Ola sales: ಪ್ರಥಮ ಸ್ಥಾನದಲ್ಲಿ ಓಲಾ.. ಹಿಂದೆಂದೂ ಮಾಡಿರದ ದಾಖಲೆ ನಿರ್ಮಾಣ
ದೇಶದಲ್ಲಿ ಓಲಾ ಸ್ಕೂಟರ್‌ಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಹೋದ ಮಾರ್ಚ್ ತಿಂಗಳಲ್ಲಿ ಕಂಪನಿಯು ದಾಖಲೆ ಸಂಖ್ಯೆಯಲ್ಲಿ ಸ್ಕೂಟರ್‌ಗಳನ್ನು ಮಾರಾಟವಾಗಿವೆ. ಹಿಂದೆಂದೂ ಈ ಪ್ರಮಾಣದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸೇಲ್ ಆಗಿರಲಿಲ್ಲ. ಈ ಕುರಿತಂತೆ ಇಲ್ಲಿದೆ ವಿವರ.
ಬೆಂಗಳೂರಿನ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಓಲಾ ಎಲೆಕ್ಟ್ರಿಕ್ (Ola Electric), 2022-23ನೇ ಸಾಲಿನಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ಇವಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಮಾರ್ಚ್ ತಿಂಗಳಲ್ಲಿ (2023) ಬೇರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕ ಕಂಪನಿಗಳನ್ನು ಹಿಂದಿಕ್ಕಿ, 27,000 ಯುನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದು, ಮಾರುಕಟ್ಟೆಯಲ್ಲಿ ಶೇಕಡ 30% ಪಾಲನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಸತತ 7 ತಿಂಗಳು ಮಾರಾಟ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡುರುವ ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗರ್ವಾಲ್ ಅವರು, ಕಂಪನಿಯಿಂದ ದ್ವಿಚಕ್ರ ವಾಹನಗಳ ಮಾರಾಟವನ್ನು ಮತ್ತಷ್ಟು ವೇಗಗೊಳಿಸಲಾಗುವುದು. ಜೊತೆಗೆ ಯಾವುದೇ ರೀತಿಯಲ್ಲಿ ರಾಜಿಯಾಗದೇ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾವುದು. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ನಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಪ್ರಯತ್ನಿಸಲಾಗುವುದು' ಎಂದು ಹೇಳಿದ್ದಾರೆ.
ಓಲಾ ಕಂಪನಿ ದೇಶಾದ್ಯಂತ ಒಟ್ಟು 400ಕ್ಕೂ ಹೆಚ್ಚು ಎಕ್ಸ್ಪೀರಿಯೆನ್ಸ್ ಸೆಂಟರ್ ಗಳನ್ನು ಹೊಂದಿದೆ. ಇತ್ತೀಚೆಗೆ ಪ್ರಮುಖ ನಗರಗಳಲ್ಲಿ ಒಂದೇ ದಿನದಲ್ಲಿ 50ಕ್ಕೂ ಹೆಚ್ಚು ಎಕ್ಸ್ಪೀರಿಯೆನ್ಸ್ ಸೆಂಟರ್ ಸ್ಥಾಪಿಸುವ ಮೂಲಕ ಹೊಸ ಅಧ್ಯಾಯ ಬರೆದಿದೆ. ಇಲ್ಲಿ ಕಂಪನಿ ಕಡೆಯಿಂದ ಗ್ರಾಹಕರಿಗೆ ಸರ್ವಿಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಓಲಾದ ಶೇಕಡ 90% ಸ್ಕೂಟರ್ ಬಳಕೆದಾರರು, ಎಕ್ಸ್ಪೀರಿಯೆನ್ಸ್ ಸೆಂಟರ್ ಗಳ 20 kms ಒಳಗೆ ವಾಸಿಸುತ್ತಿದ್ದಾರೆ.
ಸದ್ಯ, ಭಾರತದಲ್ಲಿ ಓಲಾ, ಎಸ್1 ಏರ್, ಎಸ್1 ಹಾಗೂ ಎಸ್1 ಪ್ರೊ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದೆ. ಮೊದಲಿಗೆ ಟಾಪ್ ಎಂಡ್ ಮಾದರಿ ಓಲಾ, ಎಸ್1 ಪ್ರೊ ಬಗ್ಗೆ ತಿಳಿಯೋಣ. ಇದು ರೂ.129,999 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ. 4kWh ಬ್ಯಾಟರಿ ಪ್ಯಾಕ್ , 8.5 kW ಮೋಟಾರ್ ನಿಂದ ಕಾರ್ಯನಿರ್ವಹಿಸಲಿದ್ದು, ಅತಿಹೆಚ್ಚು 181 km ರೇಂಜ್ ನೀಡಲಿದೆ. ಜೊತೆಗೆ 95km/h ಟಾಪ್ ಸ್ವೀಡ್ ಹೊಂದಿದೆ.
ಓಲಾ, ಎಸ್1 ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. 2kWh ಬ್ಯಾಟರಿ ಪ್ಯಾಕ್ ಪಡೆದಿರುವ ಸ್ಕೂಟರ್, 91 km ರೇಂಜ್ ನೀಡಲಿದ್ದು, 90km/h ಟಾಪ್ ಸ್ವೀಡ್ ಹೊಂದಿದೆ. ರೂ.99,999 ಆರಂಭಿಕ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 3kWh ಬ್ಯಾಟರಿ ಹೊಂದಿರುವ ಸ್ಕೂಟರ್, 141 km ರೇಂಜ್ ಕೊಡಲಿದ್ದು, 95km/h ಗರಿಷ್ಠ ವೇಗವನ್ನು ಪಡೆದಿದೆ. ರೂ.1,09,999 ದರಕ್ಕೆ ಸಿಗುತ್ತದೆ.
ಓಲಾದ ಅಗ್ಗದ ಬೆಲೆಯ ಸ್ಕೂಟರ್ ಎಂದು ಬಿಂಬಿಸಲಾಗಿರುವ ಎಸ್1 ಏರ್ ಬ್ಯಾಟರಿ ಪ್ಯಾಕ್ ಅನುಗುಣವಾಗಿ ಮೂರೂ ರೂಪಾಂತರಗಳಲ್ಲಿ ಸಿಗಲಿದೆ. ಅವುಗಳೆಂದರೆ, 2kWh, 3kWh ಹಾಗೂ 4kWh ಬ್ಯಾಟರಿ ಪ್ಯಾಕ್. ಕ್ರಮವಾಗಿ 85 km, 125 km ಮತ್ತು 165 km ರೇಂಜ್ ನೀಡಲಿವೆ. ಇವುಗಳ ಬೆಲೆ ರೂ.84,999 ದಿಂದ ರೂ.1,09,999 ಲಕ್ಷ ಇದ್ದು, ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿವೆ.
ಒಟ್ಟಾರೆ, ಓಲಾ ಕಂಪನಿ ಬೆಲೆಗೆ ತಕ್ಕಂತೆ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದೆ. ಇದೀಗ, ಕಳೆದ ಮಾರ್ಚ್ ತಿಂಗಳಲ್ಲಿ ಗರಿಷ್ಠ ಸಂಖ್ಯೆ ಸ್ಕೂಟರ್ ಮಾರಾಟ ಮಾಡಿ, ಪ್ರಮುಖ ವಾಹನ ತಯಾರಕ ಕಂಪನಿಗಳಾದ ಹೀರೋ, ಟಿವಿಎಸ್ ಹಾಗೂ ಬಜಾಜ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತದೆ.


Click it and Unblock the Notifications








