಬಂದಿಗಾಗಿ ಖರೀದಿಸಿದೆ. ನೇದರ್‌ಲ್ಯಾಂಡ್ ರಾಯಭಾರಿ ಕಚೇರಿಗಾಗಿ ಓಲಾ ಕಂಪನಿಯು ವಿಶೇಷ ವಿನ್ಯಾಸದ ಎಸ್1 ಪ್ರೊ ಸ್ಕೂಟರ್ ತಯಾರಿಸಿದ್ದು, ಒಟ್ಟು 9 ಸ್ಕೂಟರ್‌ಗಳನ್ನು ಖರೀದಿಸಲಾಗಿದೆ.

ರಾಯಭಾರಿ ಕಚೇರಿಗಾಗಿ ಬಳಕೆಯಾಗಲಿರುವ ಹೊಸ ಇವಿ ಸ್ಕೂಟರ್‌ಗಳನ್ನು 'ಡಚ್ ಆರೆಂಜ್' ಬಣ್ಣಗಳಲ್ಲಿ ನಿರ್ಮಾಣ ಮಾಡಿದ್ದು, ನವದೆಹಲಿಯಲ್ಲಿರುವ ನೆದರ್ಲ್ಯಾಂಡ್ ರಾಯಭಾರ ಕಚೇರಿ ಮತ್ತು ಮುಂಬೈ ಹಾಗೂ ಬೆಂಗಳೂರಿನಲ್ಲಿರುವ ಕಾನ್ಸುಲೇಟ್‌ಗಳಲ್ಲಿ ಹೊಸ ಸ್ಕೂಟರ್ ಬಳಕೆಯಾಗಲಿವೆ.
ಹೊಸ ಬಣ್ಣದ ಆಯ್ಕೆ ಹೊಂದಿರುವ ಓಲಾ ಸ್ಕೂಟರ್‌ಗಳು ನೆದರ್‌ಲ್ಯಾಂಡ್‌ನ ಅಧಿಕೃತ ಲೋಗೋವನ್ನು ಸಹ ಹೊಂದಿರಲಿದ್ದು, ಹೊಸ ಇವಿ ಬಳಕೆಯೊಂದಿಗೆ ಮಾಲಿನ್ಯ ಮುಕ್ತ ಗುರಿಯತ್ತ ಸಾಗುವ ನಮ್ಮ ಬದ್ದತೆಯ ಪ್ರಮುಖ ಭಾಗವಾಗಿ ಓಲಾ ಇವಿ ಸ್ಕೂಟರ್ ಖರೀದಿಸಿರುವುದಾಗಿ ನೆದರ್ಲ್ಯಾಂಡ್ಸ್ ರಾಯಭಾರಿ ಕಚೇರಿಯ ರಾಯಭಾರಿ ಮಾರ್ಟೆನ್ ವ್ಯಾನ್ ಡೆನ್ ಬರ್ಗ್ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಹೊಸ ಎಸ್1 ಮತ್ತು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಬುಕ್ಕಿಂಗ್ ದಾಖಲಿಸಿರುವ ಸಾವಿರಾರು ಗ್ರಾಹಕರಿಗೆ ಓಲಾ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಟೆಸ್ಟ್ ರೈಡ್ ಅವಕಾಶ ನೀಡಿದ್ದು, ಕಂಪನಿಯು ಶೀಘ್ರದಲ್ಲಿಯೇ ವಿತರಣೆ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿಕೊಂಡಿದೆ.

ಓಲಾ ಕಂಪನಿಯು ಹೊಸ ಇವಿ ಸ್ಕೂಟರ್ ಖರೀದಿ ಪ್ರಕ್ರಿಯೆಗಾಗಿ ಶೋರೂಂಗಳ ಬದಲಾಗಿ ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸ್ಕೂಟರ್ ಖರೀದಿ ಪ್ರಕ್ರಿಯೆ ಪ್ರಕ್ರಿಯೆ, ವಿತರಣೆ ಮತ್ತು ಮಾರಾಟ ನಂತರದ ಗ್ರಾಹಕರ ಸೇವೆಗಳು ಸಹ ಮನೆ ಬಾಗಿಲಿಗೆ ಒದಗಿಸುತ್ತಿದೆ.

ಓಲಾ ಹೊಸ ಇವಿ ಸ್ಕೂಟರ್‌ಗಳ ಖರೀದಿಗಾಗಿ ದೇಶಾದ್ಯಂತ ಪ್ರಮುಖ ನಗರಗಳಿಂದ ಸುಮಾರು 1.50 ಲಕ್ಷಕ್ಕೂ ಅಧಿಕ ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದು, ಸ್ಕೂಟರ್ ಖರೀದಿದಾಗಿ ಕಂಪನಿಯು ಪ್ರಮುಖ ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಗರಿಷ್ಠ ಸಾಲ ಸೌಲಭ್ಯದೊಂದಿಗೆ ಆಕರ್ಷಕ ಇಎಂಐ ಆಯ್ಕೆಗಳನ್ನು ನೀಡಿದೆ.

ಜೊತೆಗೆ ಓಲಾ ಫೈನಾನ್ಸಿಲ್ ಸರ್ವಿಸ್ ಮೂಲಕವೂ ಗ್ರಾಹಕರು ಹೊಸ ಸ್ಕೂಟರ್ ಖರೀದಿ ಮಾಡಬಹುದಾಗಿದ್ದು, ಹೊಸ ಎಸ್1 ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದೆ.

ಓಲಾ ಸ್ಕೂಟರ್‌ಗಳ ತಾಂತ್ರಿಕ ಸೌಲಭ್ಯಗಳ ಬಗೆಗೆ ಹೇಳುವುದಾದರೆ ಆರಂಭಿಕ ಮಾದರಿಯಾದ ಎಸ್1 ವೆರಿಯೆಂಟ್‌ನಲ್ಲಿ 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕುರಿತಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಉಪಯಕ್ತ ಮಾಹಿತಿಯುಳ್ಳ Ola Electric App ಸಹ ಅಭಿವೃದ್ದಿಪಡಿಸಿದ್ದು, ಹೊಸ ಆ್ಯಪ್ ಮೂಲಕ ವಾಹನ ಖರೀದಿ, ವಿತರಣೆ, ಗ್ರಾಹಕ ಸೇವೆ, ಇನ್ಸುರೆನ್ಸ್, ಮೌಲ್ಯ ವರ್ಧಿತ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








