Ola Electric: 75,000 ಬುಕ್ಕಿಂಗ್ ಪಡೆದ ಓಲಾ ಎಸ್1 ಸರಣಿ ಇ-ಸ್ಕೂಟರ್‌ಗಳು, 2 ವಾರದಲ್ಲೇ ಪ್ರತಿಸ್ಪರ್ಧಿಗಳಿಗೆ ಶಾಕ್!
ಭಾರತದ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಓಲಾ (Ola) ಖ್ಯಾತಿ ಗಳಿಸಿದ್ದು, ಹಲವು ತಿಂಗಳಿಂದ ಇ-ಸ್ಕೂಟರ್ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇದೀಗ, ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳೇ ಗ್ರಾಹಕರಿಗೆ ಇಷ್ಟವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಓಲಾ ಕಂಪನಿ ತನ್ನ ನೂತನ ಹಾಗೂ ನವೀಕರಿಸಿದ ಎಸ್1 (S1) ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿ, ಎರಡು ವಾರ ಕಳೆಯುವುದರಲ್ಲಿ 75,000ಕ್ಕೂ ಅಧಿಕ ಬುಕ್ಕಿಂಗ್ ಸ್ವೀಕರಿಸಲಾಗಿದೆ ಎಂದು ಘೋಷಣೆ ಮಾಡಿದೆ. ಪ್ರಸ್ತುತ, ಕಂಪನಿಯ ಇ-ಸ್ಕೂಟರ್ ಲೈನ್ಅಪ್ ನಲ್ಲಿ ಜನರೇಷನ್ 2 ಎಸ್1 ಪ್ರೊ (Gen2 S1 Pro), ಎಸ್1 ಎಕ್ಸ್ (S1 X) ಹಾಗೂ ಎಸ್1 ಏರ್ (S1 Air) ಸೇರಿವೆ.

ಓಲಾ ಎಸ್1 ಸರಣಿ ಇ-ಸ್ಕೂಟರ್‌ಗಳು ಈ ಮಟ್ಟಿಗೆ ಬುಕ್ಕಿಂಗ್ ಸ್ವೀಕರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ವಕ್ತಾರರು, 'ಎಸ್1 ಲೈನ್‌ಅಪ್ ಪಡೆದ ಆರ್ಡರ್ ಸಂಖ್ಯೆಯನ್ನು ಕಂಡು ರೋಮಾಂಚನಗೊಂಡಿದ್ದೇವೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿತ್ತು. ಅದಕ್ಕೆ ತಕ್ಕಂತೆ ನಾವು ಕೆಲಸವನ್ನು ಮಾಡುತ್ತಿದ್ದೇವೆ. ನಮ್ಮ ಹೊಸ ಸ್ಕೂಟರ್‌ಗಳು ಅತ್ಯಾಧುನಿಕವಾಗಿದ್ದು, ಯಾರು ಇಂಧನ ಚಾಲಿತ ದ್ವಿಚಕ್ರ ವಾಹನ ಖರೀದಿಸಲು ಮನಸ್ಸು ಮಾಡುವುದಿಲ್ಲ' ಎಂದು ಹೇಳಿದ್ದಾರೆ.
ಓಲಾ ಹೇಳುವಂತೆ ಇಂಧನ ಚಾಲಿತ ಸ್ಕೂಟರ್‌ಗಳಿಗೆ ಹೋಲಿಕೆ ಮಾಡಿದರೆ, ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ನಿರ್ವಹಣಾ ವೆಚ್ಚವು ತುಂಬಾ ಕಡಿಮೆ. ಎಸ್1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಮಾಸಿಕ ರೂ.2,600, ವಾರ್ಷಿಕ 30,000 ಖರ್ಚಾಗುತ್ತದೆ. ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ತಿಂಗಳಿಗೆ ರೂ.1,900 ಹಾಗೂ ವರ್ಷಕ್ಕೆ ರೂ.23,000, ಎಸ್1 ಪ್ರೊಗೆ ಮಾಸಿಕ ರೂ.1,100 ಮತ್ತು ವಾರ್ಷಿಕ ರೂ.13,000 ವ್ಯಯಿಸಬೇಕು.
ಮೊದಲಿಗೆ ನವೀಕರಣಗೊಂಡಿರುವ ಟಾಪ್ ಎಂಡ್ ಮಾದರಿ ಎಸ್1 ಪ್ರೊ ಬಗ್ಗೆ ಮಾತನಾಡೋಣ. ಇದು, ರೂ.1.47 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸಂಪೂರ್ಣ ಚಾರ್ಜಿನಲ್ಲಿ 195 km ರೇಂಜ್ ನೀಡುವ ಸಾಮರ್ಥ್ಯ ಪಡೆದಿದ್ದು, 120 kmph ಟಾಪ್ ಸ್ವೀಡ್ ಹೊಂದಿದೆ. ಜೊತೆಗೆ 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ವಿವಿಧ ಫೀಚರ್ಸ್ ಪಡೆದಿದೆ.
ಸದ್ಯ, ಕಂಪನಿಯ ಮಿಡ್ ಲೆವೆಲ್ ಮಾದರಿ ಗುರುತಿಸಿಕೊಂಡಿರುವ ಎಸ್1 ಏರ್, ರೂ.1.20 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು, 3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 151 km ರೇಂಜ್ ಕೊಡುತ್ತದೆ. ಇದರಲ್ಲಿರುವ BLDC ಹಬ್ ಮೋಟಾರ್ 6 kW (8 bhp) ಗರಿಷ್ಠ ಪವರ್ ಉತ್ಪಾದಿಸುತ್ತದೆ. 90 kmph ಟಾಪ್ ಸ್ವೀಡ್ ಪಡೆದಿದೆ.
ಓಲಾ ಎಸ್1 ಏರ್ ಸ್ಟೆಲ್ಲರ್ ಬ್ಲೂ, ನಿಯಾನ್, ಕೋರಲ್ ಗ್ಲಾಮ್ ಸೇರಿದಂತೆ ಆರು ವಿವಿಧ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದ್ದು, ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ಸ್ ಎಂಬ ರೈಡಿಂಗ್ ಮೋಡ್ ಹೊಂದಿದೆ. 7 ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಒಳಗೊಂಡಂತೆ ವಿವಿಧ ಫೀಚರ್ಸ್ ಪಡೆದಿದ್ದು, ಡ್ರಮ್ ಬ್ರೇಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಓಲಾ ಎಸ್1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, ಎಸ್1 ಎಕ್ಸ್ (2 kWh), ಎಸ್1 ಎಕ್ಸ್ (3 kWh) ಮತ್ತು ಎಸ್1 ಎಕ್ಸ್ ಪ್ಲಸ್. ವೇರಿಯೆಂಟ್ಸ್ ಅನುಗುಣವಾಗಿ ರೂ.80,000 ದಿಂದ ರೂ.1 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿವೆ. ಎಸ್1 ಎಕ್ಸ್ (2 kWh) ಇ-ಸ್ಕೂಟರ್ 91 km ರೇಂಜ್ ನೀಡಲಿದ್ದು, ಎಸ್1 ಎಕ್ಸ್ (3 kWh) ಮತ್ತು ಎಸ್1 ಎಕ್ಸ್ ಪ್ಲಸ್ 151 km ರೇಂಜ್ ಕೊಡಲಿವೆ.
ನೀವು, ಎಕ್ಸ್ (2 kWh), ಎಸ್1 ಎಕ್ಸ್ (3 kWh) ಹಾಗೂ ಎಸ್1 ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ರೂ.999 ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು. ಬಹುತೇಕ ಡಿಸೆಂಬರ್ ವೇಳೆಗೆ ವಿತರಣೆಗಳು ಶುರುವಾಗಲಿದೆ. ಓಲಾ ಕಂಪನಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದ್ದು, ಎಂ1 ಹೆಸರಿನ ನೂತನ ಇ-ಮೋಟಾರ್ ಸೈಕಲ್ ಮುಂದಿನ ವರ್ಷ ಬಿಡುಗಡೆಯಾಗುವ ನೀರಿಕ್ಷೆಯಿದೆ.


Click it and Unblock the Notifications








