ಸರ್ವಿಸ್ ಕೊಡುವ ಚಿಂತೆಯೇ ಬೇಡ... ಈ ಬೈಕ್ ತನ್ನನ್ನು ತಾನೇ ನೋಡಿಕೊಳ್ಳುತ್ತದೆ: ಸ್ವದೇಶಿ ಬ್ರಾಂಡ್ EV 'Raptee'
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದ್ದು, ಭವಿಷ್ಯದಲ್ಲಿ ಇಂಧನ ಚಾಲಿತ ವಾಹನಗಳು ಸಂಪೂರ್ಣವಾಗಿ ಕಣ್ಮರೆಯಾದ್ರೂ ಆಶ್ಚರ್ಯವಿಲ್ಲ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಎಂದಾಕ್ಷಣ ಕೇವಲ ಸ್ಕೂಟರ್‌ಗಳು ಮಾತ್ರ ಹೆಚ್ಚಾಗಿ ರಸ್ತೆಗಳಲ್ಲಿ ಕಾಣಸಿಗುತ್ತಿದ್ದವು, ಆದ್ರೆ ಈಗ ಹೊಸ ಇವಿ ಬೈಕ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ.
ಚೆನ್ನೈ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ 'Raptee' ಹೊಸ ಎಲೆಕ್ಟ್ರಿಕ್ ಬೈಕ್‌ನಲ್ಲಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ, ನಮ್ಮ ಎಲೆಕ್ಟ್ರಿಕ್ ಉತ್ಪನ್ನವನ್ನು ಹೊಸ ಮನೋಭಾವದಿಂದ ನಡೆಸುತ್ತಿದ್ದೇವೆ. ನಮ್ಮ ಮೋಟಾರ್‌ಸೈಕಲ್‌ಗಳು ಅರ್ಥಗರ್ಭಿತವಾಗಿವೆ. ಇಂಧನ ಚಾಲಿತ ವಾಹನಗಳನ್ನು ಮೀರಿಸುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿಕೊಂಡಿದೆ.

ಇಂಜಿನಿಯರಿಂಗ್‌ನಲ್ಲಿನ ನಾವೀನ್ಯತೆಯು ನಮ್ಮ ಮಿಷನ್‌ನ ನಿರ್ಣಾಯಕ ಅಂಶವಾಗಿರುವುದರಿಂದ, ಹೊರ ದೇಶಗಳನ್ನು ಅವಲಂಭಿಸದೆ ನಮ್ಮ ವಾಹನದ ಬಹುತೇಕ ಎಲ್ಲಾ ತಂತ್ರಜ್ಞಾನವನ್ನು ನಾವೇ ಅಭಿವೃದ್ಧಿಪಡಿಸಿದ್ದೇವೆ. ಇದು ಬಲವಾದ ಪೇಟೆಂಟ್-ಬೆಂಬಲಿತವಾಗಿದೆ ಎಂದು ಹೇಳಿಕೊಂಡಿರುವ ರಾಪ್ಟಿ ಕಂಪನಿಯು ಚೆನ್ನೈನಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನ ಘಟಕವನ್ನು ಸ್ಥಾಪಿಸಿರುವುದಾಗಿ ತಿಳಿಸಿದೆ.
'ರಾಪ್ಟಿ' ಅಧಿಕೃತ ವೆಬ್ ತಾಣದಲ್ಲಿ ಬೈಕ್ ಪರ್ಫಾಮೆನ್ಸ್ ಹಾಗೂ ಪವರ್ ಕುರಿತು ಗೊತ್ತುಪಡಿಸಿರುವ ಮಾಹಿತಿಯಂತೆ, ಈ ಎಲೆಕ್ಟ್ರಿಕ್ ಬೈಕ್ 3.5 ಸೆಕೆಂಡುಗಳಲ್ಲಿ 60 ಕಿ.ಮೀ ವೇಗ, 135 ಕಿ.ಮೀ ಟಾಪ್ ಸ್ಟೀಡ್ ಹೊಂದಿದೆ. ಸಿಂಗಲ್ ಚಾರ್ಜ್‌ನಲ್ಲಿ 150 ಕಿ.ಮೀ ರಿಯಲ್ ವರ್ಲ್ಡ್ ರೇಂಜ್ ಹಾಗೂ ಕೇವಲ 45 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಕಂಪನಿಯ ಪ್ರಕಾರ, ಈ ವರ್ಷದ ಕೊನೆಯಲ್ಲಿ ಈ ಸ್ಥಾವರದಿಂದ ತನ್ನ ಎಲೆಕ್ಟ್ರಿಕ್-ಮೋಟಾರ್ ಸೈಕಲ್‌ಗಳನ್ನು ಹೊರತರಲಿದೆ. ಇದಲ್ಲದೆ, ವಾರ್ಷಿಕ 1 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ಈ ಸ್ಥಾವರದಲ್ಲಿ 85 ಕೋಟಿ ರೂ. ಹೂಡಿಕೆ ಮಾಡುವ ಗುರಿ ಇದೆ ಎಂದು ಕಂಪನಿ ತಿಳಿಸಿದೆ. ಇದು ಮುಂದಿನ ಎರಡು ವರ್ಷಗಳವರೆಗೆ ಕಂಪನಿಯ ಪ್ರಾಥಮಿಕ ಆಧಾರವಾಗಿ ಕಾರ್ಯನಿರ್ವಹಿಸಲಿದೆ.
ಈಗಾಗಲೇ ಕಂಪನಿ ಅಭಿವೃದ್ಧಿಪಡಿಸಿದ ಬೈಕ್ ನಿರ್ಮಾಣ ಕುರಿತ ತಂತ್ರಜ್ಞಾನ ಮೆಚ್ಚುಗೆ ಪಡೆದಿದೆ. ಇದೇ ಕಾರಣಕ್ಕೆ ವರ್ಷದ ಆರಂಭದಲ್ಲಿ, ಕಂಪನಿಯು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ನಿಂದ ರೂ. 3.27 ಕೋಟಿ ಅನುದಾನವನ್ನು ಪಡೆದುಕೊಂಡಿದೆ. ಇದು ವಾಹನ ಉದ್ಯಮ ಮತ್ತು ಭಾರತ ಸರ್ಕಾರವು ಜಂಟಿಯಾಗಿ ಸ್ಥಾಪಿಸಿದ R&D ಸಂಸ್ಥೆಯಾಗಿದೆ.
ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯದಿಂದ ಕ್ಯಾಪಿಟಲ್ ಗೂಡ್ಸ್ ಯೋಜನೆಯ ಭಾಗವಾಗಿ AMTIFs (ಅಡ್ವಾನ್ಸ್ ಮೊಬಿಲಿಟಿ ಟ್ರಾನ್ಸ್‌ಫರ್ಮೇಷನ್ & ಇನ್ನೋವೇಶನ್ ಫೌಂಡೇಶನ್) ಉದ್ಯಮ ವೇಗವರ್ಧಕ ಕಾರ್ಯಕ್ರಮದ ಅಡಿಯಲ್ಲಿ ಅನುದಾನವನ್ನು ನೀಡಲಾಗಿದೆ ಎಂದು ವರದಿಯಾಗಿದೆ. ಮುಂದಿನ ತಿಂಗಳುಗಳಲ್ಲಿ ಬೈಕ್ ಕುರಿತ ಹೆಚ್ಚಿನ ಮಾಹಿತಿ ಹೊರಬರಲಿದೆ.
ಕೊನೆಯದಾಗಿ ಕಂಪನಿ ಹೇಳುತ್ತಿರುವುದೇನೆಂದರೆ ಆಗಾಗ್ಗೆ ನಿಮ್ಮ ವಾಹನಗಳ ಸ್ಪೇರ್ ಪಾರ್ಟ್‌ಗಳ ಬದಲಿ, ತಿಂಗಳಿಗೊಮ್ಮೆ ವಾಹನವನ್ನು ಸರ್ವಿಸ್ ಸೆಂಟರ್‌ಗೆ ಕೊಂಡೊಯ್ಯುವ ಅವಶ್ಯಕತೆ ಇಲ್ಲ. ನಾವು ನಿಮ್ಮ ಮೋಟಾರ್‌ಸೈಕಲ್ ಅನ್ನು ನೋಡಿಕೊಳ್ಳುತ್ತೇವೆ, ನೀವು ಆರಾಮವಾಗಿ ಕುಳಿತುಕೊಳ್ಳಿ. ಜೊತೆಗೆ ಮೋಟಾರ್ಸೈಕಲ್ ತನ್ನನ್ನು ತಾನೇ ನೋಡಿಕೊಳ್ಳುತ್ತದೆ ಎಂದು ಕಂಪನಿ ವೆಬ್‌ತಾಣದಲ್ಲಿ ಹೇಳಿಕೊಂಡಿದೆ.


Click it and Unblock the Notifications








