eRockit AG ಜೊತೆಗೆ LML ಪಾಲುದಾರಿಕೆ: ಈ ವರ್ಷ ಮೂರು ಇ-ವಾಹನಗಳ ಬಿಡುಗಡೆಗೆ ಸಿದ್ಧತೆ
ಜರ್ಮನ್ ಮೂಲದ ಉದಯೋನ್ಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ eRockit AG ಜೊತೆಗೆ ಹಳೆಯ ಕಾಲದ ಜನಪ್ರಿಯ ಸ್ಕೂಟರ್ ತಯಾರಕ ಕಂಪನಿಯಾದ LML ಪಾಲುದಾರಿಕೆಯನ್ನು ದೃಢಪಡಿಸಿದ್ದು, ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದೆ.

ಆದರೆ ಈ ಬಾರಿ ಪೆಟ್ರೋಲ್ ವಾಹನವಲ್ಲ, ಬದಲಿಗೆ ಎಲೆಕ್ಟ್ರಿಕ್ ವಾಹನದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. LML ಕಂಪನಿಯು ಜರ್ಮನ್ ಎಲೆಕ್ಟ್ರಿಕ್ ಬೈಕ್ ತಯಾರಕ eRockit AGಯೊಂದಿಗಿನ ಜಂಟಿ ಉದ್ಯಮದ ಅಡಿಯಲ್ಲಿ, ಎರಡು ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಎಲೆಕ್ಟ್ರಿಕ್ ಬೈಕ್‌ಗಳನ್ನು ಪರಿಚಯಿಸಲು ಯೋಜಿಸಿವೆ. ಯುರೋಪಿಯನ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಇ-ರಾಕಿಟ್ ಲಿಮಿಟೆಡ್ ಎಡಿಷನ್ 100 ಇ-ಬೈಕ್ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ.

ಅದೇ ರೀತಿ LML ಕಂಪನಿಯು ಇ-ರಾಕಿಟ್ ಪಾಲುದಾರಿಕೆಯಲ್ಲಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಹೈಪರ್‌ಬೈಕ್, ಸರಳ ಇ-ಬೈಕ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಎಂಬ ಮೂರು ಎಲೆಕ್ಟ್ರಿಕ್ ಮಾದರಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. eRockit AG ಸಹಯೋಗದೊಂದಿಗೆ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಹೈಪರ್‌ಬೈಕ್ ಅನ್ನು ಉತ್ಪಾದಿಸಲಿದೆ.

ಹೈಪರ್ ಬೈಕ್ ತಯಾರಿ
ಜರ್ಮನಿ ಮೂಲದ eRockit AG ವಿಶೇಷ ರೀತಿಯ ಎಲೆಕ್ಟ್ರಿಕ್ ಬೈಕುಗಳನ್ನು ತಯಾರಿಸುತ್ತದೆ, ಇದರ ವಿನ್ಯಾಸ ಇತರ ಎಲೆಕ್ಟ್ರಿಕ್ ಬೈಕ್‌ಗಳಿಗೆ ಹೋಲಿಸಿಕೊಂಡರೆ ತುಂಬಾ ಭಿನ್ನವಾಗಿರುತ್ತದೆ. ಇದನ್ನು ಪೆಡಲಿಂಗ್ ಮೂಲಕ ಚಾಲನೆ ಮಾಡಲಾಗುತ್ತದೆ. ಈ ಇ-ಬೈಕ್ ಅನ್ನು ಗಂಟೆಗೆ 90 ಕಿ.ಮೀ ವೇಗದಲ್ಲಿ ಓಡಿಸಬಹುದು.

ಈ ಇ-ಬೈಕ್‌ನಲ್ಲಿ ಅಡ್ವಾನ್ಸ್ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸಲಾಗಿದ್ದು, ಇದರ ಸಹಾಯದಿಂದ ಇದು ಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ಗಿಂತ ಹೆಚ್ಚಿನ ವ್ಯಾಪ್ತಿಯನ್ನು ನೀಡುತ್ತದೆ. ಅಲ್ಲದೇ ಲಿಮಿಟೆಡ್ ಎಡಿಷನ್ 100 ಇ-ಬೈಕ್ ಪೆಡಲ್ ಸೌಲಭ್ಯವನ್ನು ಹೊಂದಿರುವ ಎಲೆಕ್ಟ್ರಿಕ್ ಬೈಕ್ ಆಗಿದೆ.

ಬೈಕ್‌ನ ವಿನ್ಯಾಸ, ಸಾಮರ್ಥ್ಯ, ಬೆಲೆ ಹಾಗೂ ಸಾಂಪ್ರದಾಯಿಕ ಎಲೆಕ್ಟ್ರಿಕ್ ವಾಹನಗಳಿಗೆ ಸಂಪೂರ್ಣ ಭಿನ್ನವಾಗಿದ್ದು, ಇದರ ಬೆಲೆ 11,850 ಯೂರೋಗಳಾಗಿದೆ. ಭಾರತೀಯ ಮೌಲ್ಯದಲ್ಲಿ ರೂ. 10 ಲಕ್ಷ ರೂ.ಗೂ ಅಧಿಕ. ಬೆಲೆ ಮಾತ್ರವಲ್ಲ, ಇ-ಬೈಕ್‌ನ ಕಾರ್ಯಕ್ಷಮತೆಯೂ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ.

ಪೆಡಲ್ ಸಕ್ರಿಯಗೊಳಿಸಿದಾಗ ವಾಹನವು ಗರಿಷ್ಠ 89 ಕಿ.ಮೀ ವೇಗವನ್ನು ತಲುಪುತ್ತದೆ. ಯಾವುದೇ ಪೆಡಲ್ ಬೈಕ್ ಇಷ್ಟು ವೇಗದಲ್ಲಿ ಚಲಿಸುವುದು ನಾವು ನೋಡಿರಲು ಸಾಧ್ಯವಿಲ್ಲ. ಈ ವಾಹನವು ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ದುಬಾರಿ ಬೆಲೆಯೊಂದಿಗೆ ಯುರೋಪಿಯನ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

eRockit AG ಕಂಪನಿಯು ಕಳೆದ ವರ್ಷ ಬಿಡುಗಡೆ ಮಾಡುವ ಕುರಿತು ಮಾಡಿದ್ದ ಕಾರ್ಯಕ್ರಮವೊಂದರಲ್ಲಿ ಈ ವಾಹನವನ್ನು ಭಾರತದಲ್ಲಿಯೂ ಮಾರಾಟಕ್ಕೆ ನೀಡುವುದಾಗಿ ಘೋಷಿಸಿತ್ತು. ಆದರೆ, ಈ ಸಂಬಂಧ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ನೀಡಿರಲಿಲ್ಲ.

ಆದರೆ ಇದೀಗ eRockit AGಯೊಂದಿಗೆ ಪಾಲುದಾರಿಕೆ ಹೊಂದಿರುವ ಎಲ್‌ಎಂಎಲ್ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿದೆ. ಈ ಬೈಕ್‌ಗಳ ವಿತರಣೆಯನ್ನು ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿದೆ. ಅದೇ ಸಮಯದಲ್ಲಿ, ಉತ್ಪಾದನೆಯನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ 2023 ರಿಂದ ಪ್ರಾರಂಭಿಸುವ ನಿರೀಕ್ಷೆ ಇದೆ.

ವಿಶಿಷ್ಟ ವೈಶಿಷ್ಟ್ಯಗಳನ್ನು ಪಡೆಯಲಿದೆ
LML ತನ್ನ ಎಲೆಕ್ಟ್ರಿಕ್ ವಾಹನಗಳು ಇಲ್ಲಿಯವರೆಗೆ ವಿಶ್ವದ ಯಾವುದೇ ದ್ವಿಚಕ್ರ ವಾಹನ ಎಲೆಕ್ಟ್ರಿಕ್ ವಾಹನಗಳಲ್ಲಿ ನೀಡದ ಕೆಲವು ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ ಎಂದು ಹೇಳಿಕೊಂಡಿದೆ. ಈ ಮೂಲಕ ಭಾರತದಲ್ಲಿ, LML ಹೀರೋ ಎಲೆಕ್ಟ್ರಿಕ್, ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ ಮತ್ತು ಓಕಿನಾವಾ ಮುಂತಾದ ಪ್ರಮುಖ ತಯಾರಕರೊಂದಿಗೆ ಸ್ಪರ್ಧಿಸಲಿದೆ.

ಹರಿಯಾಣ ಮೂಲದ ಸಾರಾ ಎಲೆಕ್ಟ್ರಿಕ್ ಆಟೋ ಸಹಯೋಗದಲ್ಲಿ LML ಭಾರತದಲ್ಲಿ ವಾಹನಗಳನ್ನು ಉತ್ಪಾದಿಸುತ್ತಿದೆ. ಸೆರಾ ಎಲೆಕ್ಟ್ರಿಕ್ ಆಟೋ ಈ ಹಿಂದೆ ತನ್ನ ಸ್ಥಾವರದಲ್ಲಿ ಹಾರ್ಲೆ-ಡೇವಿಡ್‌ಸನ್‌ಗಾಗಿ ಭಾರತದಲ್ಲಿ ವಾಹನಗಳನ್ನು ತಯಾರಿಸಿತ್ತು. ಹರಿಯಾಣದ ಬವಾಲ್‌ನಲ್ಲಿರುವ ಸ್ಥಾವರವು ತಿಂಗಳಿಗೆ 18,000 ಯೂನಿಟ್ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯದೊಂದಿಗೆ 2.17 ಲಕ್ಷ ಚದರ ಅಡಿಗಳಲ್ಲಿ ಹರಡಿದೆ.

ಎಲ್‌ಎಂಎಲ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಾಧ್ಯತೆಯನ್ನು ಅನ್ವೇಷಿಸುತ್ತಿದೆ ಎಂದು ಈ ಹಿಂದೆ ಘೋಷಿಸಿತ್ತು. ಕಂಪನಿಯು ಭಾರತದ ಗ್ರಾಹಕರಿಗೆ ದೀರ್ಘ ಶ್ರೇಣಿಯ ಮತ್ತು ಹೆಚ್ಚಿನ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳನ್ನು ಬಿಡುಗಡೆ ಮಾಡಬಹುದು. ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳನ್ನು ವಿನ್ಯಾಸಗೊಳಿಸಲು ಜಪಾನ್ ಮತ್ತು ಯುರೋಪ್‌ನ ಎಂಜಿನಿಯರಿಂಗ್ ಸಂಸ್ಥೆಗಳ ಸಹಾಯವನ್ನು ತೆಗೆದುಕೊಳ್ಳುತ್ತಿದೆ.

ಈಗಾಗಲೇ ಭಾರತೀಯ ಮಾರುಕ್ಕಟೆಯಲ್ಲಿ ಹಲವು ಇ-ಬೈಕ್‌ಗಳು ಗ್ರಾಹಕರನ್ನು ಆಕರ್ಷಿಸಿವೆ. ಅಲ್ಲದೆ ಒಂದೊಂದು ಇ-ಬೈಕ್ ಕೂಡ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಸಾಂಪ್ರದಾಯಿಕ ಪೆಟ್ರೋಲ್ ಚಾಲಿತ ವಾಹನಗಳನ್ನು ಹಿಂದಿಕ್ಕುವ ಪ್ರಯತ್ನದಲ್ಲಿವೆ. ಈ ನಡುವೆ LML ಇ-ಬೈಕ್ ಭಾರತದಲ್ಲಿ ಬಿಡುಗಡೆಯಾದರೆ ಯಾವ ರೀತಿಯಲ್ಲಿ ಆಧರಣೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.


Click it and Unblock the Notifications








