ಮಿಷನ್ ಎಲೆಕ್ಟ್ರಿಕ್‌ಗೆ ಸ್ವಾಗತ: ಹೀರೊ ಕಂಪನಿಗೆ ಓಲಾ ಸಿಇಓ ಅಭಿನಂದನೆ
ಓಲಾ ಎಲೆಕ್ಟ್ರಿಕ್ ಸಿಇಒ ಭವೀಶ್ ಅಗರ್ವಾಲ್, ಇತ್ತೀಚೆಗೆ ಹೀರೋ ಮೋಟೋಕಾರ್ಪ್ ಎಲೆಕ್ಟ್ರಿಕ್ ವಿಭಾಗಕ್ಕೆ ಪ್ರವೇಶಿಸುವ ಘೋಷಣೆ ಮಾಡಿರುವುದನ್ನು ಸ್ವಾಗತಿಸಿ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಪೆಟ್ರೋಲ್‌ಗೆ ವಿದಾಯ ಹೇಳಿ, ಮಿಷನ್ ಎಲೆಕ್ಟ್ರಿಕ್ ಆಗಮಿಸಿದ್ದಕ್ಕೆ ಸ್ವಾಗತ ಎಂದಿದ್ದಾರೆ.

ಹೀರೊ ಮೋಟೋಕಾರ್ಪ್ ತನ್ನ ಹೊಸ ಎಲೆಕ್ಟ್ರಿಕ್ ವೆಹಿಕಲ್ ಬ್ರಾಂಡ್ 'ವಿಡಾ'ನ ಲೋಗೋವನ್ನು ಮಾರ್ಚ್ 3ರಂದು ಬಹಿರಂಗಪಡಿಸಿದೆ, ಈ ಮೂಲಕ ಕಂಪನಿಯು ತನ್ನ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅತಿ ಶೀಘ್ರದಲ್ಲಿ ಪರಿಚಯಿಸಲಿದೆ. ಮಾಹಿತಿಯ ಪ್ರಕಾರ ಹೀರೊ ಮೋಟೋಕಾರ್ಪ್ ಇದೇ ವರ್ಷದ ಜುಲೈ 1ರಂದು ವಿಡಾ ಬ್ರಾಂಡ್ ಅಡಿಯಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ.

ಹೀರೊ ಮೋಟೋಕಾರ್ಪ್‌ನ ಅಧ್ಯಕ್ಷ ಮತ್ತು ಸಿಇಒ ಡಾ.ಪವನ ಮುಂಜಾಲ್ ಅವರು, ಬ್ರಾಂಡ್‌ನ ಸಾಮಾಜಿಕ ಜಾಲತಾಣದಲ್ಲಿ ವಿಡಾ ಬ್ರಾಂಡ್ ಲೋಗೋವನ್ನು ಬಹಿರಂಗಪಡಿಸಿದ್ದಾರೆ. ಭಾರತದ ಚಿತ್ತೂರುನಲ್ಲಿರುವ ಕಂಪನಿಯ 'ಗ್ರೀನ್' ಉತ್ಪಾದನಾ ಘಟಕದಲ್ಲಿ ವಾಹನಗಳನ್ನು ತಯಾರಿಸಲಾಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾದ ಕೆಲವು ದಿನಗಳ ನಂತರ ಅದರ ವಿತರಣೆಯನ್ನು ಸಹ ಪ್ರಾರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಈ ಮೂಲಕ ಹೀರೋ ಕಂಪನಿ ಎಲೆಕ್ಟ್ರಿಕ್ ವಿಭಾಗದಲ್ಲಿ ಈಗಾಗಲೇ ನೆಲೆಯೂರಿರುವ ಓಲಾ ಎಲೆಕ್ಟ್ರಿಕ್‌ಗೆ ಕಠಿಣ ಸ್ಪರ್ಧೆ ನೀಡಲು ಹೊರಟಿದೆ. ಓಲಾ ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತರಲಿದೆ ಎಂದು ಇತ್ತೀಚೆಗೆ ಕಂಪನಿಯ ಸಿಇಒ ಭವೀಶ್ ಅಗರ್ವಾಲ್ ಗ್ರಾಹಕರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದರು. ಕಂಪನಿಯು ಎಲೆಕ್ಟ್ರಿಕ್ ಕಾರನ್ನು ತರಲು ಸಿದ್ಧತೆ ನಡೆಸುತ್ತಿದೆ ಓಲಾ ಎಲೆಕ್ಟ್ರಿಕ್ ಕಾರನ್ನು 2023 ರಲ್ಲಿ ತರಬಹುದು ಎಂದು ಹೇಳಿದ್ದರು.

ವಾಸ್ತವವಾಗಿ, ಗ್ರಾಹಕರೊಬ್ಬರು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ತೋರಿಸಲು ಟ್ವೀಟರ್‌ನಲ್ಲಿ ತಮ್ಮ ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನೊಂದಿಗೆ ನೆಕ್ಸನ್ ಇವಿಯನ್ನು ಸಹ ತೋರಿಸಿದ್ದರು. ಆ ಎರಡೂ ವಾಹನಗಳು ಎಲೆಕ್ಟ್ರಿಕ್ ಮತ್ತು ಕಪ್ಪು ಬಣ್ಣದಲ್ಲಿದ್ದವು, ಈ ಮೂಲಕ ನನ್ನ ಕಪ್ಪು ಇವಿ ಕುಟುಂಬ ಪೂರ್ಣಗೊಂಡಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದಿಕೊಂಡಿದ್ದರು. ಈ ಬಗ್ಗೆ ಓಲಾ ಎಲೆಕ್ಟ್ರಿಕ್ ಸಿಇಒ ಪ್ರತಿಕ್ರಿಯಿಸಿ ಮುಂದಿನ ಕಾರು ಓಲಾದ ಎಲೆಕ್ಟ್ರಿಕ್ ಕಾರು ಆಗಿರಬೇಕು ಎಂದು ಟ್ವೀಟ್ ಮಾಡಿದ್ದರು.

ಓಲಾ ತನ್ನ ದ್ವಿಚಕ್ರ ವಾಹನವನ್ನು ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆ ಮಾಡಿದೆ. ಇದೀಗ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ಮೂಲಕ ಕಂಪನಿಯು ನಾಲ್ಕು ಚಕ್ರದ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ದೊಡ್ಡ ಪಾದಾರ್ಪಣೆ ಮಾಡಲು ಹೊರಟಿದೆ. ಭಾರತದಾದ್ಯಂತ ಹೈಪರ್ ಚಾರ್ಜ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸಿರುವುದಾಗಿ ಓಲಾ ಕೆಲವು ತಿಂಗಳ ಹಿಂದೆ ಬಹಿರಂಗಪಡಿಸಿತ್ತು.

ಈ ಯೋಜನೆಯಲ್ಲಿ, ಕಂಪನಿಯು ಭಾರತದ 400 ನಗರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ರಚಿಸಲಿದೆ, ಇದಕ್ಕಾಗಿ ಸುಮಾರು 2 ಬಿಲಿಯನ್ ಡಾಲರ್‌ಗಿಂತ ಹೆಚ್ಚು ವೆಚ್ಚವಾಗಲಿದೆ. ಈ ಹೈಪರ್ ಚಾರ್ಜ್ ನೆಟ್‌ವರ್ಕ್ ಎರಡು ಸ್ವರೂಪಗಳನ್ನು ಹೊಂದಿರುತ್ತದೆ - ವರ್ಟಿಕಲ್ ಟವರ್ ಆಧಾರಿತ ಚಾರ್ಜರ್ ಮತ್ತು ಸ್ಟ್ಯಾಂಡ್ ಅಲೋನ್ ಚಾರ್ಜರ್.

ಎಲೆಕ್ಟ್ರಿಕ್ ವಾಹನಗಳನ್ನು ಉದ್ದನೆಯ ಟವರ್ ಚಾರ್ಜರ್‌ಗಳಲ್ಲಿ ನಿಲ್ಲಿಸಬಹುದು ಮತ್ತು ಚಾರ್ಜ್ ಮಾಡಬಹುದು, ಆದರೆ ಐಟಿ ಪಾರ್ಕ್‌ಗಳು, ಶಾಪಿಂಗ್ ಮಾಲ್‌ಗಳು ಮತ್ತು ಕೆಫೆಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸ್ಟ್ಯಾಂಡ್ ಅಲೋನ್ ಚಾರ್ಜರ್‌ಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಓಲಾ ಕಂಪನಿಯು ತನ್ನ ಗ್ರಾಹಕರಿಗೆ ತಮ್ಮ ಸ್ಕೂಟರ್‌ಗಳೊಂದಿಗೆ ಚಾರ್ಜರ್‌ಗಳನ್ನು ಸಹ ನೀಡುತ್ತಿದೆ.

ದೇಶದಲ್ಲಿ ಕೈಗೆಟುಕುವ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವುದಲ್ಲದೆ, ಓಲಾ ಎಲೆಕ್ಟ್ರಿಕ್ ಲಿಥಿಯಂ-ಅಯಾನ್ ಬ್ಯಾಟರಿಗಳನ್ನು ಉತ್ಪಾದಿಸಲು ಪ್ರಾರಂಭಿಸಲಿದೆ. ಮುಂಬರುವ ದಿನಗಳಲ್ಲಿ, ಕಂಪನಿಯು ಭಾರತದಲ್ಲಿ ಇವಿ ಸೆಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಬಹುದು, ಅಲ್ಲಿ ಬ್ಯಾಟರಿಗಳನ್ನು ಶೇಕಡಾ 100 ರಷ್ಟು 'ಸ್ಟೇಟ್ ಆಫ್ ದಿ ಆರ್ಟ್' ತಂತ್ರಜ್ಞಾನದೊಂದಿಗೆ ತಯಾರಿಸಲಾಗುತ್ತದೆ.

ಪ್ರಸ್ತುತ, ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳನ್ನು ಹೊರಗಿನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ಕಂಪನಿಯು ಚಿಪ್ ಕೊರತೆಯಿಂದ ಹೆಣಗಾಡುತ್ತಿದೆ, ಇದರಿಂದಾಗಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನ ಬೇಸ್ ವೇರಿಯಂಟ್ ಅನ್ನು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಮುಂದಿನ ವರ್ಷದ ಕೊನೆಯಲ್ಲಿ ವಿ ಸೆಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಬಹುದು. ಈ ಮೂಲಕ ಎಸ್ 1 ಖರೀದಿಸುವ ಗ್ರಾಹಕರಿಗೆ ಕಂಪನಿಯು ಎಸ್ 1 ಪ್ರೊ ಆವೃತ್ತಿಯನ್ನು ತಲುಪಿಸಲಿದೆ. ಈ ಬಗ್ಗೆ ಇತ್ತೀಚೆಗೆ ಕಂಪನಿಯ ಸಿಇಒ ಟ್ವೀಟ್ ಮಾಡಿದ್ದರು.

ಈ ಹಿಂದೆ ಗ್ರಾಹಕರ ಬೇಡಿಕೆಯೆಂತೆ ನಿಗದಿತ ಅವಧಿಯಲ್ಲಿ ಸ್ಕೂಟರ್ ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದ ಓಲಾ ಕಂಪನಿಯು ತನ್ನ ಹೊಸ ವಾಹನ ಉತ್ಪಾದನಾ ವಾಹನ ಘಟಕದಲ್ಲಿ ಪೂರ್ಣ ಪ್ರಮಾಣದ ಉತ್ಪಾದನಾ ಪ್ರಕ್ರಿಯೆಯನ್ನು ಆರಂಭಿಸಿದ್ದು, ದಿನಂಪ್ರತಿ ಒಂದು ಸಾವಿರ ಸ್ಕೂಟರ್ ಉತ್ಪಾದನೆ ಮಾಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿತ್ತು.


Click it and Unblock the Notifications








