ದೀಪಾವಳಿ ವಿಶೇಷ: Yamaha Fascino ಮತ್ತು Ray-ZR 125 ಸ್ಕೂಟರ್ ಖರೀದಿ ಮೇಲೆ ಹೊಸ ಆಫರ್
ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಯಮಹಾ ಇಂಡಿಯಾ ಕಂಪನಿಯು ಮುಂಬರುವ ದೀಪಾವಳಿ ವಿಶೇಷವಾಗಿ ತನ್ನ ಪ್ರಮುಖ ಸ್ಕೂಟರ್‌ಗಳ ಮೇಲೆ ವಿಶೇಷ ಆಫರ್ ನೀಡುತ್ತಿದ್ದು, ಹೊಸ ಆಫರ್ ಈ ತಿಂಗಳು ಕೊನೆಯ ತನಕ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಅನ್ವಯಿಸಲಿದೆ.

ಯಮಹಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ಪ್ರಮುಖ ದ್ವಿಚಕ್ರ ವಾಹನಗಳ ಮಾರಾಟ ತನ್ನದೆ ಆದ ಜನಪ್ರಿಯತೆ ಹೊಂದಿದ್ದು, ಕೋವಿಡ್ ಪರಿಣಾಮ ಏರಿಳಿತವಾಗುವ ಹೊಸ ವಾಹನಗಳ ಮಾರಾಟ ಸ್ಥಿರತೆಗಾಗಿ ಗ್ರಾಹಕರನ್ನು ಸೆಳೆಯಲು ಪ್ರಮುಖ ಆಫರ್‌ಗಳನ್ನು ಘೋಷಣೆ ಮಾಡಿದೆ.

ಫ್ಯಾಸಿನೋ 125 ಮತ್ತು ರೇ ಜೆಡ್ಆರ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿರುವ ಯಮಹಾ ಕಂಪನಿಯು ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 3 ಸಾವಿರದಿಂದ ರೂ. 4 ಸಾವಿರದಷ್ಟು ಕ್ಯಾಶ್‌ಬ್ಯಾಕ್ ಆಫರ್ ನೀಡಿದ್ದು, ಹೊಸ ಸ್ಕೂಟರ್‌ಗಳಿಗೆ ಕಡಿಮೆ ಬಡ್ಡಿದರದಲ್ಲಿ ಗರಿಷ್ಠ ಸಾಲಸೌಲಭ್ಯ ನೀಡುತ್ತಿದೆ.

ಯಮಹಾ ಕಂಪನಿಯು ಹೊಸ ಆಫರ್‌ಗಳನ್ನು ಫ್ಯಾಸಿನೋ 125 ಮತ್ತು ರೇ ಜೆಡ್ಆರ್ ಮಾದರಿಗಳಿಗೆ ಮಾತ್ರ ಘೋಷಣೆ ಮಾಡಿದ್ದು, ಇತ್ತೀಚೆಗೆ ಬಿಡುಗಡೆಯಾದ ಏರೋಕ್ಸ್ 155 ಸ್ಕೂಟರ್ ಮತ್ತು ಯಾವುದೇ ಬೈಕ್ ಮಾದರಿಗಳಿಗೆ ಆಫರ್ ನೀಡುತ್ತಿಲ್ಲ.

ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಸದ್ಯ ಮೂರನೇ ಸ್ಥಾನ ಪಡೆದಿರುವ ಫ್ಯಾಸಿನೋ 125 ಮತ್ತು ರೇ ಜೆಡ್ಆರ್ 125 ಮಾದರಿಗಳು ಆಕರ್ಷಕ ವಿನ್ಯಾಸದೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಸ್ಕೂಟರ್ ಮಾದರಿಗಳಾಗಿದ್ದು, ಯಮಹಾ ಹೊಸ ಸ್ಕೂಟರ್ ಖರೀದಿಗೆ ಇದು ಸುವರ್ಣಾವಕಾಶ ಎನ್ನಬಹುದು.

125ಸಿಸಿ ಸ್ಕೂಟರ್‌ಗಳ ವಿಭಾಗದಲ್ಲಿ ಯಮಹಾ ಸ್ಕೂಟರ್‌ಗಳು ಕೂಡಾ ಮುಂಚೂಣಿಯಲ್ಲಿದ್ದು, ಕಂಪನಿಯು ಇತ್ತೀಚೆಗೆ ಫ್ಯಾಸಿನೋ 125 ಮತ್ತು ರೇ ಜೆಡ್ಆರ್ ಮಾದರಿಗಳ ಹೈಬ್ರಿಡ್ ಮಾದರಿಯನ್ನು ಬಿಡುಗಡೆಗೊಳಿಸಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

2020ರಲ್ಲಿ ಫ್ಯಾಸಿನೋ ಮಾದರಿಯನ್ನು 125ಸಿಸಿ ಫ್ಯೂಲ್ ಇಂಜೆಕ್ಷೆಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದ ಯಮಹಾ ಕಂಪನಿಯು ಇದೀಗ 2021ರ ಮಾದರಿಯಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಡ್ರಮ್ ಮತ್ತು ಡಿಸ್ಕ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರಿನ ಡ್ರಮ್ ವೆರಿಯೆಂಟ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 70 ಸಾವಿರಕ್ಕೆ ಮತ್ತು ಡಿಸ್ಕ್ ವೆರಿಯೆಂಟ್ ಬೆಲೆಯನ್ನು ರೂ. 76,530 ಗಳಿಗೆ ನಿಗದಿಪಡಿಸಲಾಗಿದೆ.

ನವೀಕೃತ ರೇ ಜೆಡ್ಆರ್ ಎಫ್ಐ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಫ್ಐ ಹೈಬ್ರಿಡ್ ಸ್ಕೂಟರ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 76,830ಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 83,830 ಬೆಲೆ ಹೊಂದಿವೆ.

ರೇ ಜೆಡ್ಆರ್ ಎಫ್ಐ ಮಾದರಿಯಲ್ಲಿ ಡ್ರಮ್(ರೂ.76,830) ಮತ್ತು ಡಿಸ್ಕ್(ರೂ.79,830) ಮಾದರಿಗಳನ್ನು ನೀಡಲಾಗಿದ್ದು, ಸ್ಪೋರ್ಟಿ ವಿನ್ಯಾಸದ ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಫ್ಐ ಹೈಬ್ರಿಡ್ ಆವೃತ್ತಿಯು ಸಿಂಗಲ್ ಮಾದರಿಯೊಂದಿಗೆ ರೂ. 83,830 ಬೆಲೆ ಹೊಂದಿದೆ.

ಯಮಹಾ ಕಂಪನಿಯು ಮೂರು ಸ್ಕೂಟರ್ ಮಾದರಿಗಳಲ್ಲೂ ಒಂದೇ ಮಾದರಿಯ 125 ಸಿಸಿ ಬ್ಲೂ ಕೋರ್ ಎಂಜಿನ್ ಆಯ್ಕೆ ಹೊಂದಿದ್ದು, 8.2 ಬಿಎಚ್‌ಪಿ ಮತ್ತು 10.3 ಎನ್ಎಂ ಟಾರ್ಕ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನವು ಇಂಧನ ದಕ್ಷತೆಗೆ ಸಹಕಾರಿಯಾಗಿದೆ.

ಇದರಲ್ಲಿ ಹೊಸದಾಗಿ ಜೋಡಣೆ ಮಾಡಲಾಗಿರುವ ಸ್ಟಾರ್ಟರ್ ಮೋಟಾರ್ ಜನರೇಟರ್ (ಎಸ್‌ಎಂಜಿ) ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಇಂಧನ ದಕ್ಷತೆಗೆ ಸಾಕಷ್ಟು ಸಹಕಾರಿಯಾಗಿದ್ದು, ಹೈಬ್ರಿಡ್ ತಂತ್ರಜ್ಞಾನವು ಸ್ಕೂಟರ್ ಚಾಲನೆಯ ಸಂದರ್ಭದಲ್ಲಿ ಪವರ್ ಅಸಿಸ್ಟ್ ಆಗಿ ಕಾರ್ಯನಿರ್ವಹಿಸಲಿದೆ.

ಸ್ಕೂಟರ್ ನಿಲುಗಡೆಯಾಗಿ ಸ್ಟಾರ್ಟ್ ಆದ ನಂತರ ಮೂರು ಸೇಕೆಂಡ್‌ಗಳ ಕಾಲ ಎಂಜಿನ್ ಚಾಲನೆಗೆ ಪವರ್ ಅಸಿಸ್ಟ್ ಆಗಿ ಸಹಕರಿಸುವ ಹೈಬ್ರಿಡ್ ತಂತ್ರಜ್ಞಾನವು ಎಂಜಿನ್ ಆರಂಭದಲ್ಲಿನ ಇಂಧನ ದಹಿಸುವಿಕೆಯನ್ನು ಕಡಿಮೆಗೊಳಿಸಿ ಮೈಲೇಜ್ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.

ವಾಹನ ದಟ್ಟಣೆಯ ಸಂದರ್ಭದಲ್ಲಿ ವಾಹನಗಳನ್ನು ಪದೇ ಪದೇ ಎಂಜಿನ್ ಆನ್ ಮತ್ತು ಆಫ್ ಮಾಡಿದಾಗ ಆಗುವ ಇಂಧನ ವ್ಯರ್ಥವು ಮೈಲೇಜ್‌ಗೆ ಹೊಡೆತ ನೀಡಲಿದ್ದು, ಯಮಹಾ ಹೊಸ ತಂತ್ರಜ್ಞಾನವು ಇಂಧನ ವ್ಯರ್ಥ ತಡೆದು ದಕ್ಷತೆಯನ್ನು ಹೆಚ್ಚಿಸಲು (ಪ್ರತಿ ಲೀಟರ್‌ಗೆ 55-60 ಕಿ.ಮೀ) ಸಹಕಾರಿಯಾಗುತ್ತದೆ.

125 ಸಿಸಿ ವಿಭಾಗದಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಯು ಯಮಹಾ ಸ್ಕೂಟರ್ ಮಾದರಿಗಳಿಗೆ ಸಲ್ಲಲಿದ್ದು, ಜೊತೆಗೆ ಹೊಸ ಸ್ಕೂಟರ್‌ನಲ್ಲಿ ನೀಡಲಾಗಿರುವ ಎಂಜಿನ್ ಕಟ್ ಆಫ್ ಸ್ವಿಚ್ ತಂತ್ರಜ್ಞಾನವು ಸೈಡ್ ಸ್ಟ್ಯಾಂಡ್ ತೆಗೆಯದ ಹೊರತು ಸ್ಕೂಟರ್ ಚಾಲನೆ ಮಾಡಲು ಸಾಧ್ಯವಿಲ್ಲರುವುದು ಕೂಡಾ ಪ್ರಮುಖ ಫೀಚರ್ ಎನ್ನಬಹುದು.


Click it and Unblock the Notifications








