ಹೋಂಡಾ ದೊಡ್ಡ ಪ್ಲಾನ್... 300 CC ಬೈಕ್‌ಗಳಿಗೆ ಸೆಡ್ಡು ಹೊಡೆಯಲು CBR250RR ಬಿಡುಗಡೆಗೆ ತಯಾರಿ!
ಹೋಂಡಾ ಮೋಟಾರ್ ಸೈಕಲ್ ಇಂಡಿಯಾ CBR 250 RR ಅನ್ನು ತರುವ ಮುನ್ಸೂಚನೆ ನೀಡಿದ್ದಾರೆ. ಭಾರತದಲ್ಲಿ ಇದರ ಪೇಟೆಂಟ್ ಕೂಡ ಮಾಡಲಾಗಿದೆ. ಹೋಂಡಾ CBR250RR ಭಾರತದಲ್ಲಿ ಒಮ್ಮೆ ಬಿಡುಗಡೆಯಾದರೆ ಯಮಹಾ R3 ಮತ್ತು ಕವಾಸಕಿ ನಿಂಜಾ 300 ನಂತಹ ಮೋಟಾರ್ ಸೈಕಲ್‌ಗಳಿಗೂ ಪೈಪೋಟಿ ನೀಡಲಿದೆ.
CBR 250 RR ತನ್ನ ಬಹುತೇಕ ವಿನ್ಯಾಸ ಸ್ಪೂರ್ತಿಯನ್ನು ಸಿಬಿಆರ್ 1000 RR-R ಫೈರ್ ಬ್ಲೇಡ್ ಮಾದರಿಯಿಂದ ಪಡೆದಿದೆ ಎಂದು ಹೇಳಲಾಗುತ್ತಿದೆ. ಏನೀ ಹೆಸರು ಇದರಲ್ಲಿ ಇಷ್ಟೋಂದು ಆರ್‌ಗಳಿವೆ ಎಂದು ನಿಮಗನಿಸಬಹುದು, ಹಾಗೆ ನೋಡಿದರೆ ಸಿಬಿಆರ್ 1000 RR-R ಫೈರ್ ಬ್ಲೇಡ್ ಮಾದರಿಯಲ್ಲಿ ಇನ್ನೂ ಒಂದು ಆರ್ ಹೆಚ್ಚಾಗಿಯೇ ಕಾಣಸಿಗುತ್ತದೆ.

ಆರ್ ಎಂಬುದು ಹೋಂಡಾದ ಒಂದು ಬ್ರಾಂಡ್ ಮಾರ್ಕ್ ಅಥವಾ ಅದರ ಬೈಕ್‌ಗಳ ಪರ್ಫಾಮೆನ್ಸ್ ಕುರಿತ ಮಾರ್ಕ್ ಎಂದು ಸಹ ಹೇಳಬಹುದು. ಉಳಿದಂತೆ ಮುಂಬರುವ ಹೊಸ CBR 250 RR ಡಿಸೈನ್ ಕುರಿತು ಹೇಳುವುದಾದ್ರೆ, ಅದೇ ಅಗ್ರೆಸಿವ್ ಲುಕ್‌ನೊಂದಿಗೆ ಮುಂಭಾಗ ಟ್ವಿನ್ ಹೆಡ್ ಲೈಟ್ ಜೊತೆಗೆ ಎಲ್‌ಇಡಿ ಡಿಆರ್‌ಎಲ್ ಪಡೆದಿದೆ.
ಈ ಡಿಆರ್‌ಎಲ್‌ಗಳು ಹೆಡ್ ಲೈಟ್‌ಗಳ ಮೇಲೆ ಸ್ಟೈಲಿಷ್ ಲುಕ್ ನೀಡಲು ಹುಬ್ಬಗಳಂತೆ ಕಾಣುತ್ತವೆ. ಅದರ ಫೇರಿಂಗ್ ಅನ್ನು ನೋಡುವುದಾದರೆ ಬಹುತೇಕ ಎಂಜಿನ್‌ವರೆಗೆ ಕವರ್ ಮಾಡಿದೆ. ಪೇಟೆಂಟ್‌ನಲ್ಲಿ ಕಂಡುಬರುವಂತೆ ವಿಂಡ್‌ಸ್ಕ್ರೀನ್ ಹಾಗೂ ಅದರ ಮಿರರ್‌ಗಳನ್ನು ನೋಡಿದರೆ ಏರೋ ಡೈನಮಿಕ್ ವಿನ್ಯಾಸ ನೀಡಲು ತುಂಬಾ ಶಾರ್ಪ್ ಡಿಸೈನ್ ಕೊಟ್ಟಿದ್ದಾರೆ ಎಂದು ತಿಳಿಯುತ್ತದೆ.

ಎಂಜಿನ್ ಬಗ್ಗೆ ಹೇಳುವುದಾದರೆ ಹೋಂಡಾ ಸಿಬಿಆರ್ 249 ಸಿಸಿ ಪ್ಯಾರಲಲ್ ಟ್ವಿನ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಇದರ ಬೇಸ್ ಸ್ಟ್ಯಾಂಡರ್ಡ್ ಮಾದರಿಯು 38.2 ಬಿಹೆಚ್ ಪಿ ಪವರ್ ಮತ್ತು 23.3 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಎಸ್‌ಪಿ ರೂಪಾಂತರವು 42 ಬಿಹೆಚ್‌ಪಿ ಪವರ್ ಮತ್ತು 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
6-ಸ್ಪೀಡ್ ಟ್ರಾನ್ಸ್ ಮಿಷನ್, ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಜೊತೆಗೆ ಕ್ವಿಕ್ ಶಿಫ್ಟರ್ ಇದರಲ್ಲಿನ ಗಮನಾರ್ಹ ಅಂಶಗಳಾಗಿವೆ. ಯಮಹಾ ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಆರ್ 3 ಅನ್ನು ಬಿಡುಗಡೆ ಮಾಡಲು ಸಿದ್ಧವಾಗುತ್ತಿದ್ದಂತೆ, ಹೋಂಡಾ ಅಂತಿಮವಾಗಿ ಸಿಬಿಆರ್ 250 ಆರ್ ಆರ್ ಅನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಇದರ ಬೆಲೆಯು ರೂ.3.5 ಲಕ್ಷ (ಎಕ್ಸ್ ಶೋರೂಂ) ಇರಬಹುದು.
ಹೆಚ್ಚುವರಿ ವೈಶಿಷ್ಟ್ಯಗಳನ್ನು ನೋಡುವುದಾದರೆ ಸಿಬಿಆರ್ 250 ಗೋಲ್ಡ್ ಶೋವಾ ಎಸ್ಎಫ್ಎಫ್-ಬಿಪಿ ಯುಎಸ್‌ಡಿ ಫ್ರಂಟ್ ಫೋಕ್ಸ್ ಸಾಕಷ್ಟು ಗಮನ ಸೆಳೆಯುತ್ತವೆ. ಕ್ಲಿಪ್-ಆನ್ ಹ್ಯಾಂಡಲ್ ಬಾರ್‌ಗಳು ಸಾಕಷ್ಟು ಫ್ರಂಟ್-ಎಂಡ್ ಅನುಭವವನ್ನು ನೀಡುತ್ತವೆ. ಸ್ಪ್ಲಿಟ್ ಸೀಟುಗಳನ್ನು ಹೊಂದಿರುವ ಕಡಿದಾದ ಸಬ್ ಫ್ರೇಮ್, ಡ್ಯುಯಲ್-ಬ್ಯಾರೆಲ್ ಎಕ್ಸಾಸ್ಟ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೋಡಬಹುದು.
CBR 250 RR ಸಸ್ಪೆನ್ಷನ್ ಹಾಗೂ ಇತರ ಮುಖ್ಯಾಂಶಗಳನ್ನು ನೋಡುವುದಾದರೆ, ಹಿಂಭಾಗದಲ್ಲಿ ಮೊನೊ-ಶಾಕ್, ಡ್ಯುಯಲ್-ಚಾನೆಲ್ ಎಬಿಎಸ್, ಎರಡೂ ತುದಿಗಳಲ್ಲಿ ಸಿಂಗಲ್ ಪೆಟಲ್ ಡಿಸ್ಕ್, 17 ಇಂಚಿನ ಅಲಾಯ್ ವೀಲ್‌ಗಳು, ಮೂರು ರೈಡಿಂಗ್ ಮೋಡ್‌ಗಳು (ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ +) ಮತ್ತು 14.5 ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.


Click it and Unblock the Notifications








