ಏಷ್ಯಾದ ಅತಿ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕಕ್ಕೆ ಅಧಿಕೃತ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
ಓಲಾ ಎಲೆಕ್ಟ್ಕಿಕ್ ಕಂಪನಿಯು ತನ್ನ ಬಹುನೀರಿಕ್ಷಿತ ಎಸ್ ಸರಣಿ ಎಲೆಕ್ಟ್ರಿಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಅಕ್ಟೋಬರ್ ಆರಂಭದಲ್ಲಿ ವಿತರಣೆಗಾಗಿ ಸಿದ್ದತೆ ನಡೆಸುತ್ತಿದೆ.

ಗ್ರಾಹಕರ ಬೇಡಿಕೆಯೆಂತೆ ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್ ಸರಣಿ ಸ್ಕೂಟರ್ ಮಾದರಿಯನ್ನು ಎಸ್1 ಮತ್ತು ಎಸ್1 ಪ್ರೊ ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರಿನ ಅಧಿಕೃತ ಉತ್ಪಾದನಾ ಪ್ರಕ್ರಿಯೆ ಕೂಡಾ ಚಾಲನೆ ಪಡೆದುಕೊಂಡಿದೆ. ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣಗೊಂಡಿರುವ ಓಲಾ ವಾಹನ ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಮಾದರಿಯಾಗಿ ಎಸ್1 ಆವೃತ್ತಿಯ ಉತ್ಪಾದನೆ ಮೂಲಕ ಮುಂಬರುವ ದಿನಗಳಲ್ಲಿ ವಾರ್ಷಿಕವಾಗಿ 20 ಲಕ್ಷ ಸ್ಕೂಟರ್ ಉತ್ಪಾದನೆ ಮಾಡುವ ಗುರಿಹೊಂದಿದೆ.

ಓಲಾ ಕಂಪನಿಯು ಹೊಸ ವಾಹನ ಉತ್ಪಾದನಾ ಘಟಕವನ್ನು ಇಂಡಸ್ಟ್ರಿ 4.0 ತತ್ವದ ಆಧಾರದ ಮೇಲೆ ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣ ಮಾಡಿದ್ದು, ಹೊಸ ಘಟಕವು ದೇಶದ ಅತ್ಯಾಧುನಿಕ ವಾಹನ ಉತ್ಪಾದನಾ ಘಟಕಗಳಲ್ಲಿ ಒಂದಾಗಿದೆ.

ಆಧುನಿಕ ವಾಹನ ಉತ್ಪಾದನಾ ಘಟಕದಲ್ಲಿ ಸಾವಿರಾರು ಉದ್ಯೋಗಗಳ ಜೊತೆಗೆ ವಾಹನಗಳ ಬಿಡಿಭಾಗಗಳನ್ನು ಜೋಡಣೆ ಮಾಡಲು ಸುಮಾರು 5 ಸಾವಿರ ರೋಬೋಟ್‌ಗಳನ್ನು ಹೊಸ ಘಟಕದಲ್ಲಿ ನಿಯೋಜಿಸಲಾಗುತ್ತಿದ್ದು, ಬರೋಬ್ಬರಿ 500 ಎಕರೆ ವ್ಯಾಪ್ತಿ ಹೊಂದಿರುವ ಹೊಸ ವಾಹನ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳು ಉತ್ಪಾದನೆಯಾಗಲಿವೆ.

ಮೇಕ್ ಇನ್ ಇಂಡಿಯಾ ಫಾರ್ ವರ್ಲ್ಡ್ ಅಭಿಯಾನದಡಿ ಭಾರತದಲ್ಲೇ ಉತ್ಪಾದಿಸಿ ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡುವ ಯೋಜನೆಗೆ ಚಾಲನೆ ನೀಡಿರುವ ಓಲಾ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಯನ್ನು ಲ್ಯಾಟಿನ್ ಅಮೆರಿಕ, ಆಫ್ರಿಕಾ ರಾಷ್ಟ್ರಗಳಲ್ಲೂ ಮಾರಾಟ ಮಾಡಲಿದೆ.

ಇನ್ನು ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಅತ್ಯುತ್ತಮ ಬ್ಯಾಟರಿ ಪ್ಯಾಕ್, ಅಧಿಕ ಮೈಲೇಜ್ ರೇಂಜ್ ಮತ್ತು ಕೈಗೆಟುಕುವ ಬೆಲೆಗಳಲ್ಲಿ ಬಿಡುಗಡೆಗೊಳಿಸಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಸ್1 ಮತ್ತು ಎಸ್1 ಪ್ರೊ ವೆರಿಯೆಂಟ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಹೊಸ ಎಸ್1 ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 99,999 ಬೆಲೆ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ರೂ. 1,29,999 ಬೆಲೆ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯು ಕೆಲವು ರಾಜ್ಯಗಳಲ್ಲಿ ಹೆಚ್ಚುವರಿ ಸಬ್ಸಡಿ ನೀಡುತ್ತಿರುವ ಹಿನ್ನಲೆಯಲ್ಲಿ ಸಬ್ಸಡಿ ಹೊಂದಿರದ ರಾಜ್ಯಗಳಿಂತೂ ತುಸು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಕೇಂದ್ರ ಸರ್ಕಾರವು ಪ್ರತಿ ರಾಜ್ಯಗಳಿಗೂ ಅನ್ವಯವಾಗುವಂತೆ ಫೇಮ್ 2 ಯೋಜನೆ ಅಡಿ ಸಬ್ಸಡಿ ನೀಡುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಯ ತೀವ್ರವಾಗಿ ಹೆಚ್ಚಿಸುವ ಉದ್ದೇಶದಿಂದ ದೆಹಲಿ, ಮಹಾರಾಷ್ಟ್ರ, ರಾಜಸ್ತಾನ ಮತ್ತು ಗುಜರಾತ್ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಇವಿ ವಾಹನ ಖರೀದಿಸುವ ಗ್ರಾಹಕರಿಗೆ ಕೇಂದ್ರದ ಸಬ್ಸಡಿ ಜೊತೆ ರಾಜ್ಯ ಸರ್ಕಾರದಿಂದಲೂ ಸಬ್ಸಡಿ ನೀಡುತ್ತಿವೆ.

ಇದರಿಂದ ದೆಹಲಿಯಲ್ಲಿ ಎಸ್1 ಬೆಲೆ ರೂ. 85,0099 ಮತ್ತು ಎಸ್1 ಪ್ರೋ ಬೆಲೆ ರೂ. 1,10,149 ಇದ್ದಲ್ಲಿ ಗುಜರಾತ್‌ನಲ್ಲಿ ಎಸ್1 ಬೆಲೆ ರೂ. 79,999 ಮತ್ತು ಎಸ್1 ಪ್ರೊ ಬೆಲೆ ರೂ. 1,09,99 ಬೆಲೆ ಹೊಂದಿದೆ. ಹಾಗೆಯೇ ಮಹಾರಾಷ್ಟ್ರದಲ್ಲಿ ಎಸ್1 ಬೆಲೆ ರೂ. 94,999 ಮತ್ತು ಎಸ್1 ಪ್ರೊ ಬೆಲೆ ರೂ. 1,24,999 ಬೆಲೆ ಹೊಂದಿದ್ದು, ರಾಜಸ್ತಾನದಲ್ಲಿ ಎಸ್1 ಬೆಲೆ ರೂ. 89,968 ಮತ್ತು ಎಸ್1 ಪ್ರೊ ಬೆಲೆ ರೂ. 1,19,138 ಬೆಲೆ ಹೊಂದಿದೆ.

ಎಸ್1 ವೆರಿಯೆಂಟ್‌ನಲ್ಲಿ ಕಂಪನಿಯು 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, 8.5kW ಎಲೆಕ್ಟ್ರಿಕ್ ಮೋಟಾರ್ ಮೂಲಕ ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಈ ಮೂಲಕ ಎಸ್1 ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ನೀಡಲಿದ್ದು, ಹೋಂ ಚಾರ್ಜರ್ ಮೂಲಕ ಪೂರ್ತಿಯಾಗಿ ಚಾರ್ಜ್ ಆಗಲು 7 ಗಂಟೆ ತೆಗೆದುಕೊಳ್ಳುತ್ತದೆ.

ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಚಾರ್ಜ್ ಮಾಡಿದರೆ ಕೇವಲ 18 ನಿಮಿಷಗಳಲ್ಲಿ ಶೇ. 50 ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲು ದೇಶಾದ್ಯಂತ ಪ್ರಮುಖ 400 ನಗರಗಳಲ್ಲಿ 1 ಲಕ್ಷ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡುತ್ತಿದೆ.


Click it and Unblock the Notifications








