ಭಾರೀ ಕಡಿಮೆ ಬೆಲೆಯ ಓಲಾ ಎಸ್S1 ಏರ್ ಅಬ್ಬರ ಶುರುವಾಯ್ತು: ಹೇಗಿದೆ ಗೊತ್ತಾ?
ಭಾರತದಲ್ಲಿ ಓಲಾ ಕಂಪನಿ ಸ್ಕೂಟರ್‌ಗಳು ಬಹು ಬೇಡಿಕೆಯಿಂದ ಮಾರಾಟವಾಗುತ್ತಿವೆ. ಅವುಗಳ ಕಾರ್ಯಕ್ಷಮತೆ ಗ್ರಾಹಕರಿಗೆ ಇಷ್ಟವಾಗುತ್ತಿದ್ದು, ಕೈಗೆಟುಕುವ ಬೆಲೆ ಹೊಂದಿರುವುದರಿಂದ ಭಾರೀ ಸಂಖ್ಯೆಯಲ್ಲಿ ಖರೀದಿಸುತ್ತಾರೆ. ಓಲಾ ಕಳೆದ ಕೆಲವು ದಿನಗಳ ಹಿಂದೆ, ಎಸ್S1 ಏರ್ ಹಾಗೂ ಎಸ್S1 ಸ್ಕೂಟರ್‌ಗಳ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿತ್ತು. ಅವುಗಳ ವಿಶೇಷತೆ ತಿಳಿಯೋಣ.
ಓಲಾದ ಎಂಟ್ರಿ ಲೆವೆಲ್ ಎಸ್S1 ಏರ್ ಸ್ಕೂಟರ್ ಅಗ್ಗದ ಬೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಇದು 2 kWh, 3 kWh ಹಾಗೂ 4 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಕ್ರಮವಾಗಿ 85 ಕಿ.ಮೀ, 125 ಕಿ.ಮೀ ಹಾಗೂ 165 ಕಿ.ಮೀ ರೇಂಜ್ ನೀಡಲಿದ್ದು, ಓಲಾ ಎಸ್S1 ಏರ್ ಸ್ಕೂಟರ್‌ನ 4 kWh ಬ್ಯಾಟರಿ ಪ್ಯಾಕ್ ಪಡೆದಿರುವ ಸ್ಕೂಟರ್ ಗರಿಷ್ಠ 85 kmph ಟಾಪ್ ಸ್ವೀಡ್ ಹೊಂದಿದೆ.

2 kWh ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ 99 ಕೆಜಿ ತೂಕವಿದ್ದರೆ, 3 kWh ಬ್ಯಾಟರಿ ಪ್ಯಾಕ್ ಇರುವ ಸ್ಕೂಟರ್ 103 ಕೆಜಿ ಭಾರವಿದೆ ಹಾಗೂ 4 kWh ಬ್ಯಾಟರಿ ಪ್ಯಾಕ್ ಪಡೆದಿರುವ ಓಲಾ ಎಸ್S1 ಏರ್ ಸ್ಕೂಟರ್ 107 ಕೆಜಿ ತೂಕವಿದೆ. ಈ ಸ್ಕೂಟರ್ ರೂಪಾಂತರಗಳಿಗೆ ಅನುಗುಣವಾಗಿ ಬೇರೆ-ಬೇರೆ ಬೆಲೆಯನ್ನು ಹೊಂದಿವೆ. ಕ್ರಮವಾಗಿ ರೂ.84,999, ರೂ.99,999 ಮತ್ತು ರೂ.1,09,999 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿವೆ.
ಓಲಾ ಎಸ್S1 ಏರ್ ಸ್ಕೂಟರ್ ವೈಶಿಷ್ಟ್ಯ ಬಗ್ಗೆ ಮಾತನಾಡುವುದಾದರೆ, ಇದು ಸ್ಮಾರ್ಟ್‌ಫೋನ್ ಕನೆಕ್ಟ್ದ್ 7-ಇಂಚಿನ TFT ಸ್ಕ್ರೀನ್, ಜಿಪಿಎಸ್, ಮ್ಯೂಸಿಕ್ ಪ್ಲೇಬ್ಯಾಕ್, ಸೈಡ್ ಸ್ಟ್ಯಾಂಡ್ ಅಲರ್ಟ್, ರಿಮೋಟ್ ಬೂಟ್ ಲಾಕ್/ ಅನ್‌ಲಾಕ್ ನಂತಹ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಆಸಕ್ತ ಗ್ರಾಹಕರು, ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ರೂ.999 ಪಾವತಿಸಿ, ಬುಕಿಂಗ್ ಮಾಡಬಹುದು. ಈ ಸ್ಕೂಟರ್ ವಿತರಣೆಗಳು ಮಾರ್ಚ್ ತಿಂಗಳಿಂದ ಪ್ರಾರಂಭವಾಗಲಿದ್ದು, ಟೆಸ್ಟ್ ಡ್ರೈವ್ ಹಾಗೂ ವಿತರಣೆಗಳು ಜುಲೈ ನಿಂದ ಶುರುವಾಗಲಿದೆ ಎಂಬ ಮಾಹಿತಿ ದೊರೆತಿದೆ.
ಬಹುನೀರಿಕ್ಷಿತ ಓಲಾ ಎಸ್1 ಕೂಡ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, 2 kWh ಬ್ಯಾಟರಿ ಪ್ಯಾಕ್, ಹಾಗೂ 3 kWh ಬ್ಯಾಟರಿ ಪ್ಯಾಕ್. ಇದು 8.5 kW ಎಲೆಕ್ಟ್ರಿಕ್ ಮೋಟಾರ್ ನಿಂದ ಚಾಲಿತವಾಗಲಿದ್ದು, ಚಿಕ್ಕ ಬ್ಯಾಟರಿ ಪ್ಯಾಕ್, 91 km ರೇಂಜ್ ನೀಡಿದರೆ, ದೊಡ್ಡದಾದ ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ 141 km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಬಹುದು.
ಓಲಾ ಎಸ್1 ಟಾಪ್ ಸ್ವೀಡ್ ಬಗ್ಗೆ ಹೇಳುವುದಾದರೆ, ಇದರ 2 kWh ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ 90 kmph ಹಾಗೂ 3 kWh ಬ್ಯಾಟರಿ ಪ್ಯಾಕ್ ಪಡೆದಿರುವ ಸ್ಕೂಟರ್ 95 kmph ಟಾಪ್ ಸ್ವೀಡ್ ಹೊಂದಿದೆ. ಬೆಲೆಯು ಕೂಡ ಗ್ರಾಹಕರ ಕೈಗೆಟುಕುವಂತಿದ್ದು, ಅಗ್ಗವಾಗಿದೆ. ಬ್ಯಾಟರಿ ಪ್ಯಾಕ್ ಅನುಗುಣವಾಗಿ ರೂ.99,999 ಹಾಗೂ ರೂ.1,09,999 (ಎರಡು ಬೆಲೆಗಳು ಎಕ್ಸ್ ಶೋರೂಂ ಆಧರಿಸಿವೆ) ದರದಲ್ಲಿ ಖರೀದಿಗೆ ಲಭ್ಯವಿದೆ.
ದೇಶದ ಮಾರುಕಟ್ಟೆಯಲ್ಲಿರುವ ಓಲಾದ ಟಾಪ್ ಎಂಡ್ ಮಾದರಿಯಾಗಿರುವ ಎಸ್1 ಪ್ರೊ, ರೂ.1,29,999 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಇದು 4 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 181 km ರೇಂಜ್ ನೀಡಲಿದೆ. ಎಸ್1 ಪ್ರೊ ನಲ್ಲಿರುವ 8.5 kW ಎಲೆಕ್ಟ್ರಿಕ್ ಮೋಟಾರ್ 116 kmph ಟಾಪ್ ಸ್ವೀಡ್ ಹೊಂದಿದ್ದು, ಮೂರು ರೈಡಿಂಗ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಏಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್.
ಸದ್ಯ, ಓಲಾದ ಎಂಟ್ರಿ ಲೆವೆಲ್ ಸ್ಕೂಟರ್ ಎಸ್1 ಏರ್, ಬೇರೆ ಕಂಪನಿ ಸ್ಕೂಟರ್ ಗಳಿಗಿಂತ ತುಂಬಾ ಕಡಿಮೆ ಬೆಲೆಗೆ ಖರೀದಿಗೆ ದೊರೆಯಲಿದ್ದು, ಇದು ಭಾರತದಲ್ಲಿ ಹೊಸ ಗ್ರಾಹಕರನ್ನು ಸೆಳೆಯಬಹುದು. ಅಲ್ಲದೆ, ಓಲಾದ ಮೂರು ಸ್ಕೂಟರ್ ಗಳು, ಎಥರ್ 450, ಟಿವಿಎಸ್ ಐಕ್ಯೂಬ್ ಹಾಗೂ ವಿದಾ V1 ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಈ ಹೊಚ್ಚ ಹೊಸ ಎಸ್1 ಏರ್ ವಿತರಣೆಗಳು ಆರಂಭವಾಗದ ಮೇಲೆ ಅದು ಯಾವ ರೀತಿಯ ಕಾರ್ಯಕ್ಷಮತೆ ಹೊಂದಿರಲಿದೆ ಎಂಬುದು ಗೊತ್ತಾಗಲಿದೆ.


Click it and Unblock the Notifications








