ಅತಿಹೆಚ್ಚು ಮೈಲೇಜ್ ನೀಡುವ ಸಿಂಪಲ್ ಎನರ್ಜಿಯ ಇವಿ ಉತ್ಪಾದನೆಯ ಮೇಲೆ ಭಾರೀ ಪ್ರಮಾಣದ ಹೂಡಿಕೆ
ಬೆಂಗಳೂರು ಮೂಲದ ಸಿಂಪಲ್ ಎನರ್ಜಿ(Simple Energy) ಕಂಪನಿಯು ತನ್ನ ಬಹುನೀರಿಕ್ಷಿತ ಸಿಂಪಲ್ ಒನ್(Simple One) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಸ್ಕೂಟರ್ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿದೆ.

ಹೊಸ ಇವಿ ಸ್ಕೂಟರ್ ಮಾದರಿಯು ತಾಂತ್ರಿಕ ಅಂಶಗಳಲ್ಲಿ, ಬ್ಯಾಟರಿ ರೇಂಜ್ ಮತ್ತು ಬೆಲೆ ವಿಚಾರವಾಗಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಎಲ್ಲಾ ಇವಿ ಸ್ಕೂಟರ್‌ಗಳಿಗೂ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ. ಸದ್ಯಕ್ಕೆ ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಬಿಡುಗಡೆ ಮಾಡಿ ಬುಕ್ಕಿಂಗ್ ಸ್ವಿಕರಿಸುತ್ತಿರುವ ಸಿಂಪಲ್ ಎನರ್ಜಿ ಕಂಪನಿಯು ಉದ್ಯಮ ಕಾರ್ಯಾಚರಣೆ ವಿಸ್ತರಣೆಗಾಗಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಶೇ.90ರಷ್ಟು ಸ್ವದೇಶಿ ನಿರ್ಮಿತ ಬಿಡಿಭಾಗಗಳೊಂದಿಗೆ ಅಭಿವೃದ್ದಿ ಹೊಂದಿರುವುದು ಬಜೆಟ್ ಬೆಲೆಯಲ್ಲಿ ಸ್ಕೂಟರ್ ಬಿಡುಗಡೆಗೆ ಪ್ರಮುಖ ಕಾರಣವಾಗಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಯೋಜನೆಯಲ್ಲಿ ಇದೀಗ ಬೃಹತ್ ಪ್ರಮಾಣದ ಪೂರ್ವ-ಸರಣಿಯ ಫಂಡಿಂಗ್ ಸಂಗ್ರಹವಾಗಿದೆ.

ಪ್ರಿ-ಸೀರೀಸ್ ಫಂಡಿಂಗ್‌ನಲ್ಲಿ ಸುಮಾರು 15 ಮಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹವಾಗುವ ನೀರಿಕ್ಷೆಯಲ್ಲಿದ್ದ ಸಿಂಪಲ್ ಎನರ್ಜಿ ಕಂಪನಿಯು ಮೊದಲ ಹಂತದಲ್ಲಿಯೇ ದಾಖಲೆ ಮಟ್ಟದ ಫಂಡಿಂಗ್ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಿ-ಸೀರೀಸ್ ಫಂಡಿಂಗ್‌ನಲ್ಲಿ ಸಿಂಪಲ್ ಎನರ್ಜಿ ಕಂಪನಿಯಲ್ಲಿ ಸುಮಾರು 21 ಮಿಲಿಯನ್ ಅಮೆರಿಕನ್ ಡಾಲರ್(ಸುಮಾರು ರೂ. 156 ಕೋಟಿ) ಹೂಡಿಕೆಯಾಗಿದೆ.

ಸಿಂಪಲ್ ಎನರ್ಜಿ ಕಂಪನಿಯ ಪ್ರಿ-ಸೀರೀಸ್ ಫಂಡಿಂಗ್‌ನಲ್ಲಿ ಸತ್ವ ಗ್ರೂಪ್, ಅಥಿಯಾಸ್ ಗ್ರೂಪ್ ಸೇರಿದಂತೆ ಪ್ರಮುಖ ಉದ್ಯಮ ಸಂಸ್ಥೆಗಳು ಹೊಸ ಇವಿ ವಾಹನ ಉದ್ಯಮದ ಮೇಲೆ ಹೊಸ ನೀರಿಕ್ಷೆಯೊಂದಿಗೆ ಬಂಡವಾಳ ಹೂಡಿಕೆ ಮಾಡಿದ್ದು, ಹೊಸ ಹೂಡಿಕೆಯನ್ನು ಸಿಂಪಲ್ ಎನರ್ಜಿ ಕಂಪನಿಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು, ಹೊಸ ಉತ್ಪನ್ನ ಅಭಿವೃದ್ಧಿಯನ್ನು ವೇಗಗೊಳಿಸಲು ಮತ್ತು ಮಾರಾಟ ಮಳಿಗೆಗಳನ್ನು ವಿಸ್ತರಿಸಲು ಬಳಸಲಾಗುವುದು ಎಂದು ಹೇಳಿಕೊಂಡಿದೆ.

ಸದ್ಯ ಉತ್ಪಾದನಾ ಹಂತದಲ್ಲಿ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ಡಿಸೆಂಬರ್ ಅಂತ್ಯದಲ್ಲಿ ಅಥವಾ ಮುಂಬರುವ ಜನವರಿ ಮಧ್ಯಂತರದಲ್ಲಿ ವಿತರಣೆ ಆರಂಭವಾಗಲಿದ್ದು, ಇದುವರೆಗೆ ಹೊಸ ಇವಿ ಸ್ಕೂಟರ್ ಖರೀದಿಗಾಗಿ ಸುಮಾರು 40 ಸಾವಿರಕ್ಕೂ ಹೆಚ್ಚು ಗ್ರಾಹಕರು ಬುಕ್ಕಿಂಗ್ ದಾಖಲಿಸಿದ್ದಾರೆ.

ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷ ಬೆಲೆ ಹೊಂದಿದ್ದು, ವಿತರಣೆ ಆರಂಭಕ್ಕೂ ಮುನ್ನ ಕಂಪನಿಯು ಮುಂದಿನ ಕೆಲವೇ ವಾರಗಳಲ್ಲಿ ಟೆಸ್ಟ್ ರೈಡ್ ಆರಂಭಿಸುವ ಸಿದ್ದತೆಯಲ್ಲಿದೆ.

ಸ್ಟಾರ್ಟ್ಅಪ್ ಕಂಪನಿಯಾಗಿರುವ ಸಿಂಪಲ್ ಎನರ್ಜಿ ಕಂಪನಿಯು ಹಲವು ವರ್ಷಗಳ ಪ್ರಯತ್ನದ ನಂತರ ಸಿಂಪಲ್ ಒನ್ ಮಾದರಿಯನ್ನು ಹೊರತಂದಿದ್ದು, ಹೊಸ ಸ್ಕೂಟರ್ ಮಾದರಿಯನ್ನು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಅತ್ಯುತ್ತಮ ಮೈಲೇಜ್ ಪ್ರೇರಿತ ಬ್ಯಾಟರಿ ರೇಂಜ್ ಮತ್ತು ಕೈಗೆಟುವ ಬೆಲೆಯಲ್ಲಿ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.

ಇನ್ನೊಂದು ವಿಶೇಷ ಅಂದರೆ ಸಿಂಪಲ್ ಎನರ್ಜಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಮ್ಮ ಬೆಂಗಳೂರಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದ ಸಂಭ್ರಮಕ್ಕಾಗಿ ಹೊಸ ಸ್ಕೂಟರ್‌ನಲ್ಲಿ 'ನಮ್ಮ ರೆಡ್' ಎನ್ನುವ ವಿಶೇಷ ಬಣ್ಣದ ಆಯ್ಕೆ ನೀಡಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಗ್ರೆಸ್ ವೈಟ್, ಅಜ್ಯುರ್ ಬ್ಲ್ಯೂ, ಬ್ರೆನೆಜ್ ಬ್ಲ್ಯಾಕ್ ಮತ್ತು ನಮ್ಮ ರೆಡ್ ಬಣ್ಣಗಳ ಆಯ್ಕೆ ನೀಡಿದ್ದು, ಹೊಸ ಸ್ಕೂಟರ್‌ನಲ್ಲಿ ಬೆಲೆಗೆ ತಕ್ಕಂತೆ ಅತ್ಯುತ್ತಮ ಫೀಚರ್ಸ್, ಬ್ಯಾಟರಿ ರೇಂಜ್ ನೀಡಲಾಗಿದೆ.

ಸಿಂಪಲ್ ಎನರ್ಜಿ ಕಂಪನಿಯು ದೇಶದ 13 ರಾಜ್ಯಗಳ ಪ್ರಮುಖ ನಗರಗಳಲ್ಲಿ ಸದ್ಯ ಮಾರಾಟ ಸೌಲಭ್ಯವನ್ನು ಆರಂಭಿಸುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿದಂತೆ ಇವಿ ಸ್ಕೂಟರ್ ಮಾರಾಟ ಸೌಲಭ್ಯವು ಹಂತ-ಹಂತವಾಗಿ ದೇಶದ ಪ್ರಮುಖ ದೇಶಗಳಲ್ಲಿ ವಿಸ್ತರಣೆಯಾಗಲಿದೆ.

ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ತ್ರಿಕೊನಾಕಾರದ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಹೆಡ್‌ಲ್ಯಾಂಪ್, ಸೈಡ್ ಬೈ ಟರ್ನ್ ಸಿಗ್ನಲ್ ಇಂಡಿಕೇಟರ್, ಫ್ಲ್ಯಾಟ್ ಫುಟ್‌ಬೋರ್ಡ್, ಅಯಾಲ್ ವ್ಹೀಲ್, ಸ್ಪೋರ್ಟಿ ರಿಯರ್ ವ್ಯೂ ಮಿರರ್, 30-ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ.

ಹೊಸ ಸಿಂಪಲ್ ಎನರ್ಜಿ ಇವಿ ಸ್ಕೂಟರ್‌ನಲ್ಲಿ 4.5KW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.8kWh ಲೀಥಿಯಂ ಅಯಾನ್ ಬ್ಯಾಟರಿ(ಡ್ಯುಯಲ್ ಬ್ಯಾಟರಿ) ಜೋಡಣೆ ಮಾಡಿದ್ದು, ಪ್ರತಿ ಚಾರ್ಚ್‌ಗೆ ವಿವಿಧ ರೈಡ್ ಮೋಡ್‌ಗಳ ಚಾಲನಾ ಶೈಲಿ ಆಧಾರದ ಮೇಲೆ ಕನಿಷ್ಠ 203 ಕಿ.ಮೀ ನಿಂದ ಗರಿಷ್ಠ 236 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಪ್ರತಿ ಗಂಟೆಗೆ 105 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಸಿಂಪಲ್ ಒನ್ ಸ್ಕೂಟರ್ 72 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 2.95 ಸೆಕೆಂಡುಗಳಲ್ಲಿ ಸೊನ್ನೆಯಿಂದ 40ಕಿ.ಮೀ ಕ್ವಿಕ್ ಸ್ಪೀಡ್ ಪಡೆದುಕೊಳ್ಳಲಿದ್ದು, ಹೊಸ ಸ್ಕೂಟರ್ ಅನ್ನು ಸಿಂಪಲ್ ಕಂಪನಿಯು ಟ್ಯೂಬಲರ್ ಫ್ರೆಮ್ ಬಳಕೆ ಮಾಡಿದೆ.

ಜೊತೆಗೆ ಸಿಂಪಲ್ ಒನ್ ಸ್ಕೂಟರ್ ಮಾದರಿಯಲ್ಲಿ 1024x600 ಫಿಕ್ಸೆಲ್ ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂಥ್ ಮತ್ತು 4ಜಿ ಇಂಟರ್‌ನೆಟ್ ಸಂಪರ್ಕಕ್ಕಾಗಿ ಕನೆಕ್ಟೆಡ್ ಟೆಕ್ನಾಲಜಿ ನೀಡಲಾಗಿದೆ. ಕನೆಕ್ಟೆಡ್ ಫೀಚರ್ಸ್‌ನಲ್ಲಿ ಜಿಯೋ ಫೆನ್ಸಿಂಗ್, ಮ್ಯೂಜಿಕ್ ಕಂಟ್ರೋಲ್, ಎಸ್ಒಎಸ್ ಮೆಸೇಜ್, ವೆಹಿಕಲ್ ಟ್ರ್ಯಾಕಿಂಗ್, ಡ್ಯಾಕುಮೆಂಟ್ ಸ್ಟೋರೇಜ್, ಫೈಂಡ್ ಮೈ ಬೈಕ್ ಸೌಲಭ್ಯಗಳಿವೆ.


Click it and Unblock the Notifications








