ಭಾರತದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಇವಿ ಸ್ಕೂಟರ್ ರಫ್ತು ಮಾಡಲು ಸಿದ್ದವಾದ ಓಲಾ ಎಲೆಕ್ಟ್ರಿಕ್
ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಎಸ್1 ಮತ್ತು ಎಸ್1 ಪ್ರೊ ಇವಿ ಸ್ಕೂಟರ್‌ಗಳ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೂ ಪ್ರವೇಶಿಸುವ ಸುಳಿವು ನೀಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಗಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ವಾರ್ಷಿಕವಾಗಿ 20 ಲಕ್ಷ ಸ್ಕೂಟರ್ ಉತ್ಪಾದನಾ ಸೌಲಭ್ಯ ತೆರೆದಿದ್ದು, ಕಂಪನಿಯು ಭಾರತದಲ್ಲಿ ಮಾತ್ರವಲ್ಲ ಇಲ್ಲಿಂದಲೇ ಪ್ರಮುಖ ಜಾಗತಿಕ ಮಾರುಕಟ್ಟೆಗಳಿಗೆ ಲಗ್ಗೆಯಿಡುವ ಯೋಜನೆ ರೂಪಿಸುತ್ತಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ಇತ್ತೀಚೆಗೆ ನೇಪಾಳದಲ್ಲಿ ಹೊಸ ಇವಿ ಸ್ಕೂಟರ್ ಮಾರಾಟಕ್ಕಾಗಿ ಸಿಜಿ ಮೋಟಾರ್ಸ್‌ನೊಂದಿಗೆ ಸಹಭಾಗೀತ್ವ ಘೋಷಣೆ ಮಾಡಿದ್ದು, ಹೊಸ ಪಾಲುದಾರಿಕೆಯಲ್ಲಿ ಸಿಜಿ ಮೋಟಾರ್ಸ್ ಹೊಸ ಇವಿ ಸ್ಕೂಟರ್ ಮಾರಾಟ ಮಾಡಲಿದೆ.

ನೇಪಾಳದಲ್ಲಿ ಔಪಚಾರಿಕ ಪ್ರವೇಶದ ನಂತರ, ಓಲಾ ಎಲೆಕ್ಟ್ರಿಕ್ ಮುಂದಿನ ಹಂತದಲ್ಲಿ ಲ್ಯಾಟಿನ್ ಅಮೆರಿಕ, ಪ್ರಮುಖ ಏಷ್ಯಾ ರಾಷ್ಟ್ರಗಳು ಮತ್ತು ಯುರೋಪ್ ರಾಷ್ಟ್ರಗಳಿಗೆ ಹೊಸ ಇವಿ ಸ್ಕೂಟರ್ ರಫ್ತು ಮಾಡುವ ಯೋಜನೆ ರೂಪಿಸಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ಇವಿ ಸ್ಕೂಟರ್ ಮಾದರಿಗಳ ಮೇಲೆ ಮಾತ್ರವಲ್ಲದೆ ಎಲೆಕ್ಟ್ರಿಕ್ ಕಾರು ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆ ಯಶಸ್ವಿ ನಂತರ ಎಲೆಕ್ಟ್ರಿಕ್ ಕಾರು ಮಾದರಿಯ ಬಿಡುಗಡೆಗೆ ಸಿದ್ದವಾಗುತ್ತಿದೆ.

ಹೊಸ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಮತ್ತು ಪ್ರಮುಖ ತಾಂತ್ರಿಕ ಸೌಲಭ್ಯಗಳ ಮಾಹಿತಿಗಳನ್ನು ಇನ್ನು ಬಹಿರಂಗಪಡಿಸದ ಓಲಾ ಎಲೆಕ್ಟ್ರಿಕ್ ಕಂಪನಿಯು ಟೀಸರ್ ಚಿತ್ರದ ಮೂಲಕ ಕಾರಿನ ಬ್ಯಾಟರಿ ರೇಂಜ್ ಮತ್ತು ಕೆಲವು ಪ್ರಮುಖ ಮಾಹಿತಿಗಳನ್ನು ಮಾತ್ರ ಹಂಚಿಕೊಂಡಿದ್ದು, ಹೊಸ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮುಂಬರುವ 2024ರ ವೇಳೆಗೆ ರಸ್ತೆಗಿಳಿಸುವ ಯೋಜನೆಯಲ್ಲಿದೆ.

ಭಾರತೀಯ ಗ್ರಾಹಕರ ಅಭಿರುಚಿಗಳಿಗೆ ತಕ್ಕಂತೆ ಯುರೋಪಿನ್ ಕಾರುಗಳ ವಿನ್ಯಾಸದಲ್ಲಿ ಹೊಸ ಇವಿ ಕಾರನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 500 ಕಿ.ಮೀ ಮೈಲೇಜ್ ಹಿಂದಿರುಗಿಸುವ ಭರವಸೆ ನೀಡಿದೆ.

ಜೊತೆಗೆ ಹೊಸ ಕಾರು ಕೇವಲ 4 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವುದರ ಮೂಲಕ ಸ್ಪೋರ್ಟ್ ಕಾರುಗಳಿಗೆ ಸಮನಾದ ಕಾರ್ಯಕ್ಷಮತೆ ಹೊಂದಿದ್ದು, ಹೊಸ ಕಾರು ಮಾದರಿಗಾಗಿ ಕಂಪನಿಯು ತನ್ನದ ಇನ್ ಹೌಸ್ ಬ್ಯಾಟರಿ ಸೌಲಭ್ಯವನ್ನು ಸಿದ್ದಪಡಿಸುತ್ತಿದೆ.

ಇನ್ ಹೌಸ್ ಬ್ಯಾಟರಿ ಸೌಲಭ್ಯದಿಂದ ಇವಿ ಕಾರಿನ ಬೆಲೆಯು ಗಣನೀಯವಾಗಿ ಇಳಿಕೆಯಾಗಲಿದ್ದು, ಬೆಲೆ, ವಿನ್ಯಾಸ, ಫೀಚರ್ಸ್ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲು ಇದು ಸಹಕಾರಿಯಾಗಲಿದೆ.

ಹೊಸ ಕಾರಿನಲ್ಲಿ ಹೆಚ್ಚಿನ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಮಾತ್ರವಲ್ಲದೆ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಸಂಪೂರ್ಣವಾಗಿ ಆವರಿಸಿರುವ ಗ್ಲಾಸ್ ರೂಫ್, ಸ್ಪೋರ್ಟಿ ಡಿಸೈನ್ ಮತ್ತು ಡ್ರ್ಯಾಗ್ ಏರೋಡೈನಾಮಿಕ್‌ನಲ್ಲಿ 0.21 ಗುಣಾಂಕವನ್ನು ಹೊಂದಿದೆ.

ಏರೋಡೈನಾಮಿಕ್ ಗುಣಾಂಕವು ಕಿಯಾ ಇವಿ6 ಮಾದರಿಗಿಂತಲೂ ಹೆಚ್ಚಳವಾಗಿರಲಿದ್ದು, ಇದು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎನ್ನಬಹುದು.

ಪ್ರಸ್ತುತ ಮಾರುಕಟ್ಟೆಯಲ್ಲಿ ಇವಿ ವಾಹನಗಳ ಮಾರಾಟವು ಸಾಕಷ್ಟು ಏರಿಕೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ವಾಹನಗಳು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದ್ದು, ಓಲಾ ಎಲೆಕ್ಟ್ರಿಕ್ ಕಂಪನಿಯು ಸಹ ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಹೊಸ ಇವಿ ಕಾರನ್ನು ಸಿದ್ದಪಡಿಸುತ್ತಿದೆ.

2030ರ ವೇಳೆಗೆ ದೇಶಾದ್ಯಂತ ಶೇ.50ಕ್ಕಿಂತಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮಾರಾಟ ಗುರಿ ಹೊಂದಲಾಗಿದ್ದು, ಕೇಂದ್ರ ಸರ್ಕಾರದ ನಿರ್ಣಯದಂತೆ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಇವಿ ವಾಹನಗಳ ಉತ್ಪಾದನೆಯತ್ತ ವಿಶೇಷ ಗಮನಹರಿಸುತ್ತಿವೆ.

ಮಾರುಕಟ್ಟೆಗೆ ಈಗಾಗಲೇ ಹಲವು ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸಿದ್ದು, ಓಲಾ ಕಂಪನಿಯು ತನ್ನ ಸಹ ಹೊಸ ಎಸ್ ಸರಣಿಯ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಇನ್ನು ಕಂಪನಿಯು ವಿದ್ಯುತ್ ವಾಹನಗಳಿಗಾಗಿ ದೇಶದ ಅತಿದೊಡ್ಡ ಸೆಲ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದ್ದು, ಓಲಾ ಬ್ಯಾಟರಿ ಇನೋವೆಷನ್ ಸೆಂಟರ್ ಮೂಲಕ ಲೀಥಿಯಂ-ಐಯಾನ್ ಬ್ಯಾಟರಿ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿಸುವ ನೀರಿಕ್ಷೆ ಹೊಂದಿದೆ.


Click it and Unblock the Notifications








