ಗ್ರಾಹಕರಿಗೆ ನೇರವಾಗಿ ಸ್ಕೂಟರ್ ಮಾರಾಟ ಆರಂಭಿಸಲಿದೆ ಓಲಾ ಎಲೆಕ್ಟ್ರಿಕ್
ಓಲಾ ಕಂಪನಿಯು ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಸ್ಕೂಟರ್ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ಹೊಸ ಸ್ಕೂಟರಿನಲ್ಲಿ ಓಲಾ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಸ್ಕೂಟರ್ ಖರೀದಿಗಾಗಿ ಕಂಪನಿಯು ರೂ. 499 ಮುಂಗಡ ಹಣದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಆರಂಭಿಸಿದೆ. ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಮಾರಾಟ ಮಳಿಗೆಗಳ ತೆರೆಯುವ ಸಿದ್ದತೆಯಲ್ಲಿದ್ದು, ಆನ್‌ಲೈನ್ ಬುಕ್ಕಿಂಗ್ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

ಕೋವಿಡ್ ಪರಿಣಾಮ ಈಗಾಗಲೇ ಬಹುತೇಕ ವಾಹನ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವ್ಯವಹಾರ ಕೈಗೊಳ್ಳುತ್ತಿದ್ದು, ನೇರವಾಗಿ ಹೊಸ ವಾಹನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಣೆ ಮಾಡಲಾಗುತ್ತಿದೆ.

ಓಲಾ ಕಂಪನಿಯು ಕೂಡಾ ಆನ್‌ಲೈನ್ ಬುಕ್ಕಿಂಗ್ ಮೂಲಕವೇ ಸ್ಕೂಟರ್ ಖರೀದಿ ಪ್ರಕ್ರಿಯೆ ನಡೆಸಲಿದ್ದು, ಪ್ರಮುಖ ನಗರಗಳ ಆಯ್ದ ಪ್ರದೇಶಗಳಲ್ಲಿ ಸ್ಟಾಕ್ ಯಾರ್ಡ್ ಮತ್ತು ಟೆಸ್ಟ್ ರೈಡ್ ಮಾದರಿಗಳಿಗಾಗಿ ಎಕ್ಸ್ಪಿರೆನ್ಸ್ ಸೆಂಟರ್‌ಗಳನ್ನು ತೆರೆಯಲಿದೆ.

ಎಕ್ಸ್ಪಿರೆನ್ಸ್ ಸೆಂಟರ್‌ಗಳಲ್ಲಿ ಟೆಸ್ಟ್ ರೈಡ್ ನಡೆಸಿದ ನಂತರ ವಾಹನ ಖರೀದಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ನಡೆಯಲಿದ್ದು, ಅತಿ ಕಡಿಮೆ ಪತ್ರ ವ್ಯವಹಾರಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ವಾಹನ ವಿತರಣೆ ಮಾಡಲಾಗುತ್ತದೆ.

ಎಕ್ಸ್ಪಿರೆನ್ಸ್ ಸೆಂಟರ್‌ಗಳಲ್ಲಿಯೇ ಸರ್ವಿಸ್ ಸೆಂಟರ್ ಸಹ ತೆರೆಯಬಹುದಾಗಿದ್ದು, ಓಲಾ ಗ್ರಾಹಕರಿಗಾಗಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ನಗರದ ಪ್ರಮುಖ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗಲಿವೆ.

ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಎರಡು ಮಾದರಿಯಲ್ಲಿ ಬ್ಯಾಟರಿ ಪ್ಯಾಕ್ ನೀಡುವ ಸಾಧ್ಯತೆಗಳಿದ್ದು, ಸಿಂಗಲ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್‌ಗೆ 140 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ ಡ್ಯುಯಲ್ ಬ್ಯಾಟರಿ ಬ್ಯಾಕ್ಅಪ್ ಹೊಂದಿರುವ ಮಾದರಿಯು ಗರಿಷ್ಠ 240 ಕಿ.ಮೀ ಮೈಲೇಜ್ ಪಡೆಯಬಹುದಾಗಿದೆ.

ಈ ಮೂಲಕ ಓಲಾ ಹೊಸ ಸ್ಕೂಟರ್ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

ಹೊಸ ವಾಹನ ಉತ್ಪಾದನಾ ಯೋಜನೆಗಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಸದ್ಯ ಇವಿ ಸ್ಕೂಟರ್ ಮಾತ್ರ ಉತ್ಪಾದನೆ ಮಾಡಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ತ್ರಿ ಚಕ್ರ ವಾಹನಗಳು ಮತ್ತು ಇವಿ ಕಾರುಗಳನ್ನು ಸಹ ಅಭಿವೃದ್ದಿಪಡಿಸಲಿದೆ.

ವಾಹನ ಉತ್ಪಾದನೆಗಾಗಿ ಓಲಾ ಕಂಪನಿಯು ತಮಿಳುನಾಡಿನ ಹೊಸರಿನಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುತ್ತಿದ್ದು, ಹೊಸ ಉತ್ಪಾದನಾ ಘಟಕವು ಬರೋಬ್ಬರಿ 500 ಎಕರೆ ವ್ಯಾಪ್ತಿಯಲ್ಲಿ ಅಭಿವೃದ್ದಿಗೊಳ್ಳುತ್ತಿದೆ.

ಓಲಾ ಹೊಸ ವಾಹನ ಉತ್ಪದನಾ ಘಟಕವು ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡಬಹುದಾದ ಸಾಮರ್ಥ್ಯ ಹೊಂದಿದ್ದು, ಹೊಸ ಘಟಕವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಿದೆ.


Click it and Unblock the Notifications








