ಯುವಕರ ಹಾಟ್‌ಫೇವರೆಟ್ ಯಮಹಾ RX100 ಬೈಕ್ ನಿರ್ಮಾಣದ ಅಪರೂಪದ ವಿಡಿಯೋ
ಮೋಟಾರ್‌ಸೈಕಲ್ ಉತ್ಸಾಹಿಗಳಿಗೆ ಯಮಹಾ RX100 ಅನ್ನು ಪರಿಚಯಿಸುವ ಅಗತ್ಯವಿಲ್ಲ. ಇದು 90 ರ ದಶಕದಲ್ಲಿ ಯುವಕರ ಹಾಟ್‌ಫೇವರೆಟ್ ಬೈಕ್ ಆಗಿ ದೇಶದಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದ ಬೈಕುಗಳಲ್ಲಿ ಒಂದಾಗಿದೆ.
Recommended Video
ಈ ಬೈಕ್‌ನ ತಯಾರಿ ಸ್ಥಗಿತಗೊಂಡು 26 ವರ್ಷ ಕಳೆದರೂ ಇಂದಿಗೂ ಕೂಡ ಈ ಬೈಕ್ ಅನ್ನು ಉಳಿಸಿಕೊಂಡಿರುವ ಹಲವರನ್ನು ಕಾಣಬಹುದು. ಸೆಂಕೆಂಡ್ ಹ್ಯಾಂಡ್‌ನಲ್ಲಿ ಈ ಬೈಕ್ ಲಭ್ಯವಿದ್ದು ರಿಸೇಲ್‌ನಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ. ಈ ಮೂಲಕ RX100 ಅನ್ನು ನಿರ್ವಹಣೆ ಮಾಡುವವರು ಇಂದಿಗೂ ಹಲವರು ಇದ್ದಾರೆ.

ಇಂತಹ ಲೆಜೆಂಡರಿ ಯಮಹಾ RX100 ಬೈಕಿನ ತಯಾರಿಕೆಯನ್ನು ತೋರಿಸುವ ವೀಡಿಯೊವೊಂದು ಇಲ್ಲಿದೆ. ವೈಲ್ಡ್ ಫಿಲ್ಮ್ಸ್ ಇಂಡಿಯಾದ ಈ ವಿಡಿಯೋದಲ್ಲಿ, ಮೋಟಾರ್‌ಸೈಕಲ್‌ಗಳನ್ನು ನಾಲ್ಕು ವಿಭಿನ್ನ ಹಂತಗಳಲ್ಲಿ ಜೋಡಿಸುವುದನ್ನು ಕಾಣಬಹುದು. 1996 ರವರೆಗೂ ಎಸ್ಕಾರ್ಟ್ಸ್ ಯಮಹಾ ತಯಾರಿಸುತ್ತಿದ್ದ RX100 ಬೈಕುಗಳ ಉತ್ಪಾದನೆಯನ್ನು ಈ ವಿಡಿಯೋದಲ್ಲಿ ಕಾಣಬಹುದು.
ವಿಡಿಯೋದ ಪ್ರಾರಂಭವು ಹಲವರು ಕೆಲಸಗಾರರು ಯಮಹಾ RX100 ಅನ್ನು ಜೋಡಿಸುವುದನ್ನು ತೋರಿಸುತ್ತದೆ. ಮತ್ತೊಬ್ಬ ಅಸೆಂಬಲ್ ಲೈನ್ ಕೆಲಸಗಾರ ಮೋಟಾರ್‌ಸೈಕಲ್‌ನ ಎಂಜಿನ್ ಅನ್ನು ಪರೀಕ್ಷಿಸುತ್ತಿರುತ್ತಾನೆ. RX100 80 km/h ಮಾರ್ಕ್ ಅನ್ನು ಬಹಳ ಬೇಗನೆ ತಲುಪುವುದನ್ನು ವಿಡಿಯೋದಲ್ಲಿ ಕಾಣಬಹುದು. ವ್ಯಕ್ತಿಯು ಸ್ಪೀಡೋಮೀಟರ್‌ನಲ್ಲಿ ಗರಿಷ್ಠ 89 ಕಿ.ಮೀ / ಗಂ ವೇಗವನ್ನು ತಲುಪುವುದನ್ನು ಇಲ್ಲಿ ಕಾಣಬಹುದು.

RX100 ಇತಿಹಾಸ
ಯಮಹಾ ಮೋಟಾರ್ ಕಾರ್ಪ್ ಮತ್ತು ಎಸ್ಕಾರ್ಟ್ಸ್ ಪಾಲುದಾರಿಕೆಯಲ್ಲಿ 1983 ರಲ್ಲಿ ಬ್ರ್ಯಾಂಡ್‌ನಿಂದ ಮೊದಲ ಉತ್ಪನ್ನವಾಗಿ RD350 ಹೊರಬಂದಿತ್ತು. ಇದು ಇಂಡಿಯಾ-ಸ್ಪೆಕ್ RD350B ಆಗಿದ್ದು, ಇದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಯಿತು. ಅದೇ ಸಮಯದಲ್ಲಿ IND-Suzuki AX100 ಬೈಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು.

ಈ ಬೈಕ್ ಅಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. ಸಣ್ಣ ಎಂಜಿನ್‌ನಿಂದ ನಡೆಸಲ್ಪಡುವ AX100 ಯುವಕರಲ್ಲಿ ಹೆಚ್ಚು ಜನಪ್ರಿಯವಾಯಿತು. ಇದೇ ವೇಳೆ ರಂಗಕ್ಕಿಳಿಯಬೇಕು ಎಂದುಕೊಂಡ ಯಮಹಾ, AX100 ನ ಯಶಸ್ಸನ್ನು ಅಧ್ಯಯನ ಮಾಡಿತು. ಬಳಿಕ 1983 ರ ಉತ್ತರಾರ್ಧದಲ್ಲಿ RX100 ಅನ್ನು ಮಾರುಕಟ್ಟೆಗೆ ಇಳಿಸಿತು.

ಬಳಿಕ ನಡಿದಿದ್ದೆಲ್ಲ ಇತಿಹಾಸ, RX100 ತಕ್ಷಣವೇ ಜನಪ್ರಿಯವಾಯಿತು. ಏಕೆಂದರೆ ಇದು AX100 ಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಕೈಗೆಟುಕುವ ಬೆಲೆಯೂ ಆಗಿತ್ತು. AX100 ಉತ್ಪಾದಿಸುವ 8.25 Bhp ಗಿಂತ RX100 ಹೊರಹಾಕುವ 11 Bhp ಪವರ್‌ಗೆ ಅಂದಿನ ಯುವಪೀಳಿಗೆ ಫಿದಾ ಆಗಿತ್ತು. ಅದು ಹೊರಹಾಕುವ ಸೌಂಡ್‌ನಿಂದ ಹಿಡಿದು ಪರ್ಫಾಮೆನ್ಸ್ ವರೆಗೂ ಅತ್ಯುತ್ತಮವಾಗಿ ಮೂಡಿಬಂದಿತ್ತು.

ಬಳಿಕ ಯಮಹಾ ತನ್ನ ಜೀವಿತಾವಧಿಯಲ್ಲಿ ಈ ಬೈಕ್‌ಗೆ ಗಮನಾರ್ಹವಾದ ಯಾವುದೇ ನವೀಕರಣಗಳನ್ನು ಮಾಡಲಿಲ್ಲ, ಸುಮಾರು ಒಂದು ದಶಕಕ್ಕೂ ಹೆಚ್ಚುಕಾಲ ಭಾರೀ ಬೇಡಿಕೆಯೊಂದಿಗೆ ಮುನ್ನುಗ್ಗಿತ್ತು. ಬಳಿಕ ಪೈಪೋಟಿ ಏರತೊಡಗಿದಾಗ ಭಾರತೀಯ ಮಾರುಕಟ್ಟೆಯಲ್ಲಿ RX100 ಅನ್ನು ಉತ್ತಮಗೊಳಿಸಲು ಯಮಹಾ ಕೆಲವು ಬದಲಾವಣೆಗಳನ್ನು ತಂದಿತು.

ಉದಾಹರಣೆಗೆ, ಬ್ರ್ಯಾಂಡ್ ಪಿನ್‌ಸ್ಟ್ರೈಪಿಂಗ್‌ನೊಂದಿಗೆ ಹೊಸ ಪೇಂಟ್ ಸ್ಕೀಮ್ ಆಯ್ಕೆಗಳನ್ನು ನೀಡಿತು. ಹಿಂದಿನ 6V ಪವರ್ ವ್ಯವಸ್ಥೆಯನ್ನು ಉತ್ತಮ 12V ವ್ಯವಸ್ಥೆಯೊಂದಿಗೆ ಬದಲಾಯಿಸಲಾಯಿತು. ಉಳಿದ ಯಾಂತ್ರಿಕ ವಿಶೇಷಣಗಳನ್ನು ಹಾಗೆಯೇ ಉಳಿಸಿತು. ಇನ್ನು ತನ್ನ ಐಕಾನಿಕ್ RX100 ನ ನೋಟವನ್ನು ಎಂದಿಗೂ ನವೀಕರಿಸಲಿಲ್ಲ.

ಇದು ಯಾವಾಗಲೂ ರೌಂಡ್ ಹೆಡ್‌ಲ್ಯಾಂಪ್‌ಗಳು, ರೌಂಡ್ ಟರ್ನ್ ಇಂಡಿಕೇಟರ್‌ಗಳು, ಫ್ಲಾಟ್ ಸೀಟ್, ಉದ್ದ ಮತ್ತು ಆಯತಾಕಾರದ ಇಂಧನ ಟ್ಯಾಂಕ್ ಮತ್ತು ಐಕಾನಿಕ್ ಎಕ್ಸಾಸ್ಟ್ ನೋಟ್‌ನೊಂದಿಗೆ ಟೂ-ಸ್ಟ್ರೋಕ್ ಎಂಜಿನ್ ಅನ್ನು ನೀಡುತ್ತದೆ. ಬ್ರ್ಯಾಂಡ್ ಅವುಗಳನ್ನು ಮೊದಲ ಮಾದರಿಯಿಂದ 1996 ರಲ್ಲಿ ನಿರ್ಮಿಸಿದ ಕೊನೆಯ ಮಾದರಿವರೆಗೆ ಹಾಗೇ ಉಳಿಸಿತ್ತು.

ಯಮಹಾ RX100 ಅನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗಿಲ್ಲ. ಬದಲಾಗಿ ಇದು ಸಿಕೆಡಿ ಅಥವಾ ಸಂಪೂರ್ಣವಾಗಿ ನಾಕ್ಡ್ ಡೌನ್ ಘಟಕಗಳಾಗಿ ಮಾರುಕಟ್ಟೆಗೆ ಬಂದು ನಂತರ ಅದನ್ನು ಭಾರತದಲ್ಲಿ "ಮೇಡ್ ಇನ್ ಜಪಾನ್" ಟ್ಯಾಗ್‌ನೊಂದಿಗೆ ಜೋಡಿಸಲಾಯಿತು. ಭಾರತದಲ್ಲಿ ಇನ್ನೂ ಹಲವಾರು ಉತ್ತಮ ನಿರ್ವಹಣೆಯ RX100 ಮೋಟಾರ್‌ಸೈಕಲ್‌ಗಳಿವೆ.

ಯಮಹಾ ಮೋಟಾರ್ ಇಂಡಿಯಾದ ಅಧ್ಯಕ್ಷ ಐಶಿನ್ ಚಿಹಾನಾ ಅವರು ಇತ್ತೀಚೆಗೆ 'ಆರ್‌ಎಕ್ಸ್100 ಬೈಕ್ ಅನ್ನು ಭಾರತದಲ್ಲಿ ಮರಳಿ ತರಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಯೋಜನೆಗಳನ್ನು ಹೊಂದಿರುವುದರಿಂದ ಯಮಹಾ ಇಲ್ಲಿಯವರೆಗೆ ಯಾವುದೇ ಉತ್ಪನ್ನದಲ್ಲಿ ಐಕಾನಿಕ್ ಆರ್‌ಎಕ್ಸ್100 ಮಾನಿಕರ್ ಅನ್ನು ಬಳಸಿಲ್ಲ ಎಂದು ಬಹಿರಂಗಪಡಿಸಿದ ಅವರು, ಆರ್‌ಎಕ್ಸ್100 ಮತ್ತೆ ಬರಲಿದೆ ಎಂದು ಖಚಿತಪಡಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಸೌಂಡ್ ಮೂಲಕವೇ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದ ಯಮಹಾ ಕಂಪನಿಯ ಆರ್‌ಎಕ್ಸ್100 ಯುವಕರಿಗಂತೂ ಫೇವರೇಟ್ ಬೈಕ್. ಕಾಲೇಜು ಯುವಕರಂತೂ ಯಮಹಾ ಆರ್‌ಎಕ್ಸ್100 ಬೈಕ್ ಖರೀದಿಸಲು ಹಾತೊರೆಯುತ್ತಿದ್ದರು. ಆದರೆ 1996 ರಲ್ಲಿ ಆರ್‌ಎಕ್ಸ್100 ಬೈಕ್ ಉತ್ಪಾದನೆಯನ್ನು ಸ್ಥಗಿತ ಮಾಡಲಾಗಿತ್ತು.


Click it and Unblock the Notifications