65 ಸಾವಿರ ಯುನಿಟ್‌ಗೆ ತಲುಪಿದ ಬುಕಿಂಗ್- ಇವಿ ಸ್ಕೂಟರ್ ವಿತರಣೆ ಮಾಹಿತಿ ಹಂಚಿಕೊಂಡ ಸಿಂಪಲ್ ಎನರ್ಜಿ
ಸಿಂಪಲ್ ಎನರ್ಜಿ ಕಂಪನಿಯು ತನ್ನ ಬಹುನೀರಿಕ್ಷಿತ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಿ ವಿತರಣೆಗೆ ಸಿದ್ದವಾಗುತ್ತಿದ್ದು, ಕಂಪನಿಯು ಹೊಸ ಸ್ಕೂಟರ್ ವಿತರಣೆಗೂ ಮುನ್ನ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಗಾಗಿ ಕಳೆದ ಮಾರ್ಚ್ ತನಕ 40 ಸಾವಿರದಷ್ಟು ಬುಕಿಂಗ್ ಪಡೆದುಕೊಂಡಿದ್ದ ಸಿಂಪಲ್ ಎನರ್ಜಿ ಕಂಪನಿಯು ಇದೀಗ 65 ಸಾವಿರ ಯುನಿಟ್‌ಗೆ ಬುಕಿಂಗ್ ತಲುಪಿದ್ದು, ಮಾಹಿತಿಗಳ ಪ್ರಕಾರ ಕಂಪನಿಯು ಹೊಸ ಸ್ಕೂಟರ್ ವಿತರಣೆಯನ್ನು ಅಕ್ಟೋಬರ್‌ನಿಂದ ಆರಂಭಗೊಳಿಸಲಿದೆ.

ಕಳೆದ ವರ್ಷ ಅಗಸ್ಟ್ 15ರಂದು ಬಿಡುಗಡೆಯಾಗಿದ್ದರಿಂದ ರೂ. 1947 ಮೊತ್ತದೊಂದಿಗೆ ಬುಕಿಂಗ್ ಆರಂಭಿದ್ದ ಸಿಂಪಲ್ ಎನರ್ಜಿ ಕಂಪನಿಯು ಹೊಸ ಸ್ಕೂಟರ್ ಬಿಡುಗಡೆಯ ನಂತರವಷ್ಟೇ ತಾಂತ್ರಿಕ ಸೌಲಭ್ಯಗಳ ಪರೀಕ್ಷಾರ್ಥಾ ಕಾರ್ಯಗಳನ್ನು ಆರಂಭಿಸಿತ್ತು.

ಹೀಗಾಗಿ ಬಿಡುಗಡೆ ಆರಂಭದಲ್ಲಿಯೇ ಈ ವರ್ಷದ ಜೂನ್ ಆರಂಭದಲ್ಲಿ ವಿತರಣೆಗೆ ಕೈಗೊಳ್ಳುವುದಾಗಿ ಹೇಳಿಕೊಂಡಿತ್ತು. ಆದರೆ ಕೇಂದ್ರ ಸರ್ಕಾರವು ಕಳೆದ ತಿಂಗಳು ಇವಿ ವಾಹನಗಳಲ್ಲಿನ ಅಗ್ನಿ ಅವಘಡಗಳನ್ನು ತಪ್ಪಿಸಲು ಜಾರಿಗೆ ತಂದ ಹೊಸ ಮಾನದಂಡ ಅಳವಡಿಕೆ ಕಡ್ಡಾಯವಾದ್ದರಿಂದ ಕಂಪನಿಯು ಮತ್ತೊಮ್ಮೆ ಬ್ಯಾಟರಿ ಪ್ಯಾಕ್ ಅಭಿವೃದ್ದಿಯಲ್ಲಿ ಕೆಲವು ಬದಲಾವಣೆ ಮಾಡಿದ್ದರಿಂದ ವಿತರಣೆಯಲ್ಲಿ ತುಸು ವಿಳಂಬವಾಗಿದೆ.

ಸದ್ಯ ನವೀಕೃತ ಬ್ಯಾಟರಿ ಪ್ಯಾಕ್ ಮೂಲಕವೇ ಕಂಪನಿಯು ಹೊಸ ಇವಿ ಸ್ಕೂಟರ್ ಪರೀಕ್ಷಾರ್ಥ ಕೈಗೊಂಡಿದ್ದು, ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಸದ್ಯ ಟೆಸ್ಟ್ ರೈಡ್ ನೀಡಲಾಗುತ್ತಿದೆ. ಈಗಾಗಲೇ ನಮ್ಮ ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಟೆಸ್ಟ್ ರೈಡ್ ನೀಡಲಾಗಿದ್ದು, ಮುಂದಿನ ಒಂದು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಪ್ರಮುಖ 13 ನಗರಗಳಲ್ಲಿ ಟೆಸ್ಟ್ ರೈಡ್ ನಡೆಯಲಿದೆ.

ಹೀಗಾಗಿ ಹೊಸ ಇವಿ ಸ್ಕೂಟರ್ ಮಾದರಿಯು ಮುಂದಿನ ಅಕ್ಟೋಬರ್ ಅವಧಿಯೊಳಗಾಗಿ ಅಧಿಕೃತವಾಗಿ ರಸ್ತೆಗಿಳಿಯಬಹುದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್ ಸ್ಟ್ಯಾಂಡರ್ಡ್ ವೆರಿಯೆಂಟ್ ಮತ್ತು ಎಕ್ಸೈಡ್ ವೆರಿಯೆಂಟ್ ಎನ್ನುವ ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಿರಲಿದೆ.

ಸಿಂಪಲ್ ಎನರ್ಜಿ ಕಂಪನಿಯು ಸದ್ಯ ಸ್ಟ್ಯಾಂಡರ್ಡ್ ಸಿಂಪಲ್ ಒನ್ ಇವಿ ಸ್ಕೂಟರ್ ಬೆಲೆಯನ್ನು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷಕ್ಕೆ ನಿಗದಿಪಡಿಸಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಆಯ್ಕೆ ಮಾಡುವ ಗ್ರಾಹಕರು ಹೊಸ ಮಾದರಿಗೆ ರೂ. 1.44 ಲಕ್ಷ ನಿಗದಿಪಡಿಸಿದೆ.

ಹೊಸ ಇವಿ ಸ್ಕೂಟರ್ ಮಾದರಿಯು ಶೇ. 95 ರಷ್ಟು ಬ್ಯಾಟರಿ ದಕ್ಷತೆಯನ್ನು ಹಿಂದಿರುಗಿಸಲಿದ್ದು, 4.8 kWh ಬ್ಯಾಟರಿ ಹೊಂದಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 72 ಎನ್ಎಂ ಟಾರ್ಕ್ ಜೊತೆಗೆ ಇಕೋ ಮೋಡ್‌ನಲ್ಲೂ 200 ಕಿಮೀ ಗಿಂತಲೂ ಹೆಚ್ಚಿನ ಮೈಲೇಜ್ ಖಾತ್ರಿಪಡಿಸುತ್ತದೆ.

ಈ ಮೂಲಕ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು 4.5KW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.8kWh ಲೀಥಿಯಂ ಅಯಾನ್ ಬ್ಯಾಟರಿ(ಡ್ಯುಯಲ್ ಬ್ಯಾಟರಿ) ಜೋಡಣೆ ಹೊಂದಿದ್ದು, ಇದು ಪ್ರತಿ ಚಾರ್ಚ್‌ಗೆ ವಿವಿಧ ರೈಡ್ ಮೋಡ್‌ಗಳ ಚಾಲನಾ ಶೈಲಿ ಆಧಾರದ ಮೇಲೆ ಕನಿಷ್ಠ 203 ಕಿ.ಮೀ ನಿಂದ ಗರಿಷ್ಠ 236 ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಖಾತ್ರಿಪಡಿಸಿದೆ.

ಇನ್ನು ಹೆಚ್ಚಿನ ಮೈಲೇಜ್ ಬಯಸುವ ಗ್ರಾಹಕರಿಗೆ ಕಂಪನಿಯು ಹೆಚ್ಚುವರಿಯಾಗಿ 1.6 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಸಹ ಆಯ್ಕೆ ರೂಪದಲ್ಲಿ ಜೋಡಣೆ ಮಾಡುವುದಾಗಿ ಹೇಳಿಕೊಂಡಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಮೂಲಕ ಸಿಂಪಲ್ ಒನ್ ಸ್ಕೂಟರ್ ಮಾಲೀಕರು ಪ್ರತಿ ಚಾರ್ಜ್‌ಗೆ 300 ಕಿ.ಮೀ ಗಿಂತಲೂ ಹೆಚ್ಚು ದೂರ ಪ್ರಯಾಣಿಸಬಹುದಾಗಿದೆ.

1.6 kWh ಸಾಮರ್ಥ್ಯದ ಹೆಚ್ಚುವರಿ ಬ್ಯಾಟರಿ ಪ್ಯಾಕ್ ಅನ್ನು ಕಂಪನಿಯು ಹೊಸ ಸ್ಕೂಟರಿನ ಬೂಟ್ ಸ್ಪೆಸ್‌ನಲ್ಲಿ ಸುಲಭವಾಗಿ ಇರಿಸುವಂತೆ ವಿನ್ಯಾಸಗೊಳಿಸಿದ್ದು, ಇದು ದೂರದ ಪ್ರಯಾಣಕ್ಕೆ ಹೆಚ್ಚು ಸಹಕಾರಿಯಾಗಲಿದೆ.

ಇದರೊಂದಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಸ್ಕೂಟರ್ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಲಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದೆ.

ಇನ್ನೊಂದು ವಿಶೇಷ ಅಂದರೆ ಸಿಂಪಲ್ ಎನರ್ಜಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಮ್ಮ ಬೆಂಗಳೂರಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡುತ್ತಿದ್ದು, ಬೆಂಗಳೂರಿನಲ್ಲಿಯೇ ಅಭಿವೃದ್ದಿಪಡಿಸಿದ ಸಂಭ್ರಮಕ್ಕಾಗಿ ಹೊಸ ಸ್ಕೂಟರ್‌ನಲ್ಲಿ ಕಂಪನಿಯು ವಿಶೇಷವಾಗಿ 'ನಮ್ಮ ರೆಡ್' ಎನ್ನುವ ಬಣ್ಣದ ಆಯ್ಕೆ ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ.

ಹೀಗಾಗಿ ಹೊಸ ಇವಿ ಸ್ಕೂಟರ್ ವಿತರಣೆ ಆರಂಭಕ್ಕೂ ಮುನ್ನ ಗ್ರಾಹಕರ ಬೇಡಿಕೆಯೆಂತೆ ಇನ್ನ ಕೆಲವು ಹೊಸತನಗಳನ್ನು ಪರಿಚಯಿಸುತ್ತಿರುವ ಸಿಂಪಲ್ ಎನರ್ಜಿ ಕಂಪನಿಯು ವಿತರಣೆ ಆರಂಭಿಸಿದ ನಂತರ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದೆ.


Click it and Unblock the Notifications








