e-Sprinto Amery: ಜನಮನ ಗೆದ್ದ ಇ-ಸ್ಪ್ರಿಂಟೊ ಅಮೆರಿ ಎಲೆಕ್ಟ್ರಿಕ್ ಸ್ಕೂಟರ್.. ಬೆಂಗಳೂರಿಗರ ವಿಶೇಷ ಪ್ರೀತಿ!
ದೇಶದ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ (ಇವಿ) ಖರೀದಿಯತ್ತ ಮುಖ ಮಾಡುತ್ತಿದ್ದಾರೆ. ಹೆಚ್ಚಿನ ಸಂಚಾರ ದಟ್ಟಣೆಯಿರುವ ಬೆಂಗಳೂರಿನ ನಿವಾಸಿಗಳು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಇ-ಸ್ಕೂಟರ್‌ಗಳನ್ನು ತಮ್ಮ ಆಯ್ಕೆಯಾಗಿ ಪರಿಗಣಿಸುತ್ತಿದ್ದಾರೆ. ಅದಕ್ಕೆ ಇ-ಸ್ಪ್ರಿಂಟೊ ಕಂಪನಿಯ 'ಅಮೆರಿ' ಸ್ಕೂಟರ್ ಪಡೆದಿರುವ ಬುಕ್ಕಿಂಗ್ ಸಂಖ್ಯೆಯೇ ಸಾಕ್ಷಿ.
ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ಅಪ್ ಇ-ಸ್ಪ್ರಿಂಟೊ (e-Sprinto), ತನ್ನ ಹೊಸ ಅಮೆರಿ (Amery) ಎಲೆಕ್ಟ್ರಿಕ್ ಸ್ಕೂಟರ್ ಕೇವಲ ಎರಡು ವಾರಗಳಲ್ಲಿ 1,000ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದಿದೆ ಎಂದು ಘೋಷಿಸಿದೆ. ಹೈದರಾಬಾದ್ ಮತ್ತು ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕಾಯ್ದಿರಿಸುತ್ತಿದ್ದಾರೆ. ಈ ಸ್ಕೂಟರ್‌ಗಾಗಿ ಮೊದಲ ಬುಕ್ಕಿಂಗ್‌ನ್ನು ಚೆನ್ನೈ ನಗರದಲ್ಲಿ ಸ್ವೀಕರಿಸಲಾಯಿತು ಎಂದು ಕಂಪನಿ ತಿಳಿಸಿದೆ.

ಸದ್ಯ, ದೊರೆತ್ತಿಯುವ ಮಾಹಿತಿ ಪ್ರಕಾರ, ಇ-ಸ್ಪ್ರಿಂಟೋ ಅಮೆರಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಯನ್ನು ಶುರು ಮಾಡಿದ್ದು, ಮೊದಲ ಬ್ಯಾಚ್ ನ 100 ಸ್ಕೂಟರ್‌ಗಳನ್ನು ಇತ್ತೀಚೆಗೆ ಖರೀದಿದಾರರಿಗೆ ಹಸ್ತಾಂತರಿಸಲಾಗಿದೆ. ನೂತನ ಅಮೆರಿ ಎಲೆಕ್ಟ್ರಿಕ್ ಸ್ಕೂಟರ್ ಸುಮಾರು ಒಂದು ತಿಂಗಳ ಕಾಯುವಿಕೆ ಅವಧಿಯನ್ನು ಹೊಂದಿದೆ. ಕಂಪನಿಯು ಗ್ರಾಹಕರಿಗೆ, ಸ್ಕೂಟರ್‌ಗಳನ್ನು ತ್ವರಿತವಾಗಿ ತಲುಪಿಸಲು ಉತ್ಪಾದನೆಗೆ ವೇಗವನ್ನು ನೀಡಿದೆ.
ಇ-ಸ್ಪ್ರಿಂಟೊ ಅಮೆರಿ ಎಲೆಕ್ಟ್ರಿಕ್ ಸ್ಕೂಟರ್ ರೆಟ್ರೋ ಶೈಲಿಯ ವಿನ್ಯಾಸವನ್ನು ಹೊಂದಿದ್ದು, ಇದು, ಬಹುತೇಕ ಖರೀದಿದಾರರಿಗೆ ಇಷ್ಟವಾಗುತ್ತಿದೆ. ಅದರಲ್ಲೂ ಕಂಪನಿಯು 20 - 35 ವರ್ಷದ ಗ್ರಾಹಕರು ಅಧಿಕ ಸಂಖ್ಯೆಯಲ್ಲಿ ಕೊಂಡುಕೊಳ್ಳುವಂತೆ ವಿನ್ಯಾಸ ಮಾಡಿದೆ. ಈ ಅಮೆರಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕೈಗೆಟುಕುವಂತೆಯೇ ಇದ್ದು, ರೂ.1.30 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗಲಿದೆ.

ಇ-ಸ್ಪ್ರಿಂಟೊ ಅಮೆರಿ ಎಲೆಕ್ಟ್ರಿಕ್ ಸ್ಕೂಟರ್ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 98 ಕೆಜಿ ತೂಕವನ್ನು ಹೊಂದಿದ್ದು, ಖರೀದಿದಾರರನ್ನು ಸೆಳೆಯುವ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಖ್ಯವಾಗಿ, ಡಿಜಿಟಲ್ ಡಿಸ್ಪ್ಲೇ, ಆಂಟಿ ಥೆಫ್ಟ್ ಅಲಾರ್ಮ್, ರಿಮೋಟ್ ಕಂಟ್ರೋಲ್ ಲಾಕ್, ಮೊಬೈಲ್ ಚಾರ್ಜಿಂಗ್ ಸಾಕೆಟ್ ಹಾಗೂ ಫೈಂಡ್ ಮೈ ವೆಹಿಕಲ್ ಅಪ್ಲಿಕೇಶನ್ ನಂತಹ ಫೀಚರ್ಸ್ ಪಡೆದಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಅತ್ಯಾಧುನಿಕ 60V 50AH ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಹಾಗೂ 2500 ವ್ಯಾಟ್ BLDC ಹಬ್ ಮೋಟಾರ್ ಉಪಯೋಗ ಮಾಡಲಾಗಿದೆ. ಕಂಪನಿಯೇ ಹೇಳುವಂತೆ ಅಮೆರಿ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜಿನಲ್ಲಿ 140 km ರೇಂಜ್ ನೀಡಲಿದೆ. ಕೇವಲ 6 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯಲಿದ್ದು, 65 kmph ಟಾಪ್ ಸ್ವೀಡ್ ಹೊಂದಿದೆ.
ಇ-ಸ್ಪ್ರಿಂಟೊ ಅಮೆರಿ ಎಲೆಕ್ಟ್ರಿಕ್ ಸ್ಕೂಟರ್ ಮ್ಯಾಟ್, ಹೈ ಸ್ಪಿರಿಟ್ ಯೆಲ್ಲೋ ಸೇರಿದಂತೆ ಮೂರು ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಇದರ ಬ್ಯಾಟರಿ ಪ್ಯಾಕ್ 0 - 100% ಚಾರ್ಜ್ ಆಗಲು ನಾಲ್ಕು ಗಂಟೆಬೇಕು. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಸ್ಕೂಟರ್, ಫ್ರಂಟ್ ಡಿಸ್ಕ್, ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
'ಅಮೆರಿ' ಎಲೆಕ್ಟ್ರಿಕ್ ಸ್ಕೂಟರ್ ಈ ಮಟ್ಟದಲ್ಲಿ ಬುಕ್ಕಿಂಗ್ ಪಡೆದುಕೊಂಡಿರುವ ಬಗ್ಗೆ ಮಾತನಾಡಿರುವ ಇ-ಸ್ಪ್ರಿಂಟೊ ಸಹ-ಸಂಸ್ಥಾಪಕ ಅತುಲ್ ಗುಪ್ತಾ, 'ಗ್ರಾಹಕರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸಂತೋಷ ತಂದಿದೆ. ಅವರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ಇದು, ಭಾರತದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದ್ದಾರೆ.


Click it and Unblock the Notifications








