ಡಕಾರ್ ರ‍್ಯಾಲಿ 2022: ಎರಡನೇ ಹಂತದಲ್ಲಿ ಮಿಂಚಿದ ಹೀರೋ ಮೋಟೊಸ್ಪೋರ್ಟ್ಸ್ ಮತ್ತು ಟಿವಿಎಸ್ ಶೆರ್ಕೊ..
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 44ನೇ ಡಕಾರ್ ರ‍್ಯಾಲಿಯಲ್ಲಿ ವಿವಿಧ ವಿಭಾಗಗಳಲ್ಲಿ ನೂರಾರು ಮೋಟಾರ್‌ಸ್ಪೋರ್ಟ್ ಸ್ಪರ್ಧಿಗಳ ಮಧ್ಯೆ ಪ್ರಶಸ್ತಿಗಾಗಿ ಸೆಣಸಾಟ ಜೋರಾಗಿದ್ದು, ಬೈಕ್, ಕಾರ್ ಮತ್ತು ಟ್ರಕ್ ವಿಭಾಗದಲ್ಲಿನ ಸ್ಪರ್ಧೆಗಳು ಮೋಟಾರ್‌ಸ್ಪೋರ್ಟ್ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದೆ.

ವಿಶ್ವದ ಅತಿ ಅಪಾಯಕಾರಿ ಮೋಟಾರ್‌ಸ್ಪೋರ್ಟ್ ರ‍್ಯಾಲಿಗಳಲ್ಲಿ ಒಂದಾಗಿರುವ ಡಕಾರ್ ರ‍್ಯಾಲಿಯ 44ನೇ ಆವೃತ್ತಿಯಲ್ಲಿ ವಿಶ್ವದ ಪ್ರಮುಖ ಮೋಟಾರ್‌ಸ್ಪೋರ್ಟ್ ತಂಡಗಳು ಭಾಗಿಯಾಗಿದ್ದು, ಜೆದ್ದಾ ನಗರದಿಂದ ಆರಂಭವಾಗಿರುವ ಪ್ರಸಕ್ತ ವರ್ಷದ ಮೋಟಾರ್‌ಸ್ಪೋರ್ಟ್ ಸ್ಪರ್ಧೆಗಳು ಸದ್ಯ ಎರಡನೇ ಹಂತವನ್ನು ಪೂರ್ಣಗೊಳಿಸಿವೆ.

2ನೇ ಹಂತದ ಡಕಾರ್ ರ‍್ಯಾಲಿಯು ಹೈಲ್ ನಗರದಿಂದ ಆರಂಭವಾಗಿ ಅಲ್ ಖೈಸುಮಾದಲ್ಲಿ ಅಂತ್ಯಗೊಂಡಿದ್ದು, 453 ಕಿ.ಮೀ ಅಂತರವಿರುವ ಎರಡನೇ ದಿನದ ಸ್ಪರ್ಧೆಯು ಹಲವು ಸವಾಲುಗಳಿಂದ ಕೂಡಿತ್ತು.

44ನೇ ಆವೃತ್ತಿಯ ಸ್ಪರ್ಧೆಗಳು ಒಟ್ಟು 12 ಹಂತಗಳಲ್ಲಿ 14 ದಿನಗಳ ಕಾಲ ನಡೆಯುತ್ತಿದ್ದು, ಅಪಾಯಕಾರಿ ಮೋಟಾರ್‌ಸ್ಪೋರ್ಟ್‌ನಲ್ಲಿ ಯಾವುದೇ ದುರಂತಗಳಿಗೆ ಎಡೆಮಾಡಿಕೊಡದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲಾಗಿದೆ. 2022ರ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಒಟ್ಟು ಅಂತರವನ್ನು ಕಳೆದ ಬಾರಿಯ 7 ಸಾವಿರ ಕಿ.ಮೀ ಅಂತರದಿಂದ ಈ ಬಾರಿ 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿದೆ.

2022ರ ಆವೃತ್ತಿಯ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿದ್ದು, 4 ಸಾವಿರ ಕಿ.ಮೀ ಗಳಲ್ಲಿ 2500 ಕಿ.ಮೀ ವಿಶೇಷ ಮಾರ್ಗವಾಗಿ ಗುರುತಿಸಲಾಗಿದೆ. ವಿಶೇಷ ಮಾರ್ಗಗಳು ಸಂಪೂರ್ಣವಾಗಿ ಸಾಹಸಮಯದಿಂದ ಕೂಡಿರಲಿದ್ದು, ವಿಶೇಷ ಮಾರ್ಗಗಳಲ್ಲಿ ಸ್ಪರ್ಧಿಗಳ ಚಾಣಾಕ್ಷತನವನ್ನು ಸಾಬೀತುಪಡಿಬೇಕಿರುತ್ತದೆ.

44ನೇ ಆವೃತ್ತಿಯಲ್ಲಿ ಸದ್ಯ ಪೂರ್ಣಗೊಂಡಿರುವ ಎರಡನೇ ಹಂತದ ಸ್ಪರ್ಧೆಗಳಲ್ಲಿ ಪ್ರಮುಖ ಸ್ಪರ್ಧಿಗಳ ನಡುವೆ ರೋಚಕ ಸ್ಪರ್ಧೆ ನಡೆದಿದ್ದು, ಬೈಕ್ ವಿಭಾಗದಲ್ಲಿ ಹೋಂಡಾದ ಜೋನ್ ಬ್ಯಾರೆಡಾ ಅವರು ಗ್ಯಾಸ್ ಗ್ಯಾಸ್ ರೈಡರ್ ಸ್ಯಾಮ್ ಸದರ್‌ಲ್ಯಾಂಡ್‌ಗಿಂತಲೂ 5 ನಿಮಿಷ ಮತ್ತು 33 ಸೆಕೆಂಡುಗಳಲ್ಲಿ ಮುನ್ನಡೆಯುವ ಮೂಲಕ ವಿಜಯದ ಹಾದಿಯನ್ನು ಪೂರ್ಣಗೊಳಿಸಿದರು.

ಎರಡನೇ ದಿನದ ಬೈಕ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ 453 ಕಿ.ಮೀ ಅಂತರವನ್ನು 3 ಗಂಟೆ 31 ನಿಮಿಷ 20 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಹೋಂಡಾ ತಂಡದ ಜೋನ್ ಬ್ಯಾರೆಡಾ ಮೊದಲ ಸ್ಥಾನ ಕಾಯ್ದುಕೊಂಡರು.

ಹೋಂಡಾ ತಂಡದ ಜೋನ್ ಬ್ಯಾರೆಡಾ ನಂತರ 5 ನಿಮಿಷ 33 ಸೆಕೆಂಡ್ ತಡವಾಗಿ ಗುರಿತಲುಪಿದ ಗ್ಯಾಸ್ ಗ್ಯಾಸ್ ರೈಡರ್ ಸ್ಯಾಮ್ ಸದರ್‌ಲ್ಯಾಂಡ್ ಎರಡನೇ ಸ್ಥಾನವನ್ನು ಮತ್ತು 5 ನಿಮಿಷ 54 ಸೆಕೆಂಡ್ ತಡವಾಗಿ ಗುರಿತಲುಪಿದ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ರೇಸಿಂಗ್ ತಂಡದ ಕೆವಿನ್ ಬೆನವಿಡೆಸ್ ಮೂರನೇ ಸ್ಥಾನ ಕಾಯ್ದಕೊಂಡರು.

ಎರಡನೇ ದಿನದ ಬೈಕ್ ವಿಭಾಗದಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಕಂಪನಿಗಳ ಪ್ರಮುಖ ತಂಡಗಳಾದ ಟಿವಿಎಸ್ ಶೆರ್ಕೊ ಮತ್ತು ಹೀರೋ ಮೋಟೋಸ್ಪೋರ್ಟ್ಸ್ ತಂಡಗಳ ರೈಡರ್‌ಗಳು ಉತ್ತಮ ಮುನ್ನಡೆ ಕಾಯ್ದುಕೊಂಡರು. ಹೀರೋ ಮೋಟಾರ್‌ಸ್ಪೋರ್ಟ್ಸ್ ರೈಡರ್ ಜೋಕ್ವಿಮ್ ರೋಡ್ರಿಗಸ್ ಅವರು ಎರಡನೇ ಹಂತದಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡರೆ ಹೀರೋ ತಂಡದ ಮತ್ತೊಬ್ಬ ಸ್ಪರ್ಧಿ ಆರೋನ್ ಮೇರ್ ಅವರು ಹತ್ತನೇ ಸ್ಥಾನದಲ್ಲಿ ಎರಡನೇ ಹಂತವನ್ನು ಪೂರ್ಣಗೊಳಿಸಿದರು.

ಒಂದನೇ ಹಂತದಲ್ಲಿ 30ನೇ ಸ್ಥಾನದಲ್ಲಿದ್ದ ಜೋಕ್ವಿಮ್ ರೋಡ್ರಿಗಸ್ ಎರಡನೇ ಹಂತದಲ್ಲಿ ಅದ್ಭುತ ರೈಡಿಂಗ್ ಕೌಶಲ್ಯತೆ ಮೂಲಕ ಆರನೇ ಸ್ಥಾನ ಕಾಯ್ದುಕೊಂಡಿದ್ದು, ಟಿವಿಎಸ್ ಶೆರ್ಕೊ ತಂಡದ ಸ್ಪರ್ಧಿಗಳಾದ ಪೋರ್ಚುಗೀಸ್ ರೈಡರ್ ರೂಯಿ ಗೊನ್ಕಾಲ್ವೆಸ್ ಎರಡನೇ ಹಂತದಲ್ಲಿ 12ನೇ ಸ್ಥಾನವನ್ನು ಪಡೆದುಕೊಂಡರೆ ಮತ್ತೊಬ್ಬ ಸಹಸ್ಪರ್ಧಿ ಸ್ಪ್ಯಾನಿಷ್ ರೈಡರ್ ಲೊರೆಂಜೊ ಸ್ಯಾಂಟೊಲಿನೊ 16ನೇ ಸ್ಥಾನ ಪಡೆದುಕೊಂಡರು.

44ನೇ ಆವೃತ್ತಿಯ ಬೈಕ್ ವಿಭಾಗದ ಎರಡೂ ಹಂತಗಳಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿರುವ ಗ್ಯಾಸ್ ಗ್ಯಾಸ್ ಫ್ಯಾಕ್ಟರಿ ರೈಡರ್ ಸ್ಯಾಮ್ ಸದರ್‌ಲ್ಯಾಂಡ್ ಒಟ್ಟಾರೆ ರ‍್ಯಾಕಿಂಗ್‌ನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ಯಮಹಾ ತಂಡದ ಆಡ್ರಿಯನ್ ವ್ಯಾನ್ ಬೆವೆರೆನ್ ಎರಡನೇ ಸ್ಥಾನವನ್ನು ಮತ್ತು ಮೂರನೇ ಸ್ಥಾನದಲ್ಲಿ ಗ್ಯಾಸ್ ಗ್ಯಾಸ್ ಫ್ಯಾಕ್ಟರಿ ರೈಡರ್ ಡೇನಿಯಲ್ ಸ್ಯಾಂಡರ್ಸ್ ಮುಂದುವರಿದಿದ್ದಾರೆ.

ಇನ್ನು ಕಾರುಗಳ ವಿಭಾಗದಲ್ಲಿ ಮೊದಲ ಹಂತದಲ್ಲಿ ಮುಂಚೂಣಿಯಲ್ಲಿದ್ದ ಗಾಜೊ ರೇಸಿಂಗ್ ಟೊಯೊಟಾ ತಂಡದ ನಾಸರ್ ಅಲ್-ಅತ್ತಿಯಾ ಹಿಂದಿಕ್ಕಿದ ಹಂಟರ್ ಟಿ1 ಚಾಲಕ ಬಿಆರ್‌ಎಕ್ಸ್ ತಂತದ ಸೆಬಾಸ್ಟಿನ್ ಲೊಯೆಬ್ ಎರಡನೇ ಹಂತದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡರು.

453 ಕಿಲೋ ಮೀಟರ್ ಎರಡನೇ ಹಂತದ ಅಂತರವನ್ನು 3 ಗಂಟೆ 25 ನಿಮಿಷಗಳಲ್ಲಿ ಪೂರ್ಣಗೊಳಿಸಿದ ಸೆಬಾಸ್ಟಿನ್ ಲೊಯೆಬ್ ಗಾಜೊ ರೇಸಿಂಗ್ ಟೊಯೊಟಾ ತಂಡಕ್ಕೆ ಭರ್ಜರಿ ಪೈಪೋಟಿ ನೀಡಿದರು. ಸೆಬಾಸ್ಟಿನ್ ಲೊಯೆಬ್ ನಂತರ ಎರಡನೇ ಸ್ಥಾನ ಪಡೆದುಕೊಂಡ ಗಾಜೊ ರೇಸಿಂಗ್ ಟೊಯೊಟಾ ತಂಡದ ನಾಸರ್ ಅಲ್-ಅತ್ತಿಯಾ ಒಟ್ಟಾರೆ ರ‍್ಯಾಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದು, ಎರಡನೇ ಹಂತದಲ್ಲಿ ಆಡಿ ಇ-ಟ್ರಾನ್ ಚಾಲಕ ಕಾರ್ಲೋಸ್ ಸೈನ್ಜ್ ಮೂರನೇ ಸ್ಥಾನ ಪಡೆದುಕೊಂಡರು.

ಹಾಗೆಯೇ ಟ್ರಕ್ ವಿಭಾಗದಲ್ಲಿ ಎರಡನೇ ಹಂತವನ್ನು 3 ಗಂಟೆ 52 ನಿಮಿಷ 07 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ ಕಮಾಜ್ ಮಾಸ್ಟರ್ ತಂಡದ ಆಂಡ್ರೆ ಕಾರ್ಗಿನೋವ್ ಮೊದಲ ಸ್ಥಾನವನ್ನು ಮತ್ತು ಡಿಮಿಟ್ರಿ ಸೊಟಿಕ್ನೊವ್ ಎರಡನೇ ಸ್ಥಾನವನ್ನು ಮತ್ತು ಎಡ್ವಾರ್ಡ್ ನಿಕೋಲೇವ್ ಮೂರನೇ ಸ್ಥಾನ ಪಡೆದುಕೊಂಡರು.

ಸದ್ಯ 3ನೇ ಹಂತದ ಸ್ಪರ್ಧೆಗಳು ಆರಂಭಗೊಂಡಿದ್ದು, 3ನೇ ಹಂತದ ರ‍್ಯಾಲಿ ಇಂದು ಹೈಲ್ ನಗರದಿಂದ ಅಲ್ ಖೈಸುಮಾ ಗೆ ತಲುಪಬೇಕಿದೆ. ಮೊದಲ ಹಂತದಲ್ಲಿನ ಮಾರ್ಗಗಳಿಂತಲೂ ಹೆಚ್ಚು ಕಠಿಣವಾಗಿರುವ ಅಲ್ ಖೈಸುಮಾ ಮಾರ್ಗವು ಹೈಲ್ ನಗರದಿಂದ 453 ಕಿ.ಮೀ ದೂರವಿದ್ದು, ಎರಡನೇ ದಿನದ ಸ್ಪರ್ಧೆಯು ಹಲವು ಸವಾಲುಗಳಿಂದ ಕೂಡಿದೆ.


Click it and Unblock the Notifications








