ಬೈಕ್ ರಫ್ತಿನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಟಿವಿಎಸ್ ಮೋಟಾರ್
ದೇಶದ ಅತಿದೊಡ್ಡ ವಾಹನ ಉತ್ಪಾದನಾ ಕಂಪನಿಯಾಗಿರುವ ಟಿವಿಎಸ್ ಮೋಟಾರ್ ಕಂಪನಿಯು ತನ್ನ್ ವ್ಯಾಪ್ತಿಯನ್ನು ವಿದೇಶಗಳಿಗೂ ವಿಸ್ತರಿಸಿ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಮುಂಚೂಣಿ ಸಾಧಿಸುತ್ತಿದ್ದು, ವಾಹನ ರಫ್ತು ಪ್ರಮಾಣದಲ್ಲಿ ಇದೀಗ ಮತ್ತೊಂದು ಘನತೆಗೆ ಪಾತ್ರವಾಗಿವೆ.

2021-22ನೇ ಸಾಲಿನಲ್ಲಿ ಇತರೆ ಕಂಪನಿಗಳಿಗಿಂತಲೂ ಅತಿ ಹೆಚ್ಚು ದ್ವಿಚಕ್ರ ವಾಹನಗಳ ಮಾರಾಟ ಹಾಗೂ ರಫ್ತು ಮಾಡಿರುವುದಾಗಿ ಟಿವಿಎಸ್ ಕಂಪನಿ ತಿಳಿಸಿದ್ದು, ತಮಿಳುನಾಡಿನ ಹೊಸೂರಿನಲ್ಲಿ ನೆಲೆಗೊಂಡಿರುವ ಕಂಪನಿಯು 2021ರಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ವಿದೇಶಕ್ಕೆ ರಫ್ತು ಮಾಡಿದೆ ಎಂದು ವರದಿಯಾಗಿದೆ. ಕಂಪನಿಯ ಪ್ರಕಾರ, 2021-22ನೇ ಹಣಕಾಸು ವರ್ಷದಲ್ಲಿ ಸುಮಾರು 1 ಮಿಲಿಯನ್ (10 ಲಕ್ಷ) ದ್ವಿಚಕ್ರ ವಾಹನಗಳನ್ನು ವಿದೇಶಕ್ಕೆ ರಫ್ತು ಮಾಡಿರುವುದಾಗಿ ತಿಳಿಸಿದೆ.

ವಾಸ್ತವವಾಗಿ ಇದು ಬಹಳ ದೊಡ್ಡ ರಫ್ತು ಅಂಕಿಅಂಶವಾಗಿದ್ದು, ಈ ಮೂಲಕ ಟಿವಿಎಸ್ ದೇಶದಲ್ಲಿ ದ್ವಿಚಕ್ರ ವಾಹನಗಳನ್ನು ರಫ್ತು ಮಾಡುವ ಎರಡನೇ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಕಂಪನಿಯ ಪ್ರಸಿದ್ಧ ದ್ವಿಚಕ್ರ ವಾಹನ ಮಾದರಿಯಾದ ಅಪಾಚೆ ವಿದೇಶಗಳಲ್ಲಿ ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿರುವುದಾಗಿ ಕಂಪನಿ ತಿಳಿಸಿದೆ.

ವಿದೇಶಗಳಲ್ಲಿ ವಿಶೇಷವಾಗಿ ಅಭಿವೃದ್ಧಿಪಡಿಸಲಾದ ಎಚ್ಎಲ್ಎಕ್ಸ್ ಎಂಬ ಮಾದರಿಯು ಉತ್ತಮ ಸಂಖ್ಯೆಯ ರಫ್ತುಗಳನ್ನು ಸಹ ಹೊಂದಿದೆ. ಅದೇ ರೀತಿ ಟಿವಿಎಸ್ ರೈಡರ್ ಮತ್ತು ಟಿವಿಎಸ್ ನಿಯೋ ಕೂಡಾ ಉತ್ತಮ ಸಂಖ್ಯೆಯಲ್ಲಿ ರಫ್ತಾಗಿವೆ. ಇದು ಜಾಗತಿಕವಾಗಿ ಟಿವಿಎಸ್ ನ ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸಿದ್ದು, ಭಾರತೀಯ ಉತ್ಪಾದನೆಗೆ ಸಾಕ್ಷಿ ಎಂದು ಕೂಡ ಪರಿಗಣಿಸಲಾಗಿದೆ.

ಟಿವಿಎಸ್ ಪ್ರಸ್ತುತ 80ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯವಹಾರ ನಡೆಸುತ್ತಿದ್ದು, ತನ್ನ ದ್ವಿಚಕ್ರ ವಾಹನಗಳನ್ನು ಆಫ್ರಿಕಾ, ದಕ್ಷಿಣ ಏಷ್ಯಾ, ಭಾರತದ ಉಪ ಖಂಡಗಳು, ಮಧ್ಯ ಮತ್ತು ಲ್ಯಾಟಿನ್ ಅಮೆರಿಕ, ಯುರೋಪಿಯನ್ ದೇಶಗಳು ಮತ್ತು ಉತ್ತರ ಅಮೆರಿಕ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದೆ.

ಭಾರತದಲ್ಲಿ ಬಿಎಂಡಬ್ಲ್ಯೂನ ದ್ವಿಚಕ್ರ ವಾಹನದ ಉತ್ಪಾದನೆಯಲ್ಲೂ ಟಿವಿಎಸ್ ಪಾಲುದಾರಿಕೆ ಪಡೆದುಕೊಂಡಿದೆ. ಕಂಪನಿಯು ಭಾರತದಲ್ಲಿ ಬಿಎಂಡಬ್ಲ್ಯೂನ ಪ್ರಸಿದ್ಧ ಮಾದರಿಗಳಾದ ಜಿ310ಆರ್ (ಐಎಂಸಿ ಜಿ310ವಿ) ಮತ್ತು ಜಿ310 ಜಿಎಸ್ (ಐಎಂಸಿ ಜಿ310 ಜಿಬಿ) ಅನ್ನು ತಯಾರಿಸಿ ಪೂರೈಸುತ್ತದೆ.

ಟಿವಿಎಸ್ ಮತ್ತು ಬಿಎಂಡಬ್ಲ್ಯು ಮೈತ್ರಿಯಲ್ಲಿ ನಡೆಯುತ್ತಿರುವ ವಾಹನ ಉತ್ಪಾದನಾ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸುತ್ತಿರುವುದಾಗಿ ಎಂದು ಇತ್ತೀಚೆಗೆ ವರದಿಯಾಗಿದೆ. ಎರಡೂ ಕಂಪನಿಗಳು ಉದಯೋನ್ಮುಖ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಹೆಜ್ಜೆಯಿಡಲು ಚಿಂತನೆ ನಡೆಸಿದ್ದು, ಎಲೆಕ್ಟ್ರಿಕ್ ವಾಹನಗಳು ಬಿಎಂಡಬ್ಲ್ಯು-ಟಿವಿಎಸ್ ಮೈತ್ರಿಯಲ್ಲಿ ಶೀಘ್ರದಲ್ಲೇ ಮಾರುಕಟ್ಟೆಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ.

ರಫ್ತಿನಲ್ಲಿ ಟಿವಿಎಸ್ ಸಾಧಿಸಿದ ಹೊಸ ಮೈಲಿಗಲ್ಲು ದಾಖಲೆಯ ಬಗ್ಗೆ ಪ್ರತಿಕ್ರಿಯಿಸಿರುವ ಟಿವಿಎಸ್ ಮೋಟಾರ್ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಅವರು ಟಿವಿಎಸ್ ಮೋಟಾರ್ ಕಂಪನಿಗೆ ಒಂದು ಮಿಲಿಯನ್ ರಫ್ತು ಅತ್ಯುತ್ತಮ ಮೈಲಿಗಲ್ಲಾಗಿದೆ. ಇದು ಜಾಗತಿಕವಾಗಿ ಟಿವಿಎಸ್ ಉತ್ಪನ್ನಗಳಿಗೆ ಇರುವ ಉತ್ತಮ ಬೇಡಿಕೆಯನ್ನು ತಿಳಿಸುತ್ತಿದೆ.

ಟಿವಿಎಸ್ ಗುಣಮಟ್ಟ, ತಂತ್ರಜ್ಞಾನ ಮತ್ತು ಗ್ರಾಹಕರ ಸಂತೋಷಕ್ಕೆ ಮೀಸಲಾಗಿದೆ. ಭವಿಷ್ಯದಲ್ಲಿ ಅದನ್ನು ಮತ್ತಷ್ಟು ಸುಧಾರಿಸಬೇಕಾಗಿದೆ. ಈ ವಿಭಾಗದಲ್ಲಿ ಆಕರ್ಷಕ ಉತ್ಪನ್ನಗಳು ಮತ್ತು ಹೊಸ ತಂತ್ರಜ್ಞಾನದ ಕೊಡುಗೆಗಳೊಂದಿಗೆ ಇತರ ಕೆಲವು ದೇಶಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ. ಈ ರೀತಿಯ ನಿರಂತರ ಬೆಳವಣಿಗೆಯ ಪಥವನ್ನು ನಿರ್ಮಿಸಲು ಸಂತೋಷವಾಗಿದೆ ಎಂದು ಹೇಳಿದರು.


Click it and Unblock the Notifications