ಒಂದನೇ ಹಂತದ ಉತ್ಪಾದನಾ ಘಟಕ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ ಓಲಾ ಎಲೆಕ್ಟ್ರಿಕ್
ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ವಾಹನ ಉತ್ಪಾದನೆಗಾಗಿ ಅತ್ಯಾಧುನಿಕ ಸೌಲಭ್ಯವುಳ್ಳ ಬೃಹತ್ ವಾಹನ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುತ್ತಿದೆ.

ಭಾರತದಲ್ಲಿಯೇ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಗುರಿ ಹೊಂದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯ ಮುಂಬರುವ ಕೆಲವೇ ತಿಂಗಳಿನಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದ್ದು, ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡುವ ಸಂಬಂಧ ಒಂದನೇ ಹಂತದ ಘಟಕದ ನಿರ್ಮಾಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ತಮಿಳುನಾಡಿನ ಹೊಸೂರಿನಲ್ಲಿ ಹೊಸ ವಾಹನ ಉತ್ಪಾದನಾ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿರುವ ಓಲಾ ಕಂಪನಿಯು ಒಂದನೇ ಹಂತದ ನಿರ್ಮಾಣದ ಪ್ರಕ್ರಿಯೆ ಪೂರ್ಣಗೊಳಿಸಿರುವ ಬಗ್ಗೆ ಸಿಇಓ ಭಾವೀಶ್ ಅಗರ್‌ವಾಲ್ ಮಾಹಿತಿ ಹಂಚಿಕೊಂಡಿದ್ದು, ಹೊಸ ಯೋಜನೆಗಾಗಿ ನೇದರ್ಲ್ಯಾಂಡ್ ಮೂಲದ ಎಟರ್ಗೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯೊಂದಿಗೆ ಜೊತೆಗೂಡಿಸಿದೆ.

ಓಲಾ ಕಂಪನಿಯು ಹೊಸ ವಾಹನ ಉತ್ಪಾದನಾ ಘಟಕವನ್ನು ಇಂಡಸ್ಟ್ರಿ 4.0 ತತ್ವದ ಆಧಾರದ ಮೇಲೆ ನಿರ್ಮಾಣ ಮಾಡಲಾಗುತ್ತಿದ್ದು, ಈ ಮೂಲಕ ಹೊಸ ಘಟಕವು ದೇಶದ ಅತ್ಯಾಧುನಿಕ ವಾಹನ ಉತ್ಪಾದನಾ ಘಟಕಗಳಲ್ಲಿ ಒಂದಾಗಲಿದೆ.

ಆಧುನಿಕ ವಾಹನ ಉತ್ಪಾದನಾ ಘಟಕದಲ್ಲಿ ಸಾವಿರಾರು ಉದ್ಯೋಗಗಳ ಜೊತೆಗೆ ವಿವಿಧ ಕಾರ್ಯಗಳಿಗಾಗಿ ಸುಮಾರು 5 ಸಾವಿರ ರೋಬೋಟ್‌ಗಳನ್ನು ಹೊಸ ಘಟಕದಲ್ಲಿ ನಿಯೋಜಿಸಲು ನಿರ್ಧರಿಸಲಾಗಿದ್ದು, ಬರೋಬ್ಬರಿ 500 ಎಕರೆ ವ್ಯಾಪ್ತಿ ಹೊಂದಿರುವ ಹೊಸ ವಾಹನ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆ ಮಾಡಲು ಯೋಜಿಸಲಾಗಿದೆ.

ಸದ್ಯಕ್ಕೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾತ್ರ ನಿರ್ಮಾಣ ಮಾಡಲಿರುವ ಓಲಾ ಕಂಪನಿಯು ಉತ್ಪಾದನಾ ಘಟಕದ ವಿಸ್ತರಣೆಯೊಂದಿಗೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಸಹ ಉತ್ಪಾದನೆ ಮಾಡಲಿದ್ದು, ಹೊಸ ಯೋಜನೆಯಿಂದ ಸುಮಾರು 10 ಸಾವಿರ ಉದ್ಯೋಗಗಳು ಸೃಷ್ಠಿಯಾಗಲಿವೆ ಎನ್ನಲಾಗಿದೆ.

ಹೊಸ ಯೋಜನೆಗಾಗಿ ಓಲಾ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡುತ್ತಿದ್ದು, ಹೊಸ ಇವಿ ವಾಹನ ಉತ್ಪಾದನಾ ಘಟಕದೊಂದಿಗೆ ಓಲಾ ಕಂಪನಿಯು ಜಾಗತಿಕ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ.

ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಉತ್ಪಾದಿಸುವ ಸ್ಕೂಟರ್‌ಗಳನ್ನು ಭಾರತದಲ್ಲಿ ಮಾತ್ರವಲ್ಲದೇ ಯುರೋಪ್, ಇಂಗ್ಲೆಂಡ್, ಲ್ಯಾಟಿನ್ ಅಮೆರಿಕಾದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಗೊಳ್ಳಲಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಓಲಾ ಇವಿ ಸ್ಕೂಟರ್ ಹೊಸ ಸಂಚಲನ ಸೃಷ್ಠಿಸಲಿದೆ.

ಹೊಸ ಸ್ಕೂಟರಿನ ಅಧಿಕೃತ ಚಿತ್ರಗಳನ್ನು ಈಗಾಗಲೇ ಬಹಿರಂಗಪಡಿಸಿರುವ ಓಲಾ ಕಂಪನಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್ ಹಿಂದಿರುಗಿಸುವ ಭರವಸೆ ನೀಡಿದ್ದು, ಹೊಸ ಸ್ಕೂಟರ್ ರೂ. 1.10 ಲಕ್ಷದಿಂದ ರೂ. 1.30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.


Click it and Unblock the Notifications








