Ola: ಬಿಡುಗಡೆಗೂ ಮುನ್ನವೇ 'ಓಲಾ ಎಸ್1 ಏರ್ ಸ್ಕೂಟರ್' ಬೆಂಗಳೂರಿನಲ್ಲಿ ಕಾಣಿಸಿತು.. ಬಿಗ್ ಅಪ್ಡೇಟ್
ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಓಲಾ (Ola) ಜನಪ್ರಿಯತೆಗಳಿಸಿದೆ. ಕಂಪನಿಯು ಮಾರಾಟ ಮಾಡುವ 'ಎಸ್1' ಸರಣಿ ಸ್ಕೂಟರ್‌ಗಳನ್ನು ಈಗಾಗಲೇ ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ, ಅಗ್ಗದ ಬೆಲೆಯ ಎಸ್1 ಏರ್ ಸ್ಕೂಟರ್ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಓಲಾ ಎಲೆಕ್ಟ್ರಿಕ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ಜುಲೈ ತಿಂಗಳೇ ಅಗ್ಗದ ಬೆಲೆಯ 'ಎಸ್1 ಏರ್' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಲಿದೆ. ಆದರೆ, ಲಾಂಚ್ ದಿನಾಂಕದ ಬಗ್ಗೆ ಮಾಹಿತಿಯಿಲ್ಲ. ಅದಕ್ಕೂ ಮೊದಲು ಕಂಪನಿಯು 'ಎಸ್1 ಏರ್' ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬೆಂಗಳೂರಿನಲ್ಲಿ ಟಾರ್ಮ್ಯಾಕ್‌ನಲ್ಲಿ ಪರೀಕ್ಷೆ ನಡೆಸಿದೆ.

ವಿವಿಧ ಬಣ್ಣಗಳ ಆಯ್ಕೆಯನ್ನು ಪಡೆದಿರುವ ಎಸ್1 ಏರ್ ಸ್ಕೂಟರ್‌ಗಳನ್ನು ಟಾರ್ಮ್ಯಾಕ್‌ನಲ್ಲಿ ರೈಡರ್ ಗಳು ವೇಗವಾಗಿ ಓಡಿಸುವ ಮೂಲಕ ಅದರ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದು, ಎಸ್1 ಸರಣಿಯ ಎಂಟ್ರಿ ಲೆವೆಲ್ ಸ್ಕೂಟರ್ ಆಗಿದ್ದು, ಬೆಲೆ ಹಾಗೂ ವಿಶೇಷತೆ ಬಗ್ಗೆ ಕಂಪನಿಯು ಕೆಲವು ತಿಂಗಳ ಹಿಂದೆಯೇ ಬಹುತೇಕ ಮಾಹಿತಿಯನ್ನು ಬಹಿರಂಗಪಡಿಸಿ, ಬುಕ್ಕಿಂಗ್ ಕೂಡ ಶುರು ಮಾಡಿತ್ತು.
ಪ್ರಮುಖವಾಗಿ ಕೇಂದ್ರ ಸರ್ಕಾರ FAME ಸಬ್ಸಿಡಿ ದರಗಳಲ್ಲಿ ಪರಿಷ್ಕರಣೆ ಮಾಡಿದ ಹಿನ್ನೆಲೆ, ಓಲಾ ಎಸ್1 ಏರ್ ರೂ.1.10 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇದು, 3 kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಫುಲ್ ಚಾರ್ಜಿನಲ್ಲಿ 125 km ರೇಂಜ್ ನೀಡುತ್ತದೆ. ಜೊತೆಗೆ 85 km/h ಟಾಪ್ ಸ್ವೀಡ್ ಹೊಂದಿದೆ.
'ಓಲಾ ಎಸ್1 ಏರ್' ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, ಇದರ ಬ್ಯಾಟರಿ 4 ಗಂಟೆ 30 ನಿಮಿಷದಲ್ಲಿ ಚಾರ್ಜ್ ಆಗುತ್ತದೆ. ಈ ಸ್ಕೂಟರ್, ಮೂರು ರೈಡಿಂಗ್ ಮೋಡ್ ಗಳನ್ನು ಹೊಂದಿವೆ. ಅವುಗಳೆಂದರೆ, ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ಸ್. ಜೊತೆಗೆ ಹತ್ತಾರು ವೈಶಿಷ್ಟ್ಯವನ್ನು ಪಡೆದಿದೆ. ಮುಖ್ಯವಾಗಿ 7 ಇಂಚಿನ TFT ಟಚ್‌ಸ್ಕ್ರೀನ್, LED ಲೈಟಿಂಗ್, ಮ್ಯೂಸಿಕ್ ಕಂಟ್ರೋಲ್, ರಿಮೋಟ್ ಅನ್‌ಲಾಕಿಂಗ್, ಸೈಡ್-ಸ್ಟ್ಯಾಂಡ್ ಅಲರ್ಟ್, OTA ಅಪ್ಡೇಟ್ ಅನ್ನು ಹೊಂದಿದೆ.
ಓಲಾ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಸೇಲ್ ಮಾಡುವ ಇತರೆ ಎಸ್1 ಸರಣಿ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಮಿಡ್ ಲೆವೆಲ್ ಆವೃತ್ತಿ, 'ಎಸ್1' ರೂ.1.30 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ. ಇದು, 141 km ರೇಂಜ್ ನೀಡುತ್ತದೆ. ಟಾಪ್ ಎಂಡ್ ಮಾದರಿ, 'ಎಸ್1 ಪ್ರೊ' ಸ್ಕೂಟರ್ ರೂ.1.40 ಲಕ್ಷ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಫುಲ್ ಚಾರ್ಜಿನಲ್ಲಿ 181 km ರೇಂಜ್ ಕೊಡುತ್ತದೆ.
ಸದ್ಯದ ಮಾಹಿತಿ ಪ್ರಕಾರ, ಓಲಾ ಕಂಪನಿ ಭಾರತದಲ್ಲಿ ಎರಡನೇ ಫ್ಯಾಕ್ಟರಿಯನ್ನು ಸ್ಥಾಪಿಸುವ ಕೆಲಸವನ್ನು ಆರಂಭಿಸಿದೆ. ಇದು ದೇಶದ ಅತಿದೊಡ್ಡ ಬ್ಯಾಟರಿ ತಯಾರಿಕ ಘಟಕವಾಗಿದ್ದು, 115 ಎಕರೆಯಲ್ಲಿರುವ (ಸೆಲ್ ಗಿಗಾಫ್ಯಾಕ್ಟರಿ) ಈ ಉತ್ಪಾದನಾ ಘಟಕ ತಮಿಳುನಾಡಿನ ಕೃಷ್ಣಗಿರಿಯಲ್ಲಿದೆ. ಇದರಿಂದ ಕಂಪನಿಯ ದ್ವಿಚಕ್ರ ವಾಹನಗಳ ಉತ್ಪಾದನೆ ಮತ್ತಷ್ಟು ವೇಗಗೊಳ್ಳಲಿದೆ.
ಓಲಾ ಕಂಪನಿ, ಕಳೆದ ಜೂನ್ ತಿಂಗಳಲ್ಲಿ 18,000 ಯುನಿಟ್ ವಾಹನಗಳನ್ನು ಮಾರಾಟ ಮಾಡಿ, ಶೇಕಡ 40% ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ. ಸದ್ಯ, ಈ ತಿಂಗಳೇ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲಿದೆ. ಇದು ಕಡಿಮೆ ಬೆಲೆಗೆ ಖರೀದಿಗೆ ದೊರೆಯುವ ಸಾಧ್ಯತೆಯಿರುವುದರಿಂದ ಗ್ರಾಹಕರಿಗೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಾಗಿವೆ.


Click it and Unblock the Notifications








