ಭಾರತದಲ್ಲಿ ಹೊಸ ಸ್ಕೂಪಿ 110cc ಸ್ಕೂಟರ್ ಬಿಡುಗಡೆಗೆ ಪೇಟೆಂಟ್ ಸಲ್ಲಿಸಿದ ಹೋಂಡಾ!
ಜಪಾನಿನ ದ್ವಿಚಕ್ರ ವಾಹನ ತಯಾರಕ ಹೋಂಡಾ ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಇನ್ನಷ್ಟು ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದರ ಭಾಗವಾಗಿ, ಬ್ರ್ಯಾಂಡ್ ಭಾರತದಲ್ಲಿ ಹಲವಾರು ಪೇಟೆಂಟ್‌ಗಳನ್ನು ಸಲ್ಲಿಸಿದ್ದು, ಶೀಘ್ರದಲ್ಲೇ ಸ್ಕೂಪಿ ಎಂಬ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.

ಹೋಂಡಾ ಭಾರತದಲ್ಲಿ ವ್ಯಾಪಕ ಶ್ರೇಣಿಯ ಹೊಸ ವಾಹನಗಳನ್ನು ಬಿಡುಗಡೆ ಮಾಡಲು ಯೋಜಿಸಿದ್ದು, ಇತ್ತೀಚಿನ ವರದಿಯ ಪ್ರಕಾರ ಕಂಪನಿಯು ದೇಶದಲ್ಲಿ ಸ್ಕೂಪಿ ಎಂಬ ಹೊಸ ಸ್ಕೂಟರ್‌ಗಾಗಿ ಪೇಟೆಂಟ್‌ಗಳನ್ನು ಸಲ್ಲಿಸಿದೆ. ಕೇವಲ ಪೇಟೆಂಟ್ ಸಲ್ಲಿಕೆಯಿಂದ ಇದರ ಮಾರುಕಟ್ಟೆ ಪ್ರಸ್ತುತಿಯನ್ನು ಖಾತರಿಪಡಿಸದಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಸ್ಕೂಪಿ ಅತ್ಯಂತ ಕಾರ್ಯಸಾಧ್ಯವಾದ ಆಯ್ಕೆಯಾಗಲಿದೆ ಎಂದು ಕಂಪನಿ ಭಾವಿಸಿದೆ.

ಈ ಸ್ಕೂಟರ್ ಅನ್ನು ಭಾರತದಲ್ಲಿ 2017 ರಲ್ಲಿ ಪರೀಕ್ಷಿಸಲಾಗಿತ್ತು, ಆದರೆ ಕಾರಣಾಂತರಗಳಿಂದ ಬಿಡುಗಡೆ ಮಾಡಿರಲಿಲ್ಲ. ನಂತರ ಹೋಂಡಾ ಕಳೆದ ವರ್ಷ ಮಾರ್ಚ್‌ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎನ್ನಲಾಗಿದೆ. ಸ್ಕೂಪಿ ಮಾದರಿಯು ಆಧುನಿಕ ಕ್ಲಾಸಿಕ್ ಸ್ಕೂಟರ್ ಆಗಿದ್ದು, ರೆಟ್ರೊ ಸ್ಟೈಲಿಂಗ್‌ನೊಂದಿಗೆ ಯುವಕರು ಮತ್ತು ವಯಸ್ಕರನ್ನು ಆಕರ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಈ ವಿಭಾಗದಲ್ಲಿ ಸ್ಕೂಪಿಗೆ ಪ್ರತಿಸ್ಪರ್ಧಿಗಳಾದ ಹೀರೋ ಪ್ಲೆಷರ್ ಪ್ಲಸ್, ಮೆಸ್ಟ್ರೋ ಎಡ್ಜ್, ಟಿವಿಎಸ್ ಜುಪಿಟರ್ ಮತ್ತು ಭಾರತೀಯ ಕೌಂಟರ್ಪಾರ್ಟ್ಸ್ ಹೋಂಡಾ ಡಿಯೋ ಮತ್ತು ಆಕ್ಟಿವಾ 6Gಗೆ ಹೋಲಿಸಿದರೆ ಇದು ವಿನ್ಯಾಸದಲ್ಲಿ ಅತ್ಯುತ್ತಮ ಲುಕ್ ಅನ್ನು ಪಡೆದುಕೊಂಡಿದೆ. ರೆಟ್ರೊ ಶೈಲಿಯ ವೈಶಿಷ್ಟ್ಯಗಳನ್ನು ಸ್ಕೂಟರ್‌ನಲ್ಲಿ ಸೇರಿಸಲಾಗಿದೆ. ಪ್ರಸ್ತುತ ಮಾರಾಟದಲ್ಲಿರುವ ಕಂಪನಿಯ ಡಿಯೊ ಮತ್ತು ಆಕ್ಟಿವಾ 6G ಸ್ಕೂಟರ್‌ಗಳಂತೆ ಉತ್ತಮ ಪ್ರತಿಕ್ರಿಯೆ ಪಡೆಯುವ ನಿರೀಕ್ಷೆಯಿದೆ.

ಮುಂಭಾಗದ ಏಪ್ರನ್‌ಗೆ ಜೋಡಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್, ಬೀನ್-ಆಕಾರದ ಟರ್ನ್ ಇಂಡಿಕೇಟರ್‌ಗಳು ಸ್ಕೂಟರ್‌ಗೆ ಸ್ಟೈಲಿಷ್ ಲುಕ್ ಅನ್ನು ನೀಡುತ್ತದೆ. ಇದರ ವಿನ್ಯಾಸವು ಯುರೋಪಿಯನ್ ಸ್ಕೂಟರ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ನಯವಾದ ಬಾಡಿ ಪ್ಯಾನೆಲ್‌ಗಳ ಮೇಲಿನ ಸಾಲುಗಳನ್ನು ಪಡೆದುಕೊಂಡಿದೆ. ಜೊತೆಗೆ ಹ್ಯಾಂಡಲ್ ಬಾರ್, ಸಿಂಗಲ್ ಪೀಸ್ ಸ್ಯಾಡಲ್, ದೊಡ್ಡದಾದ ಮತ್ತು ಉದ್ದನೆಯ ಸೀಟ್‌ನೊಂದಿಗೆ ಸಂಪೂರ್ಣವಾಗಿ ವಿಭಿನ್ನವಾದ ಮುಂಭಾಗವನ್ನು ಪಡೆದುಕೊಂಡಿದೆ.

ಸ್ಕೂಪಿ ಅತ್ಯುತ್ತಮವಾದ ಮೆತ್ತನೆಯ ಸಿಂಗಲ್ ಪೀಸ್ ಸೀಟ್ ಹೊಂದಿದ್ದು ದೂರದ ಪ್ರಯಾಣಕ್ಕೆ ಅನುಕೂಲವಾಗಲಿದೆ. ಮುಂಭಾಗದ ಡ್ಯಾಷ್‌ಬೋರ್ಡ್ ಒಳಗೆ USB ಚಾರ್ಜಿಂಗ್ ಪೋರ್ಟ್ ಜೊತೆಗೆ, ಸ್ಕೂಪಿ 15.4 ಲೀಟರ್ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದಕ್ಕಾಗಿ ಕಂಪನಿಯು ವಿಶಾಲವಾದ ಫ್ಲೋರ್ಬೋರ್ಡ್ ಅನ್ನು ಸಹ ಒದಗಿಸಿದೆ.

ಈ ಫ್ಲೋಬೋರ್ಡ್ ಸಾಮಾನುಗಳನ್ನು ಸಾಗಿಸಲು ಸುಲಭವಾಗಿಸುತ್ತದೆ. ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಇಗ್ನಿಷನ್, ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲೈಟ್‌ಗಳು, ಮುಂಭಾಗದಲ್ಲಿ ಮಲ್ಟಿ-ಫಂಕ್ಷನ್ ಹುಕ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಭದ್ರತೆಯ ದೃಷ್ಟಿಯಿಂದ, ಹೋಂಡಾ ಹೊಸ ಸ್ಕೂಪಿಯನ್ನು ಸ್ಮಾರ್ಟ್ ಕೀಯೊಂದಿಗೆ ಸಜ್ಜುಗೊಳಿಸಿದೆ. ಇದು ನಾರ್ತ್-ಬ್ಯಾಕ್ ವೈಶಿಷ್ಟ್ಯ ಮತ್ತು ಆಂಟಿ-ಥೆಫ್ಟ್ ಅಲಾರಂ ಅನ್ನು ನೀಡುತ್ತದೆ. ಇದರ ಹಾರ್ಡ್‌ವೇರ್ ಸೆಟಪ್‌ಗೆ ನೋಡುವುದಾದರೆ, ಸ್ಕೂಟರ್‌ನ ಸಸ್ಪೆನ್ಶನ್‌ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಒದಗಿಸಲಾಗಿದೆ.

ಹೋಂಡಾ ಸ್ಕೂಪಿ ಸ್ಕೂಟರ್ ಅನ್ನು eSAF ಫ್ರೇಮ್‌ನೊಂದಿಗೆ ಡಿಸೈನ್ ಮಾಡಲಾಗಿದೆ. ಕಂಪನಿಯು ಎರಡೂ ತುದಿಗಳಲ್ಲಿ 12-ಇಂಚಿನ ಮಿಶ್ರಲೋಹದ ಚಕ್ರಗಳನ್ನು ನೀಡಿದ್ದು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಅನ್ನು ಅಳವಡಿಸಲಾಗಿದೆ. ಉತ್ತಮ ಬ್ರೇಕಿಂಗ್ ಅನುಭವಕ್ಕಾಗಿ ಸ್ಕೂಟರ್ ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ಹೋಂಡಾ ಸ್ಕೂಪಿಯು ಅದೇ 109.51 cc ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, SOHC ಎಂಜಿನ್‌ನಿಂದ ಚಾಲಿತವಾಗಿದ್ದು, ಇದೇ ಎಂಜಿನ್ ಅನ್ನು ಭಾರತದಲ್ಲಿ ಆಕ್ಟಿವಾ ಮತ್ತು ಡಿಯೊಗೆ ನೀಡಲಾಗಿದೆ. ಈ ಎಂಜಿನ್ ಭಾರತೀಯ ಮಾದರಿಗಳಲ್ಲಿ ಗರಿಷ್ಠ 7.76 bhp ಮತ್ತು 9 Nm ಟಾರ್ಕ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಈ ಸ್ಕೂಟರ್ ಪ್ರಸ್ತುತ ಇಂಡೋನೇಷ್ಯಾ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಿದ್ದು, 9 bhp ಮತ್ತು 9.3 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು eSP (ವರ್ಧಿತ ಸ್ಮಾರ್ಟ್ ಪವರ್) ಜೊತೆಗೆ ಬರುತ್ತದೆ. ಈ ವೈಶಿಷ್ಟ್ಯವು ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಲ್ಲದೆ ಇಂಧನ ದಕ್ಷತೆಯನ್ನು ಸುಧಾರಿಸಲು ಸ್ಕೂಟರ್‌ಗೆ ಸಹಾಯ ಮಾಡುತ್ತದೆ.

ಹೋಂಡಾ ಈ ಸ್ಕೂಟರ್‌ಗೆ ಎಸಿಜಿ ಸ್ಟಾರ್ಟರ್ ಅನ್ನು ಸಹ ಒದಗಿಸಲಾಗಿದೆ. ಇದು ಸಾಮಾನ್ಯ ಸ್ಕೂಟರ್‌ನಿಂದ ಹೊರಹೊಮ್ಮುವ ಶಬ್ದದಂತಲ್ಲದೇ ಮೃದುವಾದ ಎಂಜಿನ್ ಪ್ರಾರಂಭವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಈ ಮೂಲಕ ಸ್ಕೂಪಿ ಅತ್ಯುತ್ತಮ ಇಂಧನ ಹಾಗೂ ಬಡ್ಜೆಟ್ ಸ್ಕೂಟರ್‌ಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.


Click it and Unblock the Notifications