ಡಕಾರ್ ರ‍್ಯಾಲಿ 2022: ಏಳನೇ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡ ಹೀರೋ ಮೋಟೊಸ್ಪೋರ್ಟ್ಸ್
ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 44ನೇ ಡಕಾರ್ ರ‍್ಯಾಲಿಯಲ್ಲಿ ಏಳು ಹಂತಗಳನ್ನು ಪೂರ್ಣಗೊಂಡಿದ್ದು, ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಪ್ರತಿ ಹಂತದಲ್ಲೂ ಉತ್ತಮ ರ‍್ಯಾಕಿಂಗ್‌ನಲ್ಲಿ ಮುಂದುವರಿಯುತ್ತಿರುವ ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ಮತ್ತು ಗಾಜೊ ರೇಸಿಂಗ್ ಟೊಯೊಟಾ ತಂಡಗಳು ಅಗ್ರಸ್ಥಾನದಲ್ಲಿವೆ.

2022ರ ಡಕಾರ್ ರ‍್ಯಾಲಿಯು ಸೌದಿ ಅರೇಬಿಯಾದ ಜೆದ್ದಾದಿಂದ ಆರಂಭವಾಗಿ ರಿಯಾದ್ ನಗರಕ್ಕೆ ಬಂದು ತಲುಪಿದ್ದು, ಬರೋಬ್ಬರಿ 4 ಸಾವಿರ ಕಿ.ಮೀ ಅಂತರವನ್ನು ಒಳಗೊಂಡಿರುವ ಪ್ರಸಕ್ತ ವರ್ಷದ ರ‍್ಯಾಲಿಯಲ್ಲಿ ಏಳನೇ ಹಂತವು 402 ಕಿ.ಮೀ ಒಳಗೊಂಡಿತ್ತು. ಏಳನೇ ಹಂತದಲ್ಲಿ ಒಟ್ಟು 402 ಕಿ.ಮೀ ಮಾರ್ಗದಲ್ಲಿ 299 ಕಿ.ಮೀ ಸಾಮಾನ್ಯ ಮಾರ್ಗವಾದರೆ 103 ಕಿ.ಮೀ ಅತ್ಯಂತ ಕಠಿಣ ಮಾರ್ಗವಾಗಿತ್ತು.

ರಿಯಾದ್‌ನಿಂದ ಆರಂಭಗೊಂಡಿದ್ದ ಏಳನೇ ಹಂತವು ಪ್ರಮುಖ ಮಾರ್ಗಗಳೊಂದಿಗೆ ಅಲ್ ದಾವಾದಿಮಿಗೆ ತಲುಪಬೇಕಿತ್ತು. ಏಳನೇ ಹಂತದ ಮಾರ್ಗವನ್ನು 3 ಗಂಟೆ 28 ನಿಮಿಷ 46 ಸೆಕೆಂಡುಗಳಲ್ಲಿ ಗುರಿತಲುಪಿದ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಜೋಸ್ ಇಗ್ನಾಸಿಯೊ ಕಾರ್ನೆಜೊ ಮೊದಲ ಸ್ಥಾನ ಪಡೆದುಕೊಂಡರು.

ಬೈಕ್ ವಿಭಾಗದಲ್ಲಿ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಜೋಸ್ ಇಗ್ನಾಸಿಯೊ ಕಾರ್ನೆಜೊ ಮೊದಲ ಸ್ಥಾನ ಪಡೆದರೆ ಮೊದಲ ವಿಜೇತ ಸ್ಪರ್ಧಿಗಿಂತ 44 ಸೆಕೆಂಡ್ ತಡವಾಗಿ ಗುರಿತಲುಪಿದ ರೆಡ್‌ಬುಲ್ ಕೆಟಿಎಂ ತಂಡದ ರೈಡರ್ ಕೆವಿನ್ ಬೆನವಿಡೆಸ್ ಎರಡನೇ ಸ್ಥಾನವನ್ನು ಮತ್ತು 2 ನಿಮಿಷ 51 ಸೆಂಕೆಂಡ್ ತಡವಾಗಿ ಗುರಿತಲುಪಿದ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ತಂಡದ ಜೋನ್ ಬ್ಯಾರೆಡಾ ಬೋರ್ಟ್ ಮೂರನೇ ಸ್ಥಾನ ಪಡೆದುಕೊಂಡರು.

ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಆರು ಹಂತಗಳಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡು ಬಂದಿರುವ ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಸ್ಯಾಮ್ ಸದರ್‌ಲ್ಯಾಂಡ್ ಏಳನೇ ಹಂತದಲ್ಲಿ ಆದ ಸಣ್ಣ ಅಪಘಾತದಿಂದ ಬೈಕ್ ವಿಭಾಗದ ಒಟ್ಟಾರೆ ಬೈಕ್ ರ‍್ಯಾಕಿಂಗ್‌ನಲ್ಲಿ ಅಗ್ರಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಮೊಲದ ಸ್ಥಾನದಲ್ಲಿ ಮಾನ್ಸ್ಟರ್ ಎನರ್ಜಿ ಯಮಹಾ ತಂಡದ ಆಡ್ರಿಯನ್ ವ್ಯಾನ್ ಬೆವೆರೆನ್ ಮುಂಚೂಣಿಯಲ್ಲಿದ್ದಾರೆ.

ಹಾಗೆಯೇ ಭಾರತೀಯ ಮೋಟೊಸ್ಪೋರ್ಟ್ಸ್ ತಂಡಗಳಾದ ಹೀರೋ ಮೋಟೊಸ್ಪೋರ್ಟ್ಸ್ ಮತ್ತು ಟಿವಿಎಸ್ ಶೆರ್ಕೊ ತಂಡಗಳು ಏಳನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಹೀರೋ ತಂಡವನ್ನು ಪ್ರತಿನಿಧಿಸುತ್ತಿರುವ ಪೋರ್ಚುಗೀಸ್ ರೈಡರ್ ಜೋಕ್ವಿಮ್ ರೊಡ್ರಿಗಸ್ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಮೂರನೇ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಜೋಕ್ವಿಮ್ ರೊಡ್ರಿಗಸ್ ಏಳನೇ ಹಂತವನ್ನು 6ನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಹೀರೋ ಮೋಟೊಸ್ಪೋರ್ಟ್ಸ್ ತಂಡದ ಮತ್ತೊಬ್ಬ ಸ್ಪರ್ಧಿ ಆರೋನ್ ಮೇರ್ ಕೂಡಾ ಉತ್ತಮ ಪ್ರದರ್ಶನ ತೋರುವ ಮೂಲಕ ಆರನೇ ಹಂತದಲ್ಲಿ 18ನೇ ಸ್ಥಾನಪಡೆದುಕೊಂಡಿದ್ದಾರೆ.

ಟಿವಿಎಸ್ ಶೆರ್ಕೊ ತಂಡವು ಕೂಡಾ ಏಳನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಳ್ಳುತ್ತಿದ್ದು, ಮೂವರು ಸ್ಪರ್ಧಿಗಳನ್ನು ಒಳಗೊಂಡಿರುವ ಟಿವಿಎಸ್ ತಂಡದ ಸ್ಪರ್ಧಿಗಳು ಟಾಪ್ 20 ಒಳಗೆ ಸ್ಥಾನ ಪಡೆದಿದೆ.

ಏಳನೇ ಹಂತದಲ್ಲಿ ಕಾರುಗಳ ವಿಭಾಗವು ಕೂಡಾ ಸಾಕಷ್ಟು ಕುತುಹೂಲ ಕಾರಣವಾಗಿತ್ತು. ಮೊದಲ ಸ್ಥಾನಕ್ಕಾಗಿ ಟೊಯೊಟಾ ಮತ್ತು ಹಂಟರ್ ಟಿ1 ಬಿಆರ್‌ಎಕ್ಸ್ ನಡುವೆ ಭಾರೀ ಪೈಪೋಟಿ ಮುಂದುವರಿಯುತ್ತಿದೆ.

ಹಂಟರ್ ಟಿ1 ಬಿಆರ್‌ಎಕ್ಸ್ ತಂಡದ ಸೆಬಾಸ್ಟಿಯನ್ ಲೋಯೆಬ್ ಏಳನೇ ಹಂತದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಕೇವಲ 5 ನಿಮಿಷ 26 ಸೆಕೆಂಡುಗಳ ಅಂತರದಲ್ಲಿ ಗುರಿತಲುಪಿದ ಗಾಜೊ ರೇಸಿಂಗ್ ಟೊಯೊಟಾ ತಂಡದನಾಸರ್ ಅಲ್-ಅತ್ತಿಯಾ ಎರಡನೇ ಸ್ಥಾನ ಪಡೆದರು.

ಏಳನೇ ಹಂತದ ಕಾರುಗಳ ವಿಭಾಗದಲ್ಲಿ ಆಡಿಯ ಸ್ಪೋರ್ಟ್ ತಂಡದ ಕಾರ್ಲೊಸ್ ಶೆಂಜ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು, ಕಾರುಗಳ ವಿಭಾಗದಲ್ಲಿ ಒಟ್ಟಾರೆ ರ‍್ಯಾಕಿಂಗ್‌ನಲ್ಲಿ ಗಾಜೊ ರೇಸಿಂಗ್ ಟೊಯೊಟಾ ತಂಡದ ನಾಸರ್ ಅಲ್-ಅತ್ತಿಯಾ ಮೊದಲ ಸ್ಥಾನದಲ್ಲಿದ್ದಾರೆ.

ಟ್ರಕ್ ವಿಭಾಗದ ಸ್ಪರ್ಧೆಯಲ್ಲಿ ಕಮಾಜ್ ಮಾಸ್ಟರ್ ತಂಡವು ಅತ್ಯುತ್ತಮ ಚಾಲನಾ ಕೌಶಲ್ಯತೆಯೊಂದಿಗೆ ಅಗ್ರಸ್ಥಾನದೊಂದಿಗೆ ಮುಂದುವರೆದಿದ್ದು, ಮೊದಲ ಮೂರು ಸ್ಥಾನವನ್ನು ಕಮಾಜ್ ಮಾಸ್ಟರ್ ತಂಡದ ಆಂಟನ್ ಶಿಬಾಲೋವ್, ಡಿಮಿಟ್ರಿ ಸೊಟಿಕ್ನೊವ್, ಮಾರ್ಟಿನ್ ವಾನ್ ಜಯ ಗಳಿಸಿದರು.

44ನೇ ಆವೃತ್ತಿಯಲ್ಲಿ ಕಳೆದ ಆವೃತ್ತಿಯಲ್ಲಿನ 14 ಹಂತಗಳನ್ನು 12ಕ್ಕೆ ಇಳಿಕೆ ಮಾಡಿದ್ದು, ಯಾವುದೇ ರೀತಿಯ ದುರಂತಗಳಿಗೆ ಎಡೆಮಾಡಿಕೊಡದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲಾಗಿದೆ. 2022ರ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಒಟ್ಟು ಅಂತರವನ್ನು ಕಳೆದ ಬಾರಿಯ 7 ಸಾವಿರ ಕಿ.ಮೀ ಅಂತರದಿಂದ 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿದೆ.

2022ರ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದು, ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಡಲಾಗಿದೆ.


Click it and Unblock the Notifications








