333 KM ರೇಂಜ್ ನೀಡುವ ಭಾರತದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ Brisk ಇವಿ
ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಯುಗಾರಂಭವಾಗಿದೆ. ಅದಕ್ಕೆ ತಕ್ಕಂತೆ ವಿವಿಧ ವಾಹನ ತಯಾರಕ ಕಂಪನಿಗಳು ಹತ್ತಾರು ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಲಾಂಚ್ ಮಾಡುತ್ತಿರುತ್ತಿವೆ. ಇದೀಗ, ದೇಶೀಯ ಕಂಪನಿ ಬ್ರಿಸ್ಕ್ ಇವಿ ಗರಿಷ್ಠ ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣ ಮಾಡಿದೆ.
ಹೈದರಾಬಾದ್ ಮೋಟಾರ್ ಶೋನಲ್ಲಿ ಬ್ರಿಸ್ಕ್ ಇವಿ (Brisk EV), ಎರಡು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ವರ್ಚುವಲ್ ರಿಯಾಲಿಟಿ ಮೂಲಕ ಪ್ರದರ್ಶಿಸಿದೆ. ಅವುಗಳೆಂದರೆ, ಆರಿಜಿನ್ (Origin) ಹಾಗೂ ಆರಿಜಿನ್ ಪ್ರೊ (Origin Pro). ಇದರಲ್ಲಿ ಸಂಪೂರ್ಣ ಚಾರ್ಜಿನಲ್ಲಿ ಆರಿಜಿನ್ ಪ್ರೊ ಗರಿಷ್ಠ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದ್ದು, ಬೆಲೆಯು ಕಡಿಮೆಯಿರಲಿದೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ರೇಂಜ್ ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಹೆಚ್ಚಿನ ಗ್ರಾಹಕರು ಖರೀದಿಸಬಹುದು.

ಮೊದಲಿಗೆ ಆರಿಜಿನ್ ಪ್ರೊ (Origin Pro) ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು 4.8 kWh ಸ್ಥಿರ ಬ್ಯಾಟರಿ (fixed battery) ಹಾಗೂ 2.1 kWh ಬದಲಾಯಿಸಬಹುದಾದ ಬ್ಯಾಟರಿ (swappable battery) ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಜೊತೆಗೆ ಸಂಪೂರ್ಣ ಚಾರ್ಜಿನಲ್ಲಿ ಗರಿಷ್ಠ 333 ಕಿಲೋಮೀಟರ್ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್, 85 kmph ಟಾಪ್ ಸ್ವೀಡ್ ಹೊಂದಿದೆ.
ಕೇವಲ 3.3 ಸೆಕೆಂಡುಗಳಲ್ಲಿ ಈ ಸ್ಕೂಟರ್ 0-40 kmph ವೇಗವನ್ನು ಪಡೆಲಿದ್ದು, ಇದರಲ್ಲಿ ಅಳವಡಿಸಿರುವ ಮೋಟಾರ್, 5.5 kW ಪೀಕ್ ಪವರ್ ಉತ್ಪಾದಿಸಲಿದೆ. OTA ಅಪ್ಡೇಟ್, ಬ್ಲೂಟೂತ್ ಸಂಪರ್ಕ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ರೂ.1,20,000 - ರೂ.1,40,000 ಬೆಲೆಯಲ್ಲಿ ಈ ಸ್ಕೂಟರ್ ಖರೀದಿಗೆ ಲಭ್ಯವಾಗಲಿದೆ. ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಇದೇ ಅತಿಹೆಚ್ಚು ರೇಂಜ್ ನೀಡುವ ಸ್ಕೂಟರ್ ಆಗಲಿದೆ ಎಂದು ಹೇಳಲಾಗಿದೆ.

ಮತ್ತೊಂದು ಸ್ಕೂಟರ್, ಆರಿಜಿನ್ (Origin) ಬಗ್ಗೆ ಮಾತನಾಡುವುದಾದರೆ, ಇದು ಫುಲ್ ಚಾರ್ಜಿನಲ್ಲಿ 175 km ರೇಂಜ್ ನೀಡುವ ಸಾಮರ್ಥ್ಯ ಪಡೆದಿದ್ದು, 65 kmph ಟಾಪ್ ಸ್ವೀಡ್ ಹೊಂದಿದೆ. ಕೇವಲ 5 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದೆ. ಜೊತೆಗೆ ಕೊಂಚ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದ್ದು, ರೂ.70,000 ದಿಂದ ರೂ.80,000 ದರದಲ್ಲಿ ಸಿಗಬಹುದು. ಈ ಸ್ಕೂಟರ್ ಕೂಡ ಹಲವು ನವೀನ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಸಿಗಬಹುದು.
ಬ್ರಿಸ್ಕ್ ಇವಿ (Brisk EV)ಯ ಇವರೆಡು ಸ್ಕೂಟರ್ ಗಳನ್ನು ಹೈದರಾಬಾದ್ ಉತ್ಪಾದನಾ ಘಟಕದಲ್ಲಿ ತಯಾರಿಸುತ್ತಿದ್ದು, ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಕೈಗೆಟುಕುವ ಬೆಲೆ ಹಾಗೂ ಅಧಿಕ ರೇಂಜ್ ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.
ಓಲಾ ಕಂಪನಿ ಭಾರತದಲ್ಲಿ ತನ್ನ ಎಂಟ್ರಿ ಲೆವೆಲ್ 'ಎಸ್1 ಏರ್' ಸ್ಕೂಟರ್ ಅನ್ನು ಮೂರು ರೂಪಾಂತರದಲ್ಲಿ ಖರೀದಿಗೆ ನೀಡುತ್ತಿದೆ. ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ಗೆ ಅನುಗುಣವಾಗಿ ಕ್ರಮವಾಗಿ ರೂ.84,999, ರೂ.99,999 ಹಾಗೂ ರೂ.1,09,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಓಲಾದ ಟಾಪ್ ಎಂಡ್ ಮಾದರಿ ಎಸ್1 ಪ್ರೊ ರೂ.129,999 ದರವನ್ನು ಪಡೆದಿದ್ದು, ಗರಿಷ್ಠ 181 km ರೇಂಜ್ ನೀಡಲಿದ್ದು, 95km/h ಟಾಪ್ ಸ್ವೀಡ್ ಹೊಂದಿದೆ.
ಮತ್ತೊಂದು ಕಂಪನಿ ಎಥರ್ ನ '450X Gen 3' ಸ್ಕೂಟರ್, ಬೆಂಗಳೂರಿನಲ್ಲಿ ರೂ.1,41,830 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 108 Km ರೇಂಜ್ ನೀಡಲಿದ್ದು, 90 Kmph ಟಾಪ್ ಸ್ವೀಡ್ ಹೊಂದಿದೆ. ದೇಶದ ಪ್ರಮುಖ ವಾಹನ ತಯಾರಕ ಕಂಪನಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್, ರೂ.1,12,231 ಆನ್-ರೋಡ್ ಬೆಲೆಯಲ್ಲಿ ದೊರೆಯುತ್ತಿದೆ. 100 Km ರೇಂಜ್ ನೀಡಲಿದ್ದು, 78 Kmph ಟಾಪ್ ಸ್ವೀಡ್ ಹೊಂದಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಐದು ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.


Click it and Unblock the Notifications








