ದಾಖಲೆಯ ಬುಕಿಂಗ್ ಪಡೆದುಕೊಂಡ ಜಾಯ್ ಮಿಹೋಸ್ ಇ-ಸ್ಕೂಟರ್: 100 km ರೇಂಜ್ ನೀಡುತ್ತೆ!
ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ವಾರ್ಡ್‌ವಿಜಾರ್ಡ್ ಇನ್ನೋವೇಶನ್ಸ್ ಹೊಸ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ. ಕೆಲವೇ ದಿನಗಳಲ್ಲಿ ಕಂಪನಿಯ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ ಸಂಖ್ಯೆಯ ಬುಕಿಂಗ್ ಪಡೆದುಕೊಂಡಿದೆ. ನೂತನ ಸ್ಕೂಟರ್ ವಿತರಣೆಗಳು ಮುಂದಿನ ತಿಂಗಳಿಂದ (ಮಾರ್ಚ್) ಆರಂಭವಾಗಲಿದೆ.
ಕಳೆದ ತಿಂಗಳು ಜನವರಿ 22ರಿಂದ ಈ ಹೊಸ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಅನ್ನು ದೇಶಾದ್ಯಂತ ಆರಂಭಿಸಲಾಗಿತ್ತು ಕೇವಲ 15 ದಿನದಲ್ಲಿ 18,600 ಮಂದಿ ಬುಕಿಂಗ್ ಮಾಡಿದ್ದಾರೆ. ಅಲ್ಲದೆ, ಕಂಪನಿಯ ಬಹುನೀರಿಕ್ಷಿತ ಜಾಯ್ ಇ-ಬೈಕ್ (Joy E-bike) ಬುಕಿಂಗ್ ಇದೇ ಫೆಬ್ರುವರಿ 9 ರಿಂದ ಆರಂಭವಾಗಲಿದ್ದು, ಏಪ್ರಿಲ್ ತಿಂಗಳಿಂದ ವಿತರಣೆಗಳು ಶುರುವಾಗಲಿದೆ. ಸದ್ಯ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಮಾಡಲು ಆಸಕ್ತಿ ಹೊಂದಿರುವ ಗ್ರಾಹಕರು, ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಡೀಲರ್‌ಶಿಪ್‌ಗೆ ಭೇಟಿ ನೀಡಿ ರೂ. 999 ಟೋಕನ್ ಮೊತ್ತ ಪಾವತಿಸಿ ಬುಕ್ ಮಾಡಬಹುದು.

ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾದ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ರೆಟ್ರೋ ಶೈಲಿಯ ವಿನ್ಯಾಸವನ್ನು ಹೊಂದಿದ್ದು, ರೂ.1.35 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಕೂಟರ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 2.5 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ ಬರೋಬ್ಬರಿ 100 km ರೇಂಜ್ ನೀಡಲಿದೆ. ಜೊತೆಗೆ 7 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದೆ.
ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ ಎಂದರೆ, ಕಡಿಮೆ ಅವಧಿಯಲ್ಲಿ ಅದರ ಬ್ಯಾಟರಿ ವೇಗವಾಗಿ ಚಾರ್ಚ್ ಆಗುತ್ತದೆ. ಬ್ರೇಕಿಂಗ್ ವ್ಯವಸ್ಥೆ, ಸಸ್ಪೆನ್ಷನ್ ಹಾಗೂ ಸೈಜ್ ಬಗ್ಗೆ ಹೇಳುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ. ಅಲ್ಲದೆ, ಫ್ರಂಟ್ ಹಾಗೂ ರೇರ್, ಡಿಸ್ಕ್ ಬ್ರೇಕ್ ಗಳನ್ನು ಪಡೆದಿದೆ. ಇವು ಹೈಡ್ರಾಲಿಕ್ ಕಾಂಬಿ-ಬ್ರೇಕಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತವೆ. ಮಿಹೋಸ್ ಸ್ಕೂಟರ್ 1,864 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,178 ಎಂಎಂ ಎತ್ತರವಾಗಿದ್ದು, 1,360 ಎಂಎಂ ಉದ್ದದ ವೀಲ್‌ಬೇಸ್, 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.
ನೂತನ ಸ್ಕೂಟರ್, ಜಾಯ್ ಇ-ಕನೆಕ್ಟ್ ಅಪ್ಲಿಕೇಶನ್ ಸೇರಿದಂತೆ ಹಲವು ಹೊಚ್ಚ ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅವುಗಳೆಂದರೆ, ಬ್ಲೂಟೂತ್ ಕನೆಕ್ಷನ್, ರಿವರ್ಸ್ ಮೋಡ್, ಆಂಟಿ-ಥೆಫ್ಟ್ ಸಿಸ್ಟಮ್, ಜಿಪಿಎಸ್. ಈ ಹೊಸ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್, ಮೆಟಾಲಿಕ್ ಬ್ಲೂ, ಸಾಲಿಡ್ ಬ್ಲ್ಯಾಕ್ ಗ್ಲೋಸಿ, ಸಾಲಿಡ್ ಯೆಲ್ಲೋ ಗ್ಲೋಸಿ ಮತ್ತು ಪರ್ಲ್ ವೈಟ್ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಇವು ಗ್ರಾಹಕರಿಗೆ ಇಷ್ಟವಾಗಿರುವುದರಿಂದ ಅತಿ ಹೆಚ್ಚಿನ ಸಂಖ್ಯೆಯ ಬುಕಿಂಗ್ ಪಡೆದಿದೆ ಎಂದು ಹೇಳಬಹುದು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾರ್ಡ್‌ವಿಜಾರ್ಡ್ ಇನ್ನೋವೇಶನ್ಸ್ ಮತ್ತು ಮೊಬಿಲಿಟಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಯತಿನ್ ಗುಪ್ತ ಅವರು, 'ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆ ಮಾಡಿದ ಈ ಸ್ಕೂಟರ್ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್ ಆಗುತ್ತಿರುವುದೇ ಇದಕ್ಕೆ ನಿರ್ದರ್ಶನವಾಗಿದೆ. ಅತ್ಯುನ್ನತ ತಂತ್ರಜ್ಞಾನ ಬಳಸಿ, ಈ ಸ್ಕೂಟರ್ ರೆಡಿ ಮಾಡಲಾಗಿದೆ. ಮಾರ್ಚ್ ತಿಂಗಳಿನಿಂದ ವಿತರಣೆಗಳು ಹಂತ - ಹಂತವಾಗಿ ಪ್ರಾರಂಭವಾಗಲಿದೆ' ಎಂದು ಹೇಳಿದ್ದಾರೆ.
ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಇಷ್ಟರಪಟ್ಟಿಗೆ ಬುಕಿಂಗ್ ಪಡೆಯುತ್ತದೆ ಎಂದು ಕಂಪನಿ ಊಹಿಸಿರಲಿಲ್ಲ. ಆದರೆ, ಗ್ರಾಹಕರಿಂದ ನೀರಿಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ದೇಶದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿಯ ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಬಹುದು. ಮುಂಬರುವ ತಿಂಗಳಲ್ಲಿ ಮಿಹೋಸ್ ವಿತರಣೆಗಳು ಆರಂಭವಾಗಲಿದ್ದು, ಮತ್ತಷ್ಟು ಹೊಸ ಖರೀದಿದಾರರನ್ನು ಈ ಸ್ಕೂಟರ್ ಖರೀದಿಯತ್ತ ಸೆಳೆಯಬಹುದು ಎಂದು ಅಂದಾಜಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








