ಅಗಸ್ಟ್ 15ರಂದು ರೂ.1947 ಪಾವತಿಸಿ ಸಿಂಪಲ್ ಓನ್ ಸ್ಕೂಟರ್‌ಗೆ ಬುಕ್ಕಿಂಗ್ ದಾಖಲಿಸಿ!
ಸಿಂಪಲ್ ಎನರ್ಜಿ ಕಂಪನಿಯು ಹೊಸ ಸ್ಕೂಟರ್ ಬಿಡುಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಸಿಂಪಲ್ ಎನರ್ಜಿ ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನವೇ ಗ್ರಾಹಕರಲ್ಲಿ ಕುತೂಹಲ ಹುಟ್ಟುಹಾಕಿದೆ.

ಕೇಂದ್ರ ಸರ್ಕಾರವು ಇವಿ ವಾಹನಗಳ ಉತ್ತೇಜನ ಜಾರಿಗೆ ತಂದಿರುವ ಸಬ್ಸಡಿ ಯೋಜನೆಗಳ ಪರಿಣಾಮ ಹಲವಾರು ಸ್ಟಾರ್ಟ್ಅಪ್ ಇವಿ ವಾಹನ ಕಂಪನಿಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ನಮ್ಮ ಬೆಂಗಳೂರು ಮೂಲದ ಸಿಂಪಲ್ ಎನರ್ಜಿ ಕಂಪನಿಯು ಕೂಡಾ ಹೊಸದಾಗಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಲಗ್ಗೆಯಿಡುವುದರ ಮೂಲಕ ಹೊಸ ಭರವಸೆ ಮೂಡಿಸಿದೆ.

ಸಿಂಪಲ್ ಎನರ್ಜಿ ಕಂಪನಿಯು ತನ್ನ ಬಹುನೀರಿಕ್ಷಿತ ಸಿಂಪಲ್ ಒನ್ ಸ್ಕೂಟರ್ ಮಾದರಿಯನ್ನು ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಮೂಲಕ ಉತ್ಪಾದನೆಗೆ ಚಾಲನೆ ನೀಡಿದ್ದು, ಇದೇ ತಿಂಗಳು 15ರಂದು ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

ಹೊಸ ಸ್ಕೂಟರ್ ಬಿಡುಗಡೆಯ ದಿನದಂದೇ ಕಂಪನಿಯು ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಿದ್ದು, ಸ್ವಾತಂತ್ರ್ಯ ದಿನಾಚರಣೆ ವಿಶೇಷತೆಯಿರುವ ಹಿನ್ನಲೆಯಲ್ಲಿ ಕಂಪನಿಯು ಹೊಸ ಇವಿ ಸ್ಕೂಟರ್ ಬುಕ್ಕಿಂಗ್ ಮಾಡಲು ರೂ. 1,947 ಬೆಲೆ ನಿಗದಿಪಡಿಸಿದೆ.

ಸಿಂಪಲ್ ಎನರ್ಜಿ ಸ್ಕೂಟರ್ ಖರೀದಿಗಾಗಿ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ತಾಣದ ಮೂಲಕವೇ ಬುಕ್ಕಿಂಗ್ ಮಾಡಬಹುದಾಗಿದ್ದು, ಬುಕ್ಕಿಂಗ್ ನಂತರ ಗ್ರಾಹಕರಿಗೆ ಮುಂದುವರೆಯುವ ಆಸಕ್ತಿ ಇಲ್ಲವಾದರೆ ಬುಕ್ಕಿಂಗ್ ಹಣವನ್ನು ಸಂಪೂರ್ಣವಾಗಿ ಮರಳಿಸಲಾಗುತ್ತದೆ.

ಇನ್ನು ಹೊಸ ನೀರಿಕ್ಷೆಯೊಂದಿಗೆ ಆಟೋ ಉದ್ಯಮಕ್ಕೆ ಪ್ರವೇಶಿಸುತ್ತಿರುವ ಸಿಂಪಲ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಇವಿ ಸ್ಕೂಟರ್‌ನಲ್ಲಿ ಹಲವಾರು ಫೀಚರ್ಸ್ ಜೋಡಣೆಯೊಂದಿಗೆ ಅತ್ಯುತ್ತಮ ಮೈಲೇಜ್ ಸ್ಕೂಟರ್ ಮಾದರಿಯಾಗಿ ಬಿಡುಗಡೆ ಮಾಡುತ್ತಿದೆ.

ಹೊಸ ಸ್ಕೂಟರ್‌ನಲ್ಲಿರುವ ಕೆಲವು ಆಕರ್ಷಕ ತಾಂತ್ರಿಕ ಸೌಲಭ್ಯಗಳು ಹೊಸ ಇವಿ ಸ್ಕೂಟರ್ ಮೌಲ್ಯವನ್ನು ಹೆಚ್ಚಿಸಲಿದ್ದು, ಹೊಸ ಇವಿ ಸ್ಕೂಟರ್ ಮಾದರಿಯನ್ನು ಕಂಪನಿಯು ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ಮಾದರಿಯಾಗಿ ಅಭಿವೃದ್ದಿಗೊಳಿಸಿದೆ.

ಸಿಂಪಲ್ ಎನರ್ಜಿ ಕಂಪನಿಯು ಹೊಸ ಸ್ಕೂಟರ್‌ನಲ್ಲಿ 4.8 ಕಿಲೋವ್ಯಾಟ್ ಸಾಮಾರ್ಥ್ಯದ ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 240 ಕಿ.ಮೀ ಮೈಲೇಜ್ ಹಿಂದಿರುಗಿಸುವ ಭರವಸೆ ನೀಡಿದೆ.

4.8 ಕಿಲೋವ್ಯಾಟ್ ಸಾಮಾರ್ಥ್ಯದ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಗೃಹ ಬಳಕೆಯ ಎಸಿ ಚಾರ್ಜರ್ ಮೂಲಕ 40 ನಿಮಿಷಗಳಲ್ಲಿ ಪೂರ್ಣ ಪ್ರಮಾಣದ ಚಾರ್ಜ್ ಮಾಡಬಹುದಾದರೆ ಡಿಸಿ ಫಾಸ್ಟ್ ಚಾರ್ಜಿಂಗ್ ಸೆಂಟರ್‌ಗಳ ಮೂಲಕ 17 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರಿನ ಅಧಿಕೃತ ಮೈಲೇಜ್ ಪ್ರಮಾಣವನ್ನು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯೇ ಪ್ರಮಾಣೀಕರಿಸಿದ್ದು, ಹೊಸ ಸ್ಕೂಟರಿನ ಚಾರ್ಜಿಂಗ್ ಅವಧಿಯು ಇತರೆ ಇವಿ ಸ್ಕೂಟರ್‌ಗಳಿಂತಲೂ ಅತಿ ಕಡಿಮೆ ಅವಧಿಯಲ್ಲಿ ಪೂರ್ಣಪ್ರಮಾಣದ ಚಾರ್ಜ್ ಮಾಡಬಹುದಾಗಿದೆ.

ಜೊತೆಗೆ ಕ್ವಿಕ್ ಚಾರ್ಜ್ ಟೆಕ್ನಾಲಜಿ ಹೊಂದಿರುವ ಹೊಸ ಸ್ಕೂಟರ್‌ನಲ್ಲಿ ಸಾಮಾನ್ಯ ಚಾರ್ಜರ್ ಮೂಲಕವೇ ಕೇವಲ ಒಂದು ನಿಮಿಷ ಚಾರ್ಜ್ ಮಾಡಿದರೂ ಕನಿಷ್ಠ 2.5 ಕಿ.ಮೀ ಮೈಲೇಜ್ ಹಿಂಪಡೆಯಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಕಂಪನಿಯು ಪ್ರಮುಖ ರೆಸ್ಟೊರೆಂಟ್‌ಗಳು, ಮಾಲ್, ಶಾಂಪಿಂಗ್ ಕಾಪ್ಲೆಕ್ಸ್‌ಗಳೊಂದಿಗೆ ಸಹಭಾಗಿತ್ವದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲು ಯೋಜಿಸಿದೆ.

ಮಾಹಿತಿಗಳ ಪ್ರಕಾರ, ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಬಿಡುಗಡೆಯ ನಂತರ ಸದ್ಯಕ್ಕೆ ದೇಶದ ಪ್ರಮುಖ 13 ರಾಜ್ಯಗಳಲ್ಲಿ ಮಾತ್ರ ಮಾರಾಟಗೊಳ್ಳಲಿದ್ದು, ಸಾರ್ವಜನಿಕ ಬಳಕೆಯ ಚಾರ್ಜಿಂಗ್ ಸೌಲಭ್ಯಗಳು ಹೆಚ್ಚಿದಂತೆ ಇತರೆ ರಾಜ್ಯಗಳಲ್ಲೂ ಮಾರಾಟ ಆರಂಭವಾಗಲಿದೆ.

ಸಿಂಪಲ್ ಎನರ್ಜಿ ಕಂಪನಿಯು ಸಹ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲು ಮೊದಲ ಹಂತದಲ್ಲಿ ವಿವಿಧ ನಗರಗಳಲ್ಲಿ 300 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯುವುದಾಗಿ ಹೇಳಿಕೊಂಡಿದ್ದು, ಗೃಹ ಬಳಕೆಯ ವಿದ್ಯುತ್ ಸಂಪರ್ಕ ಹೊಂದಿರುವ ಎಸಿ ಚಾರ್ಜಿಂಗ್ ಪಾಯಿಂಟ್‌ಗಳಿಂತ ಹೈ ವೋಲ್ಟೆಜ್ ವಿದ್ಯುತ್ ಪೂರೈಕೆ ಹೊಂದಿರುವ ಡಿಸಿ ಚಾರ್ಜರ್ ಪಾಯಿಂಟ್ ಎಲೆಕ್ಟ್ರಿಕ್ ವಾಹನಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣ ಪ್ರಮಾಣದ ಚಾರ್ಜ್ ಆಗಲಿವೆ.

ಇದಕ್ಕಾಗಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಅಗತ್ಯವಿರುವ ಎಲ್ಲಾ ಅಗತ್ಯ ಪರವಾನಿಗೆ ನೀಡಲಾಗುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲಾಗುತ್ತಿದೆ.

ಹೀಗಾಗಿ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಮಟ್ಟದಲ್ಲಿ ಬಳಕೆಯಾಗುವ ನೀರಿಕ್ಷೆಯಿರುವುದರಿಂದ ಇವಿ ಸ್ಕೂಟರ್ ವಿಭಾಗದಲ್ಲಿ ಸಿಂಪಲ್ ಎನರ್ಜಿ ಕಂಪನಿಯು ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಕಂಪನಿಯು ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆಯೊಂದಿಗೆ ವಾರ್ಷಿಕ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಯೋಜನೆಯಲ್ಲಿದೆ.


Click it and Unblock the Notifications