ಡಕಾರ್ ರ‍್ಯಾಲಿ 2022: ಮೂರನೇ ಹಂತದ ಸ್ಪರ್ಧೆಯಲ್ಲಿ ಹೀರೋ ಮೋಟೊಸ್ಪೋರ್ಟ್ಸ್ ಹೊಸ ದಾಖಲೆ
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 44ನೇ ಡಕಾರ್ ರ‍್ಯಾಲಿಯ ಮೂರು ಹಂತಗಳು ಪೂರ್ಣಗೊಂಡಿದ್ದು, ಡಕಾರ್ ರ‍್ಯಾಲಿ ಇತಿಹಾಸದಲ್ಲಿ ಹೀರೋ ಮೋಟೋಸ್ಪೋರ್ಟ್ಸ್ ತಂಡವು ಹೊಸ ದಾಖಲೆ ನಿರ್ಮಿಸಿದೆ.

ಮರಳುಗಾಡಿನಲ್ಲಿ ನಡೆಯುತ್ತಿರುವ 44ನೇ ಡಕಾರ್ ರ‍್ಯಾಲಿಯಲ್ಲಿ ವಿಶ್ವದ ಪ್ರಮುಖ ಮೋಟಾರ್‌ಸ್ಪೋರ್ಟ್ ಸ್ಪರ್ಧಿಗಳ ಮಧ್ಯೆ ಪ್ರಶಸ್ತಿಗಾಗಿ ಸೆಣಸಾಟ ಜೋರಾಗಿದ್ದು, ಬೈಕ್, ಕಾರ್ ಮತ್ತು ಟ್ರಕ್ ವಿಭಾಗದಲ್ಲಿನ ಸ್ಪರ್ಧೆಗಳು ಕುತೂಹಲ ಹುಟ್ಟುಹಾಕಿವೆ. ಜೆದ್ದಾ ನಗರದಿಂದ ಆರಂಭವಾಗಿರುವ ಪ್ರಸಕ್ತ ವರ್ಷದ ಮೋಟಾರ್‌ಸ್ಪೋರ್ಟ್ ಸ್ಪರ್ಧೆಗಳು ಸದ್ಯ ಮೂರನೇ ಹಂತವನ್ನು ತಲುಪಿದ್ದು, ಭಾರತೀಯ ಮೋಟಾರ್‌ಸ್ಪೋರ್ಟ್ ತಂಡವೊಂದು ಡಕಾರ್ ರ‍್ಯಾಲಿಯ ಹೊಸ ದಾಖಲೆ ನಿರ್ಮಿಸಿದೆ.

3ನೇ ಹಂತದ ಡಕಾರ್ ರ‍್ಯಾಲಿಯು ಅಲ್ ಖೈಸುಮಾದಿಂದ ಆರಂಭವಾಗಿ ಪ್ರಮುಖ ಮಾರ್ಗಗಳ ಮೂಲಕ ಪುನಃ ಅಲ್ ಖೈಸುಮಾವನ್ನೇ ತಲುಪುಬೇಕಿತ್ತು. 338 ಕಿ.ಮೀ ಅಂತರ ಹೊಂದಿದ್ದ ಮೂರನೇ ಮಾರ್ಗದಲ್ಲಿ ಮಳೆ ಕಾರಣಕ್ಕೆ 100 ಕಿ.ಮೀ ಕಡಿತ ನಂತರ ಪ್ರಮುಖ ಸ್ಪರ್ಧಿಗಳ ನಡುವೆ ಅಗ್ರಸ್ಥಾನಕ್ಕಾಗಿ ಸಾಕಷ್ಟು ಪೈಪೋಟಿ ನಡೆಯಿತು.

ಮೂರನೇ ಹಂತದ ಬೈಕ್ ಸ್ಪರ್ಧೆಯಲ್ಲಿ ಹೀರೋ ಮೋಟೊಸ್ಪೋರ್ಟ್ಸ್ ಹೊಸ ದಾಖಲೆ ನಿರ್ಮಿಸಿದ್ದು, ಭಾರತೀಯ ಮೂಲದ ಮೊದಲ ಮೋಟಾರ್‌ಸ್ಪೋರ್ಟ್ಸ್ ತಂಡವೊಂದು ಡಕಾರ್ ರ‍್ಯಾಲಿ ಇತಿಹಾಸದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತು.

ಹೀರೋ ಮೋಟೊಸ್ಪೋರ್ಟ್ಸ್ ತಂಡವನ್ನು ಕಳೆದ ಮೂರು ವರ್ಷಗಳಿಂದ ಪ್ರತಿನಿಧಿಸುತ್ತಿರುವ ಪೋರ್ಚುಗೀಸ್ ರೈಡರ್ ಜೋಕ್ವಿಮ್ ರೊಡ್ರಿಗಸ್ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯ ಮೂರನೇ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡರು. 44ನೇ ಆವೃತ್ತಿಯ ಎರಡು ಹಂತಗಳಲ್ಲೂ ಉತ್ತಮ ಪ್ರದರ್ಶನ ತೋರಿದ ಜೋಕ್ವಿಮ್ ರೊಡ್ರಿಗಸ್ ಮೂರನೇ ಹಂತದಲ್ಲಿ ಮೊದಲ ಸ್ಥಾನಕ್ಕೇರುವ ಮೂಲಕ ಹೀರೋ ಮೋಟೊಸ್ಪೋರ್ಟ್ಸ್ ತಂಡವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ.

ಹೀರೋ ಮೋಟೊಸ್ಪೋರ್ಟ್ಸ್ ತಂಡದ ಮತ್ತೊಬ್ಬ ಸ್ಪರ್ಧಿ ಆರೋನ್ ಮೇರ್ ಕೂಡಾ ಉತ್ತಮ ಪ್ರದರ್ಶನ ತೋರುತ್ತಿದ್ದು, ಮೂರನೇ ಹಂತದಲ್ಲಿ 18ನೇ ಸ್ಥಾನದೊಂದಿಗೆ ನಿಗದಿತ ಗುರಿತಲುಪಿದರು.

ಜೋಕ್ವಿಮ್ ರೋಡ್ರಿಗಸ್ ಅವರು ಮೊದಲ ಹಂತದಲ್ಲಿ 30ನೇ ಸ್ಥಾನದಲ್ಲಿ ಮತ್ತು ಎರಡನೇ ಹಂತದಲ್ಲಿ 6ನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಮೂರನೇ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುವ ಮೂಲಕ ಮೂರು ಹಂತದ ಒಟ್ಟಾರೆ ರ‍್ಯಾಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿದ್ದಾರೆ.

ಆರೋನ್ ಮೇರ್ ಅವರು ಮೊದಲನೇ ಸುತ್ತಿನಲ್ಲಿ 11ನೇ ಸ್ಥಾನವನ್ನು ಎರಡನೇ ಹಂತದಲ್ಲಿ 10ನೇ ಸ್ಥಾನದಲ್ಲಿ ಮತ್ತು ಮೂರನೇ ಹಂತವನ್ನು 18ನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಒಟ್ಟಾರೆ ರ‍್ಯಾಕಿಂಗ್‌ನಲ್ಲಿ ಆರೋನ್ ಮೇರ್ ಸದ್ಯ 10ನೇ ಸ್ಥಾನದಲ್ಲಿದ್ದಾರೆ.

ಮೂರನೇ ಹಂತವನ್ನು 2 ಗಂಟೆ 34 ನಿಮಿಷ 41 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ರೈಡರ್ ಜೋಕ್ವಿಮ್ ರೊಡ್ರಿಗಸ್ ಮೊದಲ ಸ್ಥಾನ ಪಡೆದರೆ ಮೊದಲ ವಿಜೇತ ಸ್ಪರ್ಧಿಗಿಂತ 1 ನಿಮಿಷ 03 ಸೆಕೆಂಡ್ ತಡವಾಗಿ ಗುರಿತಲುಪಿದ ಫ್ಯಾಕ್ಟರಿ ಕೆಟಿಎಂ ತಂಡದ ಟೋಬಿ ಪ್ರೈಸ್ ಎರಡನೇ ಸ್ಥಾನವನ್ನು ಮತ್ತು 1 ನಿಮಿಷ 14 ಸೆಕೆಂಡ್ ತಡವಾಗಿ ಗುರಿತಲುಪಿದ ಬಿಎಎಸ್ ಕೆಟಿಎಂ ತಂಡದ ಮೇಸನ್ ಕ್ಲೀನ್ ಮೂರನೇ ಸ್ಥಾನಪಡೆದುಕೊಂಡರು.

ಮೂರನೇ ಹಂತದಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡ ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಸ್ಯಾಮ್ ಸದರ್‌ಲ್ಯಾಂಡ್ 5ನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಮೂರು ಹಂತದಲ್ಲೂ ಉತ್ತಮ ಸಾಧನೆಯೊಂದಿಗೆ ಸದ್ಯ ಒಟ್ಟಾರೆ ಬೈಕ್ ರ‍್ಯಾಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಡಕಾರ್ ರ‍್ಯಾಲಿಯಲ್ಲಿ ಸ್ಪರ್ಧಿ ನಡೆಸುತ್ತಿರುವ ಭಾರತದ ಮತ್ತೊಂದು ಪ್ರಮುಖ ಮೋಟಾರ್‌ಸ್ಪೋರ್ಟ್ ತಂಡವಾದ ಟಿವಿಎಸ್ ಶೆರ್ಕೊ ಕೂಡಾ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಮೂವರು ಸ್ಪರ್ಧಿಗಳನ್ನು ಒಳಗೊಂಡಿರುವ ಟಿವಿಎಸ್ ತಂಡದ ಸ್ಪರ್ಧಿಗಳು ಟಾಪ್ 30 ಒಳಗೆ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಮೂರನೇ ಹಂತದ ಕಾರುಗಳ ವಿಭಾಗದಲ್ಲಿ ಮೊದಲ ಬಾರಿಗೆ ದಾಖಲೆಯೊಂದು ನಿರ್ಮಾಣವಾಗಿದ್ದು, ಡಕಾರ್ ರ‍್ಯಾಲಿ ಇತಿಹಾಸದಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಯೊಂದನ್ನು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು.

44ನೇ ಆವೃತ್ತಿಯ ಮೊದಲ ಮತ್ತು ಎರಡನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದ ಆಡಿ ಇ-ಟ್ರಾನ್ ಚಾಲಕ ಕಾರ್ಲೋಸ್ ಸೈನ್ಜ್ ಮೂರನೇ ಹಂತವನ್ನು 2 ಗಂಟೆ 26 ನಿಮಿಷ 51 ಸೆಕೆಂಡ್‌ಗಳಲ್ಲಿ ಗುರಿತಲುಪುವ ಮೂಲಕ ಮೊದಲ ಸ್ಥಾನಪಡೆದುಕೊಂಡರು.

ಗಾಜೊ ರೇಸಿಂಗ್ ಟೊಯೊಟಾ ತಂಡದ ನಾಸರ್ ಅಲ್-ಅತ್ತಿಯಾ ಸದ್ಯ ಕಾರ್ ರೇಸಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮೂರನೇ ಹಂತದಲ್ಲಿ ಗಾಜೊ ರೇಸಿಂಗ್ ಟೊಯೊಟಾ ತಂಡದ ಮತ್ತೊಬ್ಬ ಸ್ಪರ್ಧಿ ಹೆಂಕ್ ಲೇಟಗಾನ್ ಎರಡನೇ ಸ್ಥಾನವನ್ನು ಮತ್ತು ಆಡಿ ಇ-ಟ್ರಾನ್ ಮತ್ತೊಬ್ಬ ಚಾಲಕ ಸ್ಟೀಫನ್ ಪೀಟರ್‌ಹ್ಯಾನ್ಸೆಲ್ ಮೂರನೇ ಸ್ಥಾನ ಪಡೆದುಕೊಂಡರು.

ಹಾಗೆಯೇ ಟ್ರಕ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಕಮಾಜ್ ಮಾಸ್ಟರ್ ತಂಡವು ಅತ್ಯುತ್ತಮ ಚಾಲನಾ ಕೌಶಲ್ಯತೆಯೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮೊದಲ ಸ್ಥಾನವನ್ನು ಕಮಾಜ್ ಮಾಸ್ಟರ್ ತಂಡದ ಡಿಮಿಟ್ರಿ ಸೊಟಿಕ್ನೊವ್, ಆಂಡ್ರೆ ಕಾರ್ಗಿನೋವ್ ಎರಡನೇ ಸ್ಥಾನವನ್ನು ಮತ್ತು ಇವೆಕೊ ತಂಡದ ಜಾನಸ್ ವ್ಯಾನ್ ಕ್ಯಾಸ್ಟರೆನ್ ಮೂರನೇ ಸ್ಥಾನ ಪಡೆದುಕೊಂಡರು.


Click it and Unblock the Notifications








