Ola Electric: ಹೊಸದೊಂದು ದಾಖಲೆ ಮಾಡಿದ ಓಲಾ.. ಯಾರು ಇದನ್ನು ಲೆಕ್ಕ ಹಾಕಿರಲಿಲ್ಲ!
ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರೀ ಪ್ರಮಾಣದಲ್ಲಿ ಖ್ಯಾತಿಗಳಿಸುತ್ತಿವೆ. ಅದರಲ್ಲೂ ಓಲಾ ಸ್ಕೂಟರ್‌ಗಳ ಮಾರಾಟ ವೇಗಕ್ಕೆ ಸರಿ ಸಾಟಿಯೇ ಇಲ್ಲ. ಕಂಪನಿ ದಿನದಿಂದ ದಿನಕ್ಕೆ ತನ್ನ ಸೇಲ್‌ನಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಏಪ್ರಿಲ್ ತಿಂಗಳಲ್ಲಿ ದೊಡ್ಡ ಸಾಧನೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಬೆಂಗಳೂರು ಮೂಲದ ಓಲಾ, ಏಪ್ರಿಲ್ (2023) ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದ್ದು, ಬರೋಬ್ಬರಿ 30,000 ಯುನಿಟ್ ಎಸ್1 ಸರಣಿಯ ಸ್ಕೂಟರ್ ಸೇಲ್ ಮಾಡಿ, ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇಕಡ 40% ಪಾಲನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಮಾರಾಟದಲ್ಲಿ ಸತತ ಎಂಟನೇ ತಿಂಗಳು ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಮಾರ್ಚ್ ತಿಂಗಳಲ್ಲೂ 27,000 ಯುನಿಟ್ ಸ್ಕೂಟರ್ ಮಾರಿತ್ತು.

ಈ ಬಗ್ಗೆ ಮಾತನಾಡಿರುವ ಚೀಫ್ ಮಾರ್ಕೆಟಿಂಗ್ ಆಫೀಸರ್ ಅಂಶುಲ್ ಖಂಡೇಲ್ವಾಲ್ ಅವರು, 'ಇದು ಸ್ಪಷ್ಟವಾಗಿ ICE ಚಾಲಿತ ವಾಹನಗಳ ಯುಗಾಂತ್ಯವನ್ನು ತೋರಿಸುತ್ತದೆ. ಇವತ್ತಿನ ದಿನಮಾನಗಳಲ್ಲಿ ಹೆಚ್ಚಿನ ಗ್ರಾಹಕರು ಇವಿ ಖರೀದಿಯತ್ತ ಮುಖ ಮಾಡಿದ್ದಾರೆ. ನಾವು ಮಾರಾಟವನ್ನು ವೇಗಗೊಳಿಸಲು ಮತ್ತಷ್ಟು ಪ್ರಯತ್ನಿಸುತ್ತೇವೆ. ಬೇಡಿಕೆಗೆ ಅನುಗುಣವಾಗಿ D2C (ಬಿಸಿನೆಸ್ ಟು ಕನ್ಸೂಮರ್) ನೆಟ್ವರ್ಕ್ ಹೆಚ್ಚಿಸುತ್ತೇವೆ' ಎಂದು ಹೇಳಿದ್ದಾರೆ.
ಓಲಾ, ಕಂಪನಿ ತನ್ನ ಗ್ರಾಹಕರಿಗೆ ಸರ್ವಿಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲು ದೇಶಾದ್ಯಂತ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳನ್ನು ಹೊಂದಿದೆ. ಕೆಲವೇ ದಿನಗಳಲ್ಲಿ 500ನೇ ಎಕ್ಸ್ಪೀರಿಯೆನ್ಸ್ ಸೆಂಟರ್ ಅನ್ನು ಲೋಕಾರ್ಪಣೆ ಮಾಡಲಿದೆ. ಜೊತೆಗೆ ಈ ಸೆಂಟರ್ ಸಂಖ್ಯೆಯನ್ನು ಮುಂಬರುವ ಆಗಸ್ಟ್ ತಿಂಗಳೊಳಗೆ 1,000 ಹೆಚ್ಚಿಸಲು ತೀರ್ಮಾನಿಸಿದೆ. ಓಲಾ ಸ್ಕೂಟರ್ ನ 90% ಖರೀದಿದಾರರು, ಎಕ್ಸ್ಪೀರಿಯೆನ್ಸ್ ಸೆಂಟರ್ ಗಳ 20 kms ಒಳಗೆ ವಾಸಿಸುತ್ತಿದ್ದಾರೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಓಲಾ ಎಸ್1 ಸರಣಿಯ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತದೆ. ಮೊದಲಿಗೆ ಎಸ್1 ಏರ್ ಬಗ್ಗೆ ಮಾತನಾಡೋಣ. ಇದು, 2 kWh, 3 kWh ಹಾಗೂ 4 kWh ಎಂಬ ಮೂರು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಕ್ರಮವಾಗಿ ರೂ.84,999, ರೂ.99,999 ಹಾಗೂ ರೂ.1,09,999 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. 85 ಕಿಮೀ - 165 ಕಿಮೀ ರೇಂಜ್ ನೀಡಲಿವೆ.
ಓಲಾ, ಎಸ್1 ಕೂಡ ಹೆಚ್ಚು ಜನಪ್ರಿಯವಾಗಿದೆ. 2 kWh ಬ್ಯಾಟರಿ ಪ್ಯಾಕ್ ಪಡೆದಿರುವ ಸ್ಕೂಟರ್, 91 km ರೇಂಜ್ ಕೊಡಲಿದ್ದು, ರೂ.99,999 ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. 90km/h ಟಾಪ್ ಸ್ವೀಡ್ ಹೊಂದಿದೆ. 3 kWh ಬ್ಯಾಟರಿ ಹೊಂದಿರುವ ಸ್ಕೂಟರ್, ರೂ.1,09,999 ದರಕ್ಕೆ ದೊರೆಯಲಿದ್ದು, 141 km ರೇಂಜ್ ನೀಡಲಿದೆ.
ಓಲಾದ ಟಾಪ್ ಎಂಡ್ ಮಾದರಿ, ಎಸ್1 ಪ್ರೊ ಬಗ್ಗೆ ಹೇಳುವುದಾದರೆ, ಇದು ರೂ.1,24,999 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದ್ದು, 4kWh ಬ್ಯಾಟರಿ ಪ್ಯಾಕ್ ಹೊಂದಿದೆ. ಜೊತೆಗೆ ಅತಿಹೆಚ್ಚು ರೇಂಜ್ ನೀಡುವ ಸಾಮರ್ಥ್ಯ ಪಡೆದಿದ್ದು, ಸಂಪೂರ್ಣ ಚಾಜಿನಲ್ಲಿ 181 km ರೇಂಜ್ ನೀಡಲಿದೆ. ಗರಿಷ್ಠ 95 km/h ಟಾಪ್ ಸ್ವೀಡ್ ಹೊಂದಿದೆ.
ಇನ್ನು, ಓಲಾದ ಏಪ್ರಿಲ್ ತಿಂಗಳ ಮಾರಾಟ ವರದಿಯನ್ನು ಗಮನಿಸಿದಾಗ ಕಂಪನಿಯು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದ್ದು, ಸತತ ಎಂಟನೇ ತಿಂಗಳು ಮೊದಲ ಸ್ಥಾನದಲ್ಲಿ ಮುಂದುವರಿದಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಟಿವಿಎಸ್ ಹಾಗೂ ಎಥರ್ ಕಂಪನಿಗಳನ್ನು ಹಿಂದಿಕ್ಕಿದೆ. ಮುಂಬರುವ ದಿನಗಳಲ್ಲಿ ತನ್ನ ಮಾರಾಟವನ್ನು ಮತ್ತಷ್ಟು ದ್ವಿಗುಣಗೊಳಿಸಲು ಪ್ರಯತ್ನಿಸುತ್ತಿದೆ.


Click it and Unblock the Notifications








