Ola scooters: ಓಲಾ ಗ್ರಾಹಕರೇ ಗಮನಿಸಿ.. ಕಂಪನಿಯಿಂದ ಧಿಡೀರ್ ತೀರ್ಮಾನ!
ಭಾರತದಲ್ಲಿ ಓಲಾ (Ola) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, 'ಎಸ್1' ಸರಣಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಸೇಲ್‌ನಲ್ಲಿ ಹಲವು ತಿಂಗಳಿನಿಂದ ಪ್ರತಿಸ್ಪರ್ಧಿ ಕಂಪನಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ತನ್ನ ಕಾರ್ಯತಂತ್ರದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಂತೆ ಕಾಣುತ್ತಿದ್ದು, ಮಹತ್ವದ ತೀರ್ಮಾನ ಮಾಡಿದೆ ಎಂದು ವರದಿಯಾಗಿದೆ.
ಇನ್ಮುಂದೆ ಓಲಾ ಕಂಪನಿ, ತನ್ನ ಎಸ್1 ಏರ್, ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಕೇವಲ 3 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ ಎಂದು ಮಾಧ್ಯಮಗಳು ಹೇಳಿವೆ. ಈ ಸರಣಿಯಲ್ಲಿ 2 kWh (ಎಸ್1 ಏರ್ 4 kWh ಸೇರಿದೆ) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಕೈಬಿಡುತ್ತಿದೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಬಹುತೇಕ ಜುಲೈನಲ್ಲಿ ಓಲಾ ಎಸ್1 ಏರ್ ಸ್ಕೂಟರ್ ವಿತರಣೆ ಶುರುವಾಗಲಿದೆ.

ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಎಸ್1 ಏರ್ 3 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದ್ದು, FAME-II ಸಬ್ಸಿಡಿ ಸೇರಿದಂತೆ ರೂ.1.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಇದರಲ್ಲಿ 4.5 kW ಹಬ್-ಮೌಂಟೆಡ್ ಮೋಟಾರ್ ಬಳಕೆ ಮಾಡಲಾಗಿದೆ. ಸಂಪೂರ್ಣ ಚಾರ್ಜಿನಲ್ಲಿ 125 km (IDC) ರೇಂಜ್ ನೀಡುತ್ತದೆ. 85 kmph ಟಾಪ್ ಸ್ವೀಡ್ ಹೊಂದಿದೆ.
ಮಿಡ್ ಲೆವೆಲ್ ಆವೃತ್ತಿಯಾಗಿರುವ ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಕೂಡ 3 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ದೊರೆಯಲಿದ್ದು, 4 kWh ಬ್ಯಾಟರಿ ಪ್ಯಾಕ್ ಅನ್ನು ಟಾಪ್ ಎಂಡ್ ಮಾದರಿಗೆ ಸೀಮಿತ ಮಾಡಲಾಗದೆ ಎಂದು ವರದಿಯಾಗಿದೆ. ಓಲಾ ಎಸ್1, ರೂ.1.30 ಲಕ್ಷ ( FAME-II ಸಬ್ಸಿಡಿ ಒಳಗೊಂಡು) ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದೆ.
3 kWh ಬ್ಯಾಟರಿ ಪ್ಯಾಕ್ ಪಡೆದಿರುವ ಹೊಸ ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್, 8.5 kW ಸಾಮರ್ಥ್ಯದ ಹಬ್ ಮೋಟಾರ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 128 km ರೇಂಜ್ ನೀಡುತ್ತದೆ. 95 kmph ಟಾಪ್ ಸ್ವೀಡ್ ಹೊಂದಿದೆ. ಈ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್, ನಿಯೋ ಮಿಂಟ್, ಕೋರಲ್ ಗ್ಲಾಮ್, ಲಿಕ್ವಿಡ್ ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
ಟಾಪ್ ಎಂಡ್ ಮಾದರಿ ಓಲಾ ಎಸ್1 ಪ್ರೊ, 4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 8.5 kW ಸಾಮರ್ಥ್ಯದ ಮೋಟಾರ್ ನಿಂದ ಕಾರ್ಯನಿರ್ವಹಿಸುತ್ತದೆ. ಸಂಪೂರ್ಣ ಚಾಜಿನಲ್ಲಿ 181 km ರೇಂಜ್ ನೀಡಲಿದ್ದು, 95km/h ಟಾಪ್ ಸ್ವೀಡ್ ಹೊಂದಿದೆ. ಕೇವಲ 2.9 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯುತ್ತದೆ. ಇದು, ರೂ.1.40 ಲಕ್ಷ ( FAME-II ಸಬ್ಸಿಡಿ) ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಓಲಾ ಎಸ್1 ಪ್ರೊ 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಂತಹ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ನಾಲ್ಕು ರೈಡಿಂಗ್ ಮೋಡ್ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, ನಾರ್ಮಲ್, ಇಕೋ, ಸ್ಪೋರ್ಟ್ ಹಾಗೂ ಹೈಪರ್. ಇನ್ನುಳಿದಂತೆ ಇದರ ಬ್ಯಾಟರಿ ಪ್ಯಾಕ್, ಫುಲ್ ಚಾರ್ಜ್ ಆಗಲು 6.3 ಗಂಟೆ ಬೇಕಾಗುತ್ತದೆ.
ಓಲಾ ಎಲೆಕ್ಟ್ರಿಕ್ ಮೇ ತಿಂಗಳಲ್ಲಿ (2023) ಎಸ್1 ಸರಣಿಯ 35,000 ಯುನಿಟ್ ಸ್ಕೂಟರ್ ಮಾರಾಟ ಮಾಡಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (8,681 ಯುನಿಟ್) ವರ್ಷದಿಂದ ವರ್ಷಕ್ಕೆ (YoY) ಶೇಕಡ 303 ಬೆಳವಣಿಗೆ ಸಾಧಿಸಿದೆ. ಓಲಾದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, 3 kWh ಬ್ಯಾಟರಿ ಪ್ಯಾಕ್ ಪಡೆದಿರುವ ಸ್ಕೂಟರ್ ಗಳನ್ನು ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸುವುದರಿಂದ ಕಂಪನಿ ಈ ನಿರ್ಧಾರ ಮಾಡಿದೆಯಂತೆ.


Click it and Unblock the Notifications








