ಡಕಾರ್ ರ‍್ಯಾಲಿ 2022: ಹತ್ತನೇ ಹಂತದ ಕಾರುಗಳ ವಿಭಾಗದಲ್ಲಿ ಅಬ್ಬರಿಸಿದ ಆಡಿ ಇ-ಟ್ರಾನ್
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 44ನೇ ಡಕಾರ್ ರ‍್ಯಾಲಿಯಲ್ಲಿ ಹತ್ತು ಹಂತಗಳು ಪೂರ್ಣಗೊಂಡಿದ್ದು, ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಪ್ರತಿ ಹಂತದಲ್ಲೂ ವಿವಿಧ ತಂಡಗಳು ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾಗಿವೆ.

2022ರ ಡಕಾರ್ ರ‍್ಯಾಲಿಯು ಸೌದಿ ಅರೇಬಿಯಾದ ಜೆದ್ದಾದಿಂದ ಆರಂಭವಾಗಿ ಬಿಷಾ ನಗರಕ್ಕೆ ಬಂದು ತಲುಪಿದ್ದು, ಬರೋಬ್ಬರಿ 4 ಸಾವಿರ ಕಿ.ಮೀ ಅಂತರವನ್ನು ಒಳಗೊಂಡಿರುವ ಪ್ರಸಕ್ತ ವರ್ಷದ ರ‍್ಯಾಲಿಯಲ್ಲಿ ಹತ್ತನೇ ಹಂತವು 384 ಕಿ.ಮೀ ಒಳಗೊಂಡಿತ್ತು. ಹತ್ತನೇ ಹಂತದಲ್ಲಿ ಒಟ್ಟು 384 ಕಿ.ಮೀ ಮಾರ್ಗದಲ್ಲಿ 375 ಕಿ.ಮೀ ವಿಶೇಷ ಮಾರ್ಗವಾಗಿದ್ದರೆ ಇನ್ನುಳಿದ 11 ಕಿ.ಮೀ ಮಾತ್ರ ಸಾಮಾನ್ಯ ಮಾರ್ಗವಾಗಿತ್ತು.

ವಾಡಿ ಅಡ್ ದವಾಸಿರ್ ನಗರದಿಂದ ಆರಂಭಗೊಂಡಿದ್ದ ಹತ್ತನೇ 3ಹಂತವು ಪ್ರಮುಖ ಮಾರ್ಗಗಳೊಂದಿಗೆ ಬಿಷಾ ನಗರವನ್ನು ತಲುಪಿದ್ದು, ಹತ್ತನೇ ಹಂತದ ಮಾರ್ಗವನ್ನು 3 ಗಂಟೆ 5 ನಿಮಿಷ 32 ಸೆಕೆಂಡುಗಳಲ್ಲಿ ಗುರಿತಲುಪಿದ ಕೆಟಿಎಂ ರೈಡರ್ ಟೋಬಿ ಪ್ರೈಸ್ ಮೊದಲ ಸ್ಥಾನ ಪಡೆದುಕೊಂಡರು.

ಬೈಕ್ ವಿಭಾಗದಲ್ಲಿ ಕೆಟಿಎಂ ರೈಡರ್ ಟೋಬಿ ಪ್ರೈಸ್ ಮೊದಲ ಸ್ಥಾನ ಪಡೆದರೆ ಮೊದಲ ವಿಜೇತ ಸ್ಪರ್ಧಿಗಿಂತ 2 ನಿಮಿಷ 9 ಸೆಕೆಂಡ್ ತಡವಾಗಿ ಗುರಿತಲುಪಿದ ಹಸ್ಕ್ವರ್ನ್ ತಂಡದ ಲೂಸಿಯಾನೊ ಬೆನಾವಿಡ್ಸ್‌ನ ಎರಡನೇ ಸ್ಥಾನವನ್ನು ಮತ್ತು 3 ನಿಮಿಷ ತಡವಾಗಿ ಗುರಿತಲುಪಿದ ಯಮಹಾದ ಆಡ್ರಿಯನ್ ವ್ಯಾನ್ ಬೆವೆರೆನ್ ಮೂರನೇ ಸ್ಥಾನ ಪಡೆದುಕೊಂಡರು.

ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಒಂಬತ್ತು ಹಂತಗಳಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡು ಬಂದಿರುವ ಯಮಹಾದ ಆಡ್ರಿಯನ್ ವ್ಯಾನ್ ಬೆವೆರೆನ್ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಸ್ಯಾಮ್ ಸದರ್‌ಲ್ಯಾಂಡ್ ಎರಡನೇ ಸ್ಥಾನವನ್ನು ಮತ್ತು ಮೂರನೇ ಸ್ಥಾನವನ್ನು ಹೋಂಡಾ ತಂಡದ ಪಾಬ್ಲೊ ಕ್ವಿಂಟಾನಿಲ್ಲಾ ಪಡೆದುಕೊಂಡಿದ್ದಾರೆ.

ಬೈಕ್ ವಿಭಾಗದ ಹತ್ತನೇ ಹಂತದಲ್ಲಿ ಆರಂಭಿಕವಾಗಿ ಉತ್ತಮ ಮುನ್ನಡೆ ಕಾಯ್ದಕೊಂಡಿದ್ದ ರೆಡ್‌ಬುಲ್ ಕೆಟಿಎಂ ತಂಡದ ರೈಡರ್ ಕೆವಿನ್ ಬೆನವಿಡೆಸ್ ತಾಂತ್ರಿಕ ಕಾರಣಗಳಿಂದ ಪ್ರಸಕ್ತ ವರ್ಷದ ರ‍್ಯಾಲಿಯಿಂದ ನಿರ್ಗಮಿಸಿದ್ದು, ಕೆವಿನ್ ಬೆನವಿಡೆಸ್ ನಿರ್ಗಮನದಿಂದಾಗಿ ಹೋಂಡಾ ರೈಡರ್‌ಗಳಿಗೆ ಉತ್ತಮ ಮುನ್ನಡೆ ಕಾಯ್ದುಕೊಳ್ಳುವ ನೀರಿಕ್ಷೆಗಳಿವೆ.

ಹಾಗೆಯೇ ಭಾರತೀಯ ಮೋಟೊಸ್ಪೋರ್ಟ್ಸ್ ತಂಡಗಳಾದ ಹೀರೋ ಮೋಟೊಸ್ಪೋರ್ಟ್ಸ್ ಮತ್ತು ಟಿವಿಎಸ್ ಶೆರ್ಕೊ ತಂಡಗಳು ಒಂಬತ್ತನೇ ಹಂತದಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಹೀರೋ ತಂಡವನ್ನು ಪ್ರತಿನಿಧಿಸುತ್ತಿರುವ ಪೋರ್ಚುಗೀಸ್ ರೈಡರ್ ಜೋಕ್ವಿಮ್ ರೊಡ್ರಿಗಸ್ ಮತ್ತು ಟಿವಿಎಸ್ ತಂಡದ ಲೊರೆಂಜೊ ಸ್ಯಾಂಟೊಲಿನೊ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಮೂರನೇ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಜೋಕ್ವಿಮ್ ರೊಡ್ರಿಗಸ್ ಹತ್ತನೇ ಹಂತವನ್ನು 14ನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಹೀರೋ ಮೋಟೊಸ್ಪೋರ್ಟ್ಸ್ ತಂಡದ ಮತ್ತೊಬ್ಬ ಸ್ಪರ್ಧಿ ಆರೋನ್ ಮೇರ್ ಕೂಡಾ ಉತ್ತಮ ಪ್ರದರ್ಶನ ತೋರುವ ಮೂಲಕ ಆರನೇ ಹಂತದಲ್ಲಿ 16ನೇ ಸ್ಥಾನಪಡೆದುಕೊಂಡಿದ್ದಾರೆ.

ಟಿವಿಎಸ್ ಶೆರ್ಕೊ ತಂಡವು ಕೂಡಾ ಹತ್ತನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಟಾಪ್ 20 ಒಳಗೆ ಸ್ಥಾನ ಪಡೆದಿರುವ ಟಿವಿಎಸ್ ತಂಡದ ರೈಡರ್‌ಗಳಲ್ಲಿ ಲೊರೆಂಜೊ ಸ್ಯಾಂಟೊಲಿನೊ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನವನ್ನು ಮತ್ತು ಹರಿತ್ ನೋಹ್ 32 ಸ್ಥಾನದಲ್ಲಿದ್ದಾರೆ.

ಹತ್ತನೇ ಹಂತದ ಕಾರುಗಳ ವಿಭಾಗವೂ ಕೂಡಾ ರೋಚಕತೆಯಿಂದ ಕೂಡಿದ್ದು, ಗಾಜೊ ರೇಸಿಂಗ್ ಟೊಯೊಟಾ, ಹಂಟರ್ ಟಿ1 ಬಿಆರ್‌ಎಕ್ಸ್ ಮತ್ತು ಆಡಿ ಇ-ಟ್ರಾನ್ ನಡುವೆ ಭಾರೀ ಪೈಪೋಟಿ ಮುಂದುವರೆದಿದೆ.

ಗಾಜೊ ರೇಸಿಂಗ್ ಟೊಯೊಟಾ, ಹಂಟರ್ ಟಿ1 ಬಿಆರ್‌ಎಕ್ಸ್ ತಂಡಗಳಿಗೆ ಉತ್ತಮ ಪೈಪೋಟಿ ನೀಡಿದ ಆಡಿ ಇ-ಟ್ರಾನ್ ತಂಡದ ಸ್ಟೀಫನ್ ಪೀಟರ್‌ಹ್ಯಾನ್ಸೆಲ್ ಮೊದಲ ಸ್ಥಾನವನ್ನು ಇ-ಟ್ರಾನ್ ತಂಡದ ಮತ್ತೊಬ್ಬ ಪ್ರತಿಸ್ಪರ್ಧಿ ಕಾರ್ಲೋಸ್ ಶೆಂಜ್ ಮತ್ತು ಮೂರನೇ ಸ್ಥಾನವನ್ನು ಹಂಟರ್ ಟಿ1 ಬಿಆರ್‌ಎಕ್ಸ್ ತಂಡದ ಒರ್ಲ್ಯಾಂಡೊ ಟೆರಾನೋವಾ ಪಡೆದುಕೊಂಡರು.

ಕಾರುಗಳ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಟೊಯೊಟಾದ ಮುಖ್ಯ ಸ್ಪರ್ಧಿ ನಾಸರ್ ಅಲ್-ಅತ್ತಿಯಾ ಮೊದಲ ಸ್ಥಾನದಲ್ಲಿದ್ದು, ಹಂಟರ್ ಟಿ1 ಬಿಆರ್‌ಎಕ್ಸ್ ತಂಡದ ಸೆಬಾಸ್ಟಿಯನ್ ಲೋಯೆಬ್ ಮತ್ತು ಆಡಿಯ ಸ್ಪೋರ್ಟ್ ತಂಡದ ಕಾರ್ಲೊಸ್ ಶೆಂಜ್ ಮೂರನೇ ಸ್ಥಾನದಲ್ಲಿದ್ದಾರೆ.

ಟ್ರಕ್ ವಿಭಾಗದ ಸ್ಪರ್ಧೆಯಲ್ಲಿ ಕಮಾಜ್ ಮಾಸ್ಟರ್ ತಂಡವು ಪ್ರತಿ ಹಂತದಲ್ಲೂ ಅತ್ಯುತ್ತಮ ಚಾಲನಾ ಕೌಶಲ್ಯತೆಯೊಂದಿಗೆ ಅಗ್ರಸ್ಥಾನದೊಂದಿಗೆ ಮುಂದುವರೆದಿದ್ದು, ಮೊದಲ ಮೂರು ಸ್ಥಾನದಲ್ಲೂ ಜಯದ ಲಯ ಕಂಡುಕೊಂಡಿರುವ ಕಮಾಜ್ ಮಾಸ್ಟರ್ ತಂಡದ ಡಿಮಿಟ್ರಿ ಸೊಟಿಕ್ನೊವ್ ಅಗ್ರಸ್ಥಾನದಲ್ಲಿದ್ದಾರೆ.

44ನೇ ಆವೃತ್ತಿಯಲ್ಲಿ ಕಳೆದ ಆವೃತ್ತಿಯಲ್ಲಿನ 14 ಹಂತಗಳನ್ನು 12ಕ್ಕೆ ಇಳಿಕೆ ಮಾಡಿದ್ದು, ಒಟ್ಟು ಅಂತರವನ್ನು ಕಳೆದ ಬಾರಿಯ 7 ಸಾವಿರ ಕಿ.ಮೀ ಅಂತರದಿಂದ 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿದೆ. 2022ರ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದು, ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಡಲಾಗಿದೆ.


Click it and Unblock the Notifications








