ಮಾರ್ಚ್ 29ಕ್ಕೆ ಹೋಂಡಾದಿಂದ ದೊಡ್ಡ ಘೋಷಣೆ... ಎಲೆಕ್ಟ್ರಿಕ್ ಆಕ್ಟೀವಾ ಪ್ರದರ್ಶನ?
ಭಾರತೀಯ ದ್ವಿಚಕ್ರ ಸ್ಕೂಟರ್ ವಿಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಅಗ್ರಸ್ಥಾನದಲ್ಲಿರುವ ಹೋಂಡಾ ಆಕ್ಟೀವಾ ಇದೀಗ ಹೊಸ ಕ್ರಾಂತಿಗೆ ನಾಂದಿ ಹಾಡಲಿದೆ. ಇತ್ತೀಚೆಗೆ ಆಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಕುರಿತ ಚರ್ಚೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಹೋಂಡಾ ಕಂಪನಿಯು ಇದೇ ಮಾರ್ಚ್ 29 ರಂದು ದೊಡ್ಡ ಘೋಷಣೆ ಮಾಡಲಿದೆ.
ಹೋಂಡಾ ಇತ್ತೀಚೆಗಷ್ಟೇ ತನ್ನ ಶೈನ್ 100 ಎಂಬ ಕಡಿಮೆ ಬೆಲೆಯ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹೀರೋಗೆ ಪೈಪೋಟಿ ನೀಡಲು ಹೋಂಡಾ ಕೂಡ ಈ ಬೈಕ್ ಅನ್ನು ಬಿಡುಗಡೆ ಮಾಡಿದೆ. ಶೈನ್ 100 ಬಿಡುಗಡೆ ಸಮಾರಂಭದಲ್ಲಿ ಕಂಪನಿಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗಕ್ಕೂ ಮುನ್ನುಗ್ಗಲಿದೆ ಎಂದು ಘೋಷಿಸಿತ್ತು. ಅದರಂತೆ, ಹೋಂಡಾ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಯೋಜನೆಯನ್ನು ಮಾರ್ಚ್ 29 ರಂದು ಘೋಷಿಸುವುದಾಗಿ ತಿಳಿಸಿದೆ.

ಆದರೆ ಎಲೆಕ್ಟ್ರಿಕ್ ಆಕ್ಟೀವಾ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಹೋಂಡಾ ತನ್ನ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬಗ್ಗೆ ಯಾವುದೇ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೇ, ಹೋಂಡಾ ತನ್ನ EV ಪ್ರಯಾಣವನ್ನು ಸ್ಕೂಟರ್‌ನೊಂದಿಗೆ ಪ್ರಾರಂಭಿಸುವ ನಿರೀಕ್ಷೆಯಿದೆ. ಆಕ್ಟೀವಾ ಪ್ರಸ್ತುತ ಹೋಂಡಾ ಕಂಪನಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಹೋಂಡಾ ಕೂಡ ತನ್ನ ಮೊದಲ ಉತ್ಪನ್ನವನ್ನು ಹೆಚ್ಚು ಜನಪ್ರಿಯಗೊಳಿಸಲು ಯೋಜನೆ ರೂಪಿಸಿಕೊಂಡಿದೆ ಎನ್ನಲಾಗುತ್ತಿದೆ.
ಈ ನಿಟ್ಟಿನಲ್ಲಿ ಭಾರತದಲ್ಲಿ ಈಗಾಗಲೇ ಭಾರೀ ಜನಪ್ರಿಯತೆ ಪಡೆದಿರುವ ಆಕ್ಟೀವಾ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಗೆ ಪರಿವರ್ತಿಸಿ ಮಾರಾಟಕ್ಕೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ ಮಾರ್ಚ್ 29ರಂದೇ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಈ ಕುರಿತು ಪ್ರಮುಖ ಪ್ರಕಟಣೆಗಳು ಹೊರಬೀಳಲಿದೆಯಂತೆ. ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಕಂಪನಿಯ ಸಿಇಒ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೋಂಡಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ 2024 ರಲ್ಲಿ ಮಾರಾಟವಾಗಲಿದೆ ಎಂದು ಹೇಳಿದ್ದರು.

ಅದರಂತೆ ಮಾರ್ಚ್ 29 ರಂದು ಯೋಜನೆಯ ಘೋಷಣೆಗಳು ಮಾತ್ರ ಹೊರಬರುವ ನಿರೀಕ್ಷೆಯಿದೆ. HP ಯೊಂದಿಗೆ ಹೋಂಡಾ ಕೈಜೋಡಿಸಿದೆ ಮತ್ತು HP ಪೆಟ್ರೋಲ್ ಬಂಕ್‌ಗಳಲ್ಲಿ ಚಾರ್ಜಿಂಗ್ ಕೇಂದ್ರಗಳು ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲಿದೆ ಎಂದು ಹೇಳಲಾಗುತ್ತಿದೆ. ಇದನ್ನು ಗಮನಿಸಿದರೆ ಆಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಬದಲಾಯಿಸಬಹುದಾದ ಬ್ಯಾಟರಿ ಚಾಲಿತ ಸ್ಕೂಟರ್ ಆಗಿರಲಿದೆ ಎಂದೆನಿಸುತ್ತಿದೆ. ಹಾಗೆಯೇ ಇದು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಎಂಬ ವದಂತಿಗಳಿವೆ.
ಈ ಎಲ್ಲಾ ಊಹಾ ಪೋಹಗಳಿಗೆ ಉತ್ತರ ಸಿಗಬೇಕಾದರೆ ಮಾರ್ಚ್ 29 ರವರೆಗೆ ಕಾಯಬೇಕಿದೆ. ಆವರೆಗೂ ಖಂಡಿತ ಹೋಂಡಾ ಆಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ನಿರೀಕ್ಷಿಸಬಹುದು. ಒಂದು ವೇಳೆ ಆಕ್ಟೀವಾ ಎಲೆಕ್ಟ್ರಿಕ್ ಬರುವುದು ಖಚಿತವಾದರೆ ಈಗಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೈಪೋಟಿ ಹೆಚ್ಚಾಗಲಿದೆ. ಸದ್ಯ ಓಲಾ, ಎಥರ್, ಟಿವಿಎಸ್ ಐಕ್ಯೂಬ್ ಸ್ಕೂಟರ್‌ಗಳು ಉತ್ತಮ ಮಾರಾಟ ಗಳಿಸುತ್ತಿವೆ. ಆಕ್ಟೀವಾ ಎಂಟ್ರಿ ಮೂಲಕ ಸಂಪೂರ್ಣ ಚಿತ್ರಣ ಬದಲಾದರೂ ಆಶ್ಚರ್ಯಪಡಬೇಕಿಲ್ಲ.

ಇನ್ನು ಕಳೆದ ಜನವರಿಯಲ್ಲಿ ಬಿಡುಗಡೆಯಾದ ಹೋಂಡಾ ಆಕ್ಟೀವಾ 6G, 109 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 7.84 hp ಗರಿಷ್ಠ ಪವರ್ 8.90 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5.3 ಲೀಟರ್ ಫ್ಯುಯೆಲ್ ಟ್ಯಾಂಕ್ ಸಾಮರ್ಥ್ಯ ಹೊಂದಿದ್ದು, 60 ಕಿ.ಮೀ ಮೈಲೇಜ್ ನೀಡುತ್ತದೆ. ಕಂಪನಿಯು ಈ ಸ್ಕೂಟರ್ ರೂಪಾಂತರಗಳಿಗೆ ಅನುಗುಣವಾಗಿ ರೂ.75,655 ದಿಂದ ರೂ. 81,656 ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿರಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications