ಡಕಾರ್ ರ‍್ಯಾಲಿ 2022: ಆರನೇ ಹಂತದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 44ನೇ ಡಕಾರ್ ರ‍್ಯಾಲಿಯಲ್ಲಿ ಇಂದು ಆರು ಹಂತಗಳನ್ನು ಪೂರ್ಣಗೊಂಡಿದ್ದು, ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಪ್ರತಿ ಹಂತದಲ್ಲೂ ಉತ್ತಮ ರ‍್ಯಾಕಿಂಗ್‌ನಲ್ಲಿ ಮುಂದುವರಿಯುತ್ತಿರುವ ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ಮತ್ತು ಗಾಜೊ ರೇಸಿಂಗ್ ಟೊಯೊಟಾ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿವೆ.

2022ರ ಡಕಾರ್ ರ‍್ಯಾಲಿಯು ಜೆದ್ದಾ ನಗರದಿಂದ ಆರಂಭವಾಗಿ ರಿಯಾದ್ ನಗರಕ್ಕೆ ಬಂದು ತಲುಪಿದ್ದು, ಬರೋಬ್ಬರಿ 4 ಸಾವಿರ ಕಿ.ಮೀ ಅಂತರವನ್ನು ಒಳಗೊಂಡಿರುವ ಪ್ರಸಕ್ತ ವರ್ಷದ ರ‍್ಯಾಲಿಯಲ್ಲಿ ಆರನೇ ಹಂತವು 421 ಕಿ.ಮೀ ಒಳಗೊಂಡಿತ್ತು. ಆರನೇ ಹಂತದಲ್ಲಿ ಒಟ್ಟು 421 ಕಿ.ಮೀ ಮಾರ್ಗದಲ್ಲಿ 216 ಕಿ.ಮೀ ಸಾಮಾನ್ಯ ಮಾರ್ಗವಾದರೆ 205 ಕಿ.ಮೀ ಅತ್ಯಂತ ಕಠಿಣ ಮಾರ್ಗವಾಗಿತ್ತು.

ರಿಯಾದ್‌ನಿಂದ ಆರಂಭಗೊಂಡಿದ್ದ ಆರನೇ ಹಂತವು ಪ್ರಮುಖ ಮಾರ್ಗಗಳೊಂದಿಗೆ ಪುನಃ ರಿಯಾದ್‌ಗೆ ತಲುಪಬೇಕಿತ್ತು. ಆದರೆ ಆರನೇ ಹಂತದ ಆರಂಭವಾಗುತ್ತಿದ್ದಂತೆ ಸುರಿದ ಭಾರೀ ಮಳೆಯಿಂದಾಗಿ 421 ಕಿ.ಮೀ ಅನ್ನು 101 ಕಿ.ಮೀ ಕಡಿತಗೊಳಿಸಲಾಯ್ತು. 101 ಕಿ.ಮೀ ಅಂತರವನ್ನು 51 ನಿಮಿಷ 43 ಸೆಕೆಂಡುಗಳಲ್ಲಿ ಗುರಿತಲುಪಿದ ಗ್ಯಾಸ್ ಗ್ಯಾಸ್ ರೈಡರ್ ಡೇನಿಯಲ್ ಸ್ಯಾಂಡರ್ಸ್ ಮೊದಲ ಸ್ಥಾನ ಪಡೆದುಕೊಂಡರು.

ಬೈಕ್ ವಿಭಾಗದಲ್ಲಿ ಗ್ಯಾಸ್ ಗ್ಯಾಸ್ ರೈಡರ್ ಡೇನಿಯಲ್ ಸ್ಯಾಂಡರ್ಸ್ ಮೊದಲ ಸ್ಥಾನ ಪಡೆದರೆ ಮೊದಲ ವಿಜೇತ ಸ್ಪರ್ಧಿಗಿಂತ 2 ನಿಮಿಷ 26 ಸೆಕೆಂಡ್ ತಡವಾಗಿ ಗುರಿತಲುಪಿದ ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಮತ್ತೊಬ್ಬ ರೈಡರ್ ಸ್ಯಾಮ್ ಸದರ್‌ಲ್ಯಾಂಡ್ ಎರಡನೇ ಸ್ಥಾನವನ್ನು ಮತ್ತು 3 ನಿಮಿಷ ತಡವಾಗಿ ಗುರಿತಲುಪಿದ ಕೆಟಿಎಂ ತಂಡದ ಮ್ಯಾಥಿಯಾಸ್ ವಾಕ್ನರ್ ಮೂರನೇ ಸ್ಥಾನ ಪಡೆದುಕೊಂಡರು.

ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಆರು ಹಂತಗಳಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡು ಬಂದಿರುವ ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಸ್ಯಾಮ್ ಸದರ್‌ಲ್ಯಾಂಡ್ ಪ್ರತಿ ಹಂತದಲ್ಲೂ ಉತ್ತಮ ಸಾಧನೆಯೊಂದಿಗೆ ಸದ್ಯ ಒಟ್ಟಾರೆ ಬೈಕ್ ರ‍್ಯಾಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದ್ದಾರೆ.

ಹಾಗೆಯೇ ಭಾರತೀಯ ಮೋಟೊಸ್ಪೋರ್ಟ್ಸ್ ತಂಡಗಳಾದ ಹೀರೋ ಮೋಟೊಸ್ಪೋರ್ಟ್ಸ್ ಮತ್ತು ಟಿವಿಎಸ್ ಶೆರ್ಕೊ ತಂಡಗಳು ಆರನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಹೀರೋ ತಂಡವನ್ನು ಪ್ರತಿನಿಧಿಸುತ್ತಿರುವ ಪೋರ್ಚುಗೀಸ್ ರೈಡರ್ ಜೋಕ್ವಿಮ್ ರೊಡ್ರಿಗಸ್ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಮೂರನೇ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಜೋಕ್ವಿಮ್ ರೊಡ್ರಿಗಸ್ ಆರನೇ ಹಂತದಲ್ಲಿ 10ನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಹೀರೋ ಮೋಟೊಸ್ಪೋರ್ಟ್ಸ್ ತಂಡದ ಮತ್ತೊಬ್ಬ ಸ್ಪರ್ಧಿ ಆರೋನ್ ಮೇರ್ ಕೂಡಾ ಉತ್ತಮ ಪ್ರದರ್ಶನ ತೋರುವ ಮೂಲಕ ಆರನೇ ಹಂತದಲ್ಲಿ 16ನೇ ಸ್ಥಾನಪಡೆದುಕೊಂಡಿದ್ದಾರೆ.

ಟಿವಿಎಸ್ ಶೆರ್ಕೊ ತಂಡವು ಕೂಡಾ ಆರನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಳ್ಳುತ್ತಿದ್ದು, ಮೂವರು ಸ್ಪರ್ಧಿಗಳನ್ನು ಒಳಗೊಂಡಿರುವ ಟಿವಿಎಸ್ ತಂಡದ ಸ್ಪರ್ಧಿಗಳು ಟಾಪ್ 20 ಒಳಗೆ ಸ್ಥಾನ ಪಡೆದಿದೆ.

ಆರನೇ ಹಂತದಲ್ಲಿ ಕಾರುಗಳ ವಿಭಾಗವು ಕೂಡಾ ಸಾಕಷ್ಟು ರೋಚಕತೆಯಿಂದ ಮುಂದುವರಿದಿದ್ದು, ಮೊದಲ ಸ್ಥಾನಕ್ಕಾಗಿ ಟೊಯೊಟಾ ಮತ್ತು ಹಂಟರ್ ಟಿ1 ಬಿಆರ್‌ಎಕ್ಸ್ ನಡುವೆ ಭಾರೀ ಪೈಪೋಟಿ ಮುಂದುವರಿದಿದೆ.

ಹಂಟರ್ ಟಿ1 ಬಿಆರ್‌ಎಕ್ಸ್ ತಂಡದ ಒರ್ಲ್ಯಾಂಡೊ ಟೆರ್ರಾನೋವಾ ಆರನೇ ಹಂತದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಕೇವಲ 1 ನಿಮಿಷ 6 ಸೆಕೆಂಡುಗಳ ಅಂತರದಲ್ಲಿ ಗುರಿತಲುಪಿದ ಆಡಿಯ ಸ್ಪೋರ್ಟ್ ತಂಡದ ಮ್ಯಾಟಿಯಾಸ್ ಎಕ್ಸ್‌ಸ್ಟ್ರಾಮ್ ಎರಡನೇ ಸ್ಥಾನವನ್ನು ಪಡೆದುಕೊಂಡರು.

ಆರನೇ ಹಂತದ ಕಾರುಗಳ ವಿಭಾಗದಲ್ಲಿ ಗಾಜೊ ರೇಸಿಂಗ್ ಟೊಯೊಟಾ ತಂಡದ ಯಜಿದ್ ಅಲ್ ರಾಜಿಹಿ ಮೂರನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಕಾರುಗಳ ವಿಭಾಗದಲ್ಲಿ ಒಟ್ಟಾರೆ ರ‍್ಯಾಕಿಂಗ್‌ನಲ್ಲಿ ಗಾಜೊ ರೇಸಿಂಗ್ ಟೊಯೊಟಾ ತಂಡದ ನಾಸರ್ ಅಲ್-ಅತ್ತಿಯಾ ಮೊದಲ ಸ್ಥಾನದಲ್ಲಿ ಮತ್ತು ಹಂಟರ್ ಟಿ1 ಬಿಆರ್‌ಎಕ್ಸ್ ತಂಡದ ಸೆಬಾಸ್ಟಿನ್ ಲೊಯೆಬ್ ಎರಡನೇ ಸ್ಥಾನದಲ್ಲಿದ್ದಾರೆ.

ಹಾಗೆಯೇ ಟ್ರಕ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಕಮಾಜ್ ಮಾಸ್ಟರ್ ತಂಡವು ಅತ್ಯುತ್ತಮ ಚಾಲನಾ ಕೌಶಲ್ಯತೆಯೊಂದಿಗೆ ಅಗ್ರಸ್ಥಾನದೊಂದಿಗೆ ಮುಂದುವರೆದಿದ್ದು, ಮೊದಲ ಮೂರು ಸ್ಥಾನವನ್ನು ಕಮಾಜ್ ಮಾಸ್ಟರ್ ತಂಡ ಪಡೆದುಕೊಂಡಿತು.

ಇನ್ನು 44ನೇ ಆವೃತ್ತಿಯಲ್ಲಿ ಕಳೆದ ವರ್ಷದ ರ‍್ಯಾಲಿಯಲ್ಲಿ ಕೆಲವು ಅಪಾಯಕಾರಿ ಮಾರ್ಗಗಳನ್ನು ಕೈಬಿಡಲಾಗಿದ್ದು, ಕಳೆದ ಆವೃತ್ತಿಗಿಂತಲೂ ಹೊಸ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.

14 ಹಂತಗಳನ್ನು ಒಳಗೊಂಡಿದ್ದ 43ನೇ ಡಕಾರ್ ರ‍್ಯಾಲಿಯ ಮಾರ್ಗಗಳನ್ನು 44ನೇ ಆವೃತ್ತಿಯಲ್ಲಿ 12ಕ್ಕೆ ಇಳಿಕೆ ಮಾಡಿದ್ದು, ಯಾವುದೇ ರೀತಿಯ ದುರಂತಗಳಿಗೆ ಎಡೆಮಾಡಿಕೊಡದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲಾಗಿದೆ. 2022ರ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಒಟ್ಟು ಅಂತರವನ್ನು ಕಳೆದ ಬಾರಿಯ 7 ಸಾವಿರ ಕಿ.ಮೀ ಅಂತರದಿಂದ 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿದೆ.

2022ರ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದು, ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಡಲಾಗಿದೆ.


Click it and Unblock the Notifications








